Zubeen Garg Death | ಸಿದ್ಧಾರ್ಥರ ಈ ವರ್ತನೆಯಿಂದ ಹೀಗಾಗಿದೆ!..; ಮಹತ್ವದ ಹೇಳಿಕೆ ನೀಡಿದ ನಟಿ ನಿಶಿತಾ ಗೋಸ್ವಾಮಿ

Zubeen Garg Death
Published on

Zubeen Garg Death: ಸೆಪ್ಟೆಂಬರ್ 19 ರಂದು ಸಿಂಗಾಪುರದಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ನಿಧನರಾದ ಗಾಯಕ ಜುಬೀನ್ ಗಾರ್ಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸಾಮಿ ನಟಿ ನಿಶಿತಾ ಗೋಸ್ವಾಮಿ ಶನಿವಾರ (ಸೆಪ್ಟೆಂಬರ್ 27) ಗುಹಾವಟಿಯ ಸಿಐಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.

ಈ ವಿಷಯವಾಗಿ ಮಾತನಾಡಿರುವ ನಿಶಿತಾ, ಜುಬೀನ್ ಅವರನ್ನು ನೋಡಿಕೊಳ್ಳುವುದು ಮ್ಯಾನೇಜರ್​​ ಜವಾಬ್ದಾರಿಯಾಗಿತ್ತು, ಆದರೆ ಅದರಲ್ಲಿ ಸಿದ್ಧಾರ್ಥ ವಿಫಲರಾಗಿದ್ದಾರೆ ಎಂದರು. ತನಿಖೆಗೆ ಸಹಕಾರ ನೀಡುವ ಭರವಸೆಯ ಮಾತುಗಳನ್ನಾಡಿದರು.

ಜುಬೀನ್ ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ, ಸಿಂಗಾಪುರದಲ್ಲಿ ನಡೆದ ಈಶಾನ್ಯ ಭಾರತ ಉತ್ಸವದ ಆಯೋಜಕ ಶ್ಯಾಮಕಾನು ಮಹಾಂತ ಮತ್ತು ಅವರ ಸಾವಿಗೆ ಮುನ್ನ ಜುಬೀನ್ ಅವರೊಂದಿಗೆ ಇದ್ದ ಇತರ 11 ಜನರಿಗೆ ಸಿಐಡಿ ಸಮನ್ಸ್ ಜಾರಿ ಮಾಡಿದೆ ಎಂದು ವರದಿಯಾಗಿದ್ದು, ತನಿಖೆಗೆ ಹಾಜರಾಗಲು 10 ದಿನಗಳ ಗಡುವು ನೀಡಲಾಗಿದೆ, ಹಾಜರಾಗದಿದ್ದರೆ ಲುಕ್ ಔಟ್ ನೋಟಿಸ್ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಈ ವಿಷಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್​ ಹಂಚಿಕೊಂಡಿರುವ ಸಿದ್ಧಾರ್ಥ್, ಹಣಕಾಸಿನ ವದಂತಿಗಳನ್ನು ತಳ್ಳಿಹಾಕಿದ್ದಾರೆ, "ಜುಬೀನ್ ದಾ ಅವರ ಬಹುತೇಕ ಎಲ್ಲಾ ಹಾಡುಗಳು, ಅತಿದೊಡ್ಡ ಬ್ಲಾಕ್‌ಬಸ್ಟರ್‌ಗಳು ಸಹ, ನಾನು ಅವರ ಜೀವನಕ್ಕೆ ಪ್ರವೇಶಿಸುವ ಮೊದಲೇ ಮುಗಿದಿದ್ದವು. ನಿರ್ಮಾಪಕರು ಮತ್ತು ಲೇಬಲ್‌ಗಳು ಕೋಟಿಗಟ್ಟಲೆ ಗಳಿಸುತ್ತಿದ್ದರೂ, ಸಿಂಗಾಪುರದ ಘಟನೆಯ ಮೊದಲು ಮತ್ತು ನಂತರ ನಾನು ಅವರೊಂದಿಗೆ ಇದ್ದೆ, ಅವರಿಗೆ ಸಹಾಯ ಪಡೆಯಲು ಎಲ್ಲ ರೀತಿಯ ಪ್ರಯತ್ನ ಮಾಡಿದ್ದೇನೆ, ನಂತರ ಅವರನ್ನು ಭಾರತಕ್ಕೆ ಕರೆತರಲು ವ್ಯವಸ್ಥೆ ಮಾಡಿದೆ. ಇಷ್ಟಾಗಿಯೂ ಮಾಧ್ಯಮಗಳು ನನ್ನನ್ನು ಅಪರಾಧಿ ಎಂದು ಬಿಂಬಿಸಲು ಪ್ರಾರಂಭಿಸಿದವು ಎಂದಿದ್ದಾರೆ.

ನನಗೆ ಕೊಲೆ ಬೆದರಿಕೆಗಳು, ನಿಂದನೆಗಳು ಬರಲು ಪ್ರಾರಂಭವಾಗಿವೆ, ಸ್ನೇಹಿತರು ಮತ್ತು ಕುಟುಂಬದವರು ಗುವಾಹಟಿಗೆ ಬರದಂತೆ ಒತ್ತಾಯಿಸಿದ್ದಾರೆ ಆದ್ದರಿಂದ ನಾನು ದೆಹಲಿಯಲ್ಲಿಯೇ ಇರಬೇಕಾಯಿತು. ಜುಬೀನ್​​ಅವರನ್ನು ಕಳೆದುಕೊಂಡಿರುವುದು ನನಗೆ ನೋವಾಗಿದ್ದು, ಅದು ಎಂದಿಗೂ ತುಂಬಲಾಗದ ನಷ್ಟ. ಅವರ ಅಂತಿಮ ವಿಧಿವಿಧಾನಗಳಿಗೆ ಗೈರಾಗಿದ್ದಕ್ಕೆ ಮತ್ತು ಆ ಕುಟುಂಬದೊಂದಿಗೆ ನಿಲ್ಲಲು ಸಾಧ್ಯವಾಗದಿರುವಷ್ಟರಮಟ್ಟಿಗೆ ಅಸಹಾಯಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಘಟನೆಯ ಹಿನ್ನಲೆ...

ಸಿಂಗಾಪುರದ ಲಾಜರಸ್ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಮಾಡುವಾಗ ಜುಬೀನ್ ನಿಧನರಾದರು. ಆರಂಭಿಕ ಮಾಹಿತಿಗಳ ಪ್ರಕಾರ ಈಜಾಡುವ ಮುನ್ನ ಲೈಫ್ ಜಾಕೆಟ್ ಧರಿಸಿದ್ದರು ಎಂದು ತಿಳಿದುಬಂದಿದೆ. ಅವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು, ಆದರೂ, ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net