

frog: ಮೇಘಾಲಯದ ಖಾಸಿ ಬೆಟ್ಟದಲ್ಲಿ 2 ಹೊಸ ಪ್ರಭೇದದ ಕಪ್ಪೆಗಳನ್ನು ಪತ್ತೆಯಾಗಿವೆ. ಅಸ್ಸಾಂನ ಡಾನ್ ಬಾಸ್ಕೋ ವಿಶ್ವವಿದ್ಯಾಲಯ, ಹೆಲ್ಪ್ ಅರ್ಥ್ ಹಾಗೂ ಮಿಜೋರಾಂ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರಜ್ಞರು ಸಂಶೋಧನೆ ನಡೆಸಿ ಪತ್ತೆ ಹಚ್ಚಿದ್ದಾರೆ.
ಪಾರಂಪರಿಕ ಕ್ಷೇತ್ರ ಕಾರ್ಯ ವಿಧಾನ, ಆಧುನಿಕ ಜಿನ ಸಂಶೋಧನೆ ಮತ್ತು ಧ್ವನಿಶಾಸ್ತ್ರೀಯ ವಿಶ್ಲೇಷಣೆಯೊಂದಿಗೆ ಸಂಯೋಜಿಸಿ ಹೊಸ ಪ್ರಭೇದದ ಕಪ್ಪೆಗಳೆಂಬುದನ್ನ ದೃಢಪಡಿಸಿದ್ದಾರೆ. ಖಾಸಿ ಜೀವನ ಪದ್ದತಿ ಗೌರವಿಸುವ ಸಲುವಾಗಿ ಅವುಗಳಿಗೆ ಖಾಸಿ ಸಂಸ್ಕೃತಿಯ ಹೆಸರುಗಳನ್ನು ಇಟ್ಟಿದ್ದಾರೆ.
ಒಂದಕ್ಕೆ ‘ರಾರ್ಚೆಸ್ಟೆಸ್ ಜಕಾಯ್ಡ್’, ಮತ್ತೊಂದಕ್ಕೆ ‘ರಾರ್ಚೆಸ್ಟೆಸ್ ಜಾಡೋಹ್’ ಎಂದು ಹೆಸರಿಟ್ಟಿದ್ದಾರೆ. ಖಾಸಿ ಭಾಷೆಯಲ್ಲಿ 'ಜಾಕಾಯ್ಡ್' ಎಂಬ ಪದದ ಅರ್ಥ 'ಕಪ್ಪೆ' ಎಂದಾದರೆ, 'ಜಾಡೋಹ್' ಖಾಸಿ ಕುಟುಂಬಗಳಲ್ಲಿ ಇಷ್ಟಪಡುವ ಸಾಂಪ್ರದಾಯಿಕ ಅಕ್ಕಿ ಮತ್ತು ಮಾಂಸದ ಆಹಾರ ಎನ್ನಲಾಗಿದೆ. ರಾರ್ಚೆಸ್ಟೆಸ್ ಜಾಕಾಯ್ಡ್ ಲಾಬಾದಲ್ಲಿ ಕಂಡು ಬಂದರೆ, ರಾರ್ಚೆಸ್ಟೆಸ್ ಜಾಡೋಹ್ ಲ್ಯಾಂಗ್ಟರ್ ಗ್ರಾಮದಲ್ಲಿ ಪತ್ತೆಯಾಗಿದೆ.
ಈ ಕಪ್ಪೆಗಳು ಮಾನವ ವಾಸಸ್ಥಳಗಳ ಹತ್ತಿರ, ಗಿಡಗಂಟೆಗಳು ಮತ್ತು ಮರಗಳಲ್ಲಿ ಕಂಡು ಬಂದಿದ್ದು, ಪರಿಸರದ ಬದಲಾವಣೆಗಳಿಗೆ ಹೊಂದಿಕೊಳ್ಳಲು ಸಾಮರ್ಥ್ಯ ಹೊಂದಿವೆ. ವಿಶಿಷ್ಟ ಕರೆಗಳು, ಆಕೃತಿ ಹಾಗೂ DNA ಅನುಕ್ರಮಣಿಕೆ ಅವುಗಳನ್ನು ರಾರ್ಚೆಸ್ಟೆಸ್ ಪಾರ್ವುಲಸ್ ಜಾತಿಗಳ ಸಮೂಹಕ್ಕೆ ಸೇರುತ್ತವೆ ಎಂದು ಸಂಶೋಧಕರು ಹೇಳಿದ್ದಾರೆ.
ಅಸ್ಸಾಂ ಡಾನ್ ಬಾಸ್ಕೋ ವಿಶ್ವವಿದ್ಯಾಲಯದ ಪ್ರಾಣಿಶಾಸ್ತ್ರಜ್ಞ ಹೋಲಿನೆಸ್ ವಾಜ್ರಿ ಮಾತನಾಡಿ "ನನ್ನೂರು ಲ್ಯಾಂಗ್ಟರ್‌ನಲ್ಲಿ ಹೊಸ ಪ್ರಭೇದವನ್ನು ಕಂಡುಹಿಡಿದಿದ್ದು ಸ್ಪೂರ್ತಿದಾಯಕ. ನಮ್ಮ ಖಾಸಿ ಕುಟುಂಬಗಳನ್ನು ಒಟ್ಟುಗೂಡಿಸುವ ಆಹಾರ 'ಜಾಡೋಹ್' ಎಂದು ಹೆಸರಿಸುವುದು, ನಮ್ಮ ಸಂಸ್ಕೃತಿ, ಭೂಮಿ ಮತ್ತು ಪ್ರಕೃತಿಯ ನಡುವಿನ ಬಾಂಧವ್ಯವನ್ನು ಗೌರವಿಸುವುದಾಗಿತ್ತು. ಈ ಕಪ್ಪೆ ನಮ್ಮ ಜನರಿಗೆ ಹೆಮ್ಮೆ ಮತ್ತು ಸಂರಕ್ಷಣೆಯ ಸಂಕೇತವಾಗಲಿದೆ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.
ಮೇಘಾಲಯ ಇಂಡೋ-ಬರ್ಮಾ ಜೀವ ವೈವಿದ್ಯೆತೆ ಅಡಿ ಬರುತ್ತದೆ. ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಉಭಯಚರ ಪ್ರಾಣಿಗಳ ಕುರಿತು ಸಂಶೋಧನೆ ನಡೆಯಬೇಕು, ಅದಕ್ಕೆ ಬೇಕಾದ ಕ್ರಮಗಳನ್ನ ಕೈಗೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ. (ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಪಠ್ಯಗಳಿಂದ ಸಂಗ್ರಹಿಸಲಾಗಿದೆ.