ಲಡ್ಕಿ ಬಹಿನ್ ಯೋಜನೆ ಲಾಭ ಪಡೆದ 14 ಸಾವಿರ ಪುರುಷರು: ತನಿಖೆಗೆ ಸುಪ್ರಿಯಾ ಸುಳೆ ಆಗ್ರಹ| Ladki Bahin Yojane

Supriya sule
Published on

Ladki Bahin Yojane: ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಸಬಲೀಕರಣಕ್ಕಾಗಿ ಮಹಾರಾಷ್ಟ್ರ ಸರ್ಕಾರ ಜಾರಿಗೆ ತಂದ ‘ಲಡ್ಕಿ ಬೆಹನ್’ ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು, ನಕಲಿ ದಾಖಲೆ ಸಲ್ಲಿಸಿ 14 ಸಾವಿರ ಪುರುಷರು ಲಾಭ ಪಡೆದಿದ್ದಾರೆ ಎಂದು ಎನ್​ಸಿಪಿ ನಾಯಕಿ ಸುಪ್ರಿಯಾ ಸುಳೆ ಆರೋಪಿಸಿದ್ದಾರೆ.

ಪುಣೆಯಲ್ಲಿ ಈ ಕುರಿತು ಮಾತನಾಡಿರುವ ಸುಪ್ರಿಯಾ ಸುಳೆ,"ಈ ವ್ಯಕ್ತಿಗಳು ಫಾರ್ಮ್‌ಗಳನ್ನು ಹೇಗೆ ಭರ್ತಿ ಮಾಡಿದರು? ಅವರಿಗೆ ಯಾರು ಸಹಾಯ ಮಾಡಿದರು? ನೋಂದಣಿಗಾಗಿ ಯಾವ ಕಂಪನಿಗೆ ಒಪ್ಪಂದವನ್ನು ನೀಡಲಾಯಿತು? ಇದರ ಹಿಂದೆ ದೊಡ್ಡ ಪಿತೂರಿ ಇದೆ. ಸರ್ಕಾರ ಸಣ್ಣ ಪುಟ್ಟ ವಿಷಯಗಳಿಗೆ ಇಡಿ, ಸಿಬಿಐ ತನಿಖೆ ನಡೆಸುತ್ತದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ" ಒತ್ತಾಯಿಸಿದ್ದಾರೆ.

ಸುಪ್ರಿಯಾ ಸುಳೆ ಆರೋಪಕ್ಕೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್, "ಬಡ ಮಹಿಳೆಯರಿಗೆ ಸಹಾಯ ಮಾಡಲು ಲಡ್ಕಿ ಬಹಿನ್ ಯೋಜನೆಯನ್ನು ಪ್ರಾರಂಭಿಸಲಾಗಿದೆ. ಪುರುಷರು ಅದರ ಫಲಾನುಭವಿಗಳಾಗಲು ಯಾವುದೇ ಕಾರಣವಿಲ್ಲ. ಅವರಿಗೆ ನೀಡಿದ ಹಣವನ್ನು ನಾವು ವಾಪಸ್ ಪಡೆಯುತ್ತೇವೆ. ವಾಪಸ್ ಕೊಡಲು ಸಹಕರಿಸದಿದ್ದರೆ, ಮುಂದಿನ ಕ್ರಮ ಕೈಗೊಳ್ಳಲಾಗುವುದು" ಎಂದು ಹೇಳಿದರು.

ಕಳೆದ ವರ್ಷ ಆರಂಭಿಸಲಾಗಿರುವ ಲಡ್ಕಿ ಬೆಹನ್ ಯೋಜನೆ ವಾರ್ಷಿಕ 2.5 ಲಕ್ಷ ರೂಪಾಯಿಗಿಂತ ಕಡಿಮೆ ಆದಾಯ ಇರುವ ಕುಟುಂಬಗಳ 21 ರಿಂದ 65 ವರ್ಷ ವಯಸ್ಸಿನ ಮಹಿಳೆಯರಿಗೆ ತಿಂಗಳಿಗೆ 1500 ರೂ. ನೀಡುವ ಯೋಜನೆಯಾಗಿದೆ. 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗ ಶಿವಸೇನೆ(ಶಿಂಧೆ) ಬಣ ನೇತೃತ್ವದ ಬಿಜೆಪಿ, ಎನ್​ಸಿಪಿ ಬೆಂಬಲಿತ ಮಹಾಯುತಿ ಸರ್ಕಾರ ಜಾರಿಗೆ ತಂದಿತ್ತು. ಒಟ್ಟು 2.25 ಕೋಟಿ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ನಡೆಸಿದ ಲೆಕ್ಕ ಪರಿಶೋಧನೆಯಲ್ಲಿ 14,298 ಪುರುಷರಿಗೆ ಕಳೆದ 10 ತಿಂಗಳಲ್ಲಿ 21.44 ಕೋಟಿ ರೂ. ಪಾವತಿಯಾಗಿರುವುದು ಕಂಡು ಬಂದಿದೆ. ಆನ್​ಲೈನ್​ನಲ್ಲಿ ನೋಂದಣಿಯಲ್ಲಿ ಮಹಿಳೆಯರು ಎಂದು ನಕಲಿ ದಾಖಲೆ ಸಲ್ಲಿಸಿ ಯೋಜನೆ ದುರುಪಯೋಗ ಪಡಿಸಿಕೊಂಡಿದ್ದಾರೆ.

WCD ವರದಿಯ ಪ್ರಕಾರ, ಪುರುಷರು, ಅನರ್ಹ ಫಲಾನುಭವಿಗಳಿಂದಾಗಿ ಈ ಯೋಜನೆಯು ಮೊದಲ ವರ್ಷದಲ್ಲಿ ರಾಜ್ಯ ಸರ್ಕಾರಕ್ಕೆ 1,640 ಕೋಟಿ ರೂ. ನಷ್ಟವನ್ನುಂಟು ಮಾಡಿದೆ ಎಂದು ಅಂದಾಜಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net