

Zubeen Garg Death: ಗಾಯಕ ಜುಬೀನ್ ಗರ್ಗ್ ಸಾವಿಗೆ ಸಂಬಂಧಿಸಿದಂತೆ ಈಶಾನ್ಯ ಭಾರತ ಉತ್ಸವದ ಆಯೋಜಕ ಶ್ಯಾಮಕಾನು ಮಹಾಂತ ಮತ್ತು ಗರ್ಗ್ ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ ಮಾಡಲಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ (ಸೆ 27) ತಿಳಿಸಿದ್ದಾರೆ.
ಫೇಸ್‌ಬುಕ್ ಲೈವ್ ಮೂಲಕ ವಿಷಯ ಹಂಚಿಕೊಂಡಿರುವ ಸಿಎಂ ಶರ್ಮಾ, ಮಹಾಂತ ಮತ್ತು ಶರ್ಮಾ ಇಬ್ಬರೂ ಅಕ್ಟೋಬರ್ 6 ರಂದು ಗುವಾಹಟಿಯಲ್ಲಿ ಹಾಜರಾಗಿ ತನಿಖಾ ತಂಡದ ಮುಂದೆ ತಮ್ಮ ಹೇಳಿಕೆಗಳನ್ನು ದಾಖಲಿಸಬೇಕು ಎಂದು ಸೂಚನೆ ನೀಡಿದ್ದಾರೆ.
ಸದ್ಯ ದುರ್ಗಾ ಪೂಜೆ ಪ್ರಾರಂಭವಾಗುವುದರಿಂದ, ಈಗಲೇ ಬರಬೇಕೆಂದು ಹೇಳುವುದಿಲ್ಲ, ಆದರೆ, ದಶಮಿಯ ನಂತರ ಅವರು ಬರಲೇಬೇಕು. ಅಕ್ಟೋಬರ್ 6 ರ ಒಳಗೆ ಗುವಾಹಟಿ ಬಂದು ತಮ್ಮ ಹೇಳಿಕೆಗಳನ್ನು ನೀಡಬೇಕು ಎಂದರು. ಒಂದು ವೇಳೆ ಸಿಐಡಿ ತಂಡದ ಮುಂದೆ ಹಾಜರಾಗಲು ಆಗದಿದ್ದರೆ, ನ್ಯಾಯಾಲಯದ ಮೊರೆ ಹೋಗಬಹುದು ಎಂದು ಸ್ಪಷ್ಟಪಡಿಸಿದರು. ಸಾರ್ವಜನಿಕರ ಬೇಡಿಕೆಗಳಿಗನುಗುಣವಾಗಿ, ಅಕ್ರಮ ಚಟುವಟಿಕೆಯ ಆರೋಪಗಳು ಮತ್ತು ಅವರ ಸಾವಿನ ಸುತ್ತಲಿನ ತನಿಖೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ತನಿಖೆಯನ್ನು ಪ್ರಾರಂಭಿಸಲಾಗಿದ್ದು, ಇದಕ್ಕಾಗಿ ಸರ್ಕಾರ ವಿಶೇಷ ಡಿಜಿಪಿ ಎಂ.ಪಿ. ಗುಪ್ತಾ ನೇತೃತ್ವದಲ್ಲಿ ಸಿಐಡಿ ಅಧಿಕಾರಿಗಳನ್ನು ಒಳಗೊಂಡ 10 ಸದಸ್ಯರ ಎಸ್‌ಐಟಿಯನ್ನು ರಚಿಸಿದೆ.
ಗುರುವಾರ (ಸೆ 25) ವಿಶೇಷ ತನಿಖಾ ತಂಡವು ಗುವಾಹಟಿಯಲ್ಲಿರುವ ಶರ್ಮಾ ಅವರ ನಿವಾಸದ ಮೇಲೆ ದಾಳಿ ನಡೆಸಿ ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಗರ್ಗ್ ಸಾವಿಗೆ ಕಾರಣವಾದ ಘಟನೆಗಳ ಬಗ್ಗೆ ಮತ್ತು ಸಿಂಗಾಪುರಕ್ಕೆ ಅವರೊಂದಿಗೆ ತೆರಳಿದವರ ಹಿನ್ನಲೆ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಕಾರ್ಯಕ್ರಮದ ಆಯೋಜಕ ಮಹಾಂತ ಅವರ ಬ್ಯಾಂಕ್ ಖಾತೆಗಳು ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಿಎಂ ತಿಳಿಸಿದ್ದು, ಅವರು ಹೆಚ್ಚು ದಿನಗಳ ಕಾಲ ಹೊರಗೆ ಇರಲು ಸಾಧ್ಯವಿಲ್ಲ, ಮರಣೋತ್ತರ ಪರೀಕ್ಷೆಯ ವರದಿಗಾಗಿ ಸರ್ಕಾರ ಕಾಯುತ್ತಿದೆ ಎಂದು ಹೇಳಿದರು.
ತನಿಖೆಯಲ್ಲಿ ಪಾರದರ್ಶಕತೆ ಖಚಿತಪಡಿಸಿಕೊಳ್ಳಲು, ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಆಯೋಗವನ್ನು ಕೋರಿ ಗುವಾಹಟಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ದೇನೆ ಎಂದು ಬಿಸ್ವಾ ಶರ್ಮಾ ತಿಳಿಸಿದ್ದು, ಎಸ್ಐಟಿ ಸಾವಿಗೆ ಸಂಬಂಧಿಸಿದ ಕಾರಣವನ್ನು ಪತ್ತೆ ಮಾಡಲು ವಿಫಲವಾದರೆ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ಹಸ್ತಾಂತರಿಸಲಾಗುವುದು ಎಂದರು.(ಏಜೆನ್ಸೀಸ್)