

Shubman Gill: ಭಾರತೀಯ ಟೆಸ್ಟ್ ತಂಡದ ನಾಯಕನಾದ ಮೊದಲ ಸರಣಿಯಲ್ಲಿ ಮಾಜಿ ಕ್ಯಾಂಪ್ಟನ್ ವಿರಾಟ್ ಕೊಹ್ಲಿ ದಾಖಲೆಯನ್ನು ಶುಭಮನ್ ಗಿಲ್ ಮುರಿದಿದ್ದಾರೆ. ಇಂಗ್ಲೆಂಡ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ 2ನೇ ಇನಿಂಗ್ಸ್ನಲ್ಲಿ ಗಿಲ್ ಅಜೇಯ 78 ರನ್ ಬಾರಿಸಿದ್ದಾರೆ. ಈ ಮೂಲಕ ಭಾರತದ ಪರ ಟೆಸ್ಟ್ ಸರಣಿಯೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ನಾಯಕ ಎನಿಸಿಕೊಂಡಿದ್ದಾರೆ.
ಇದಕ್ಕೂ ಮುನ್ನ ಈ ದಾಖಲೆಯನ್ನು ವಿರಾಟ್ ಕೊಹ್ಲಿ ಹೆಸರಿನಲ್ಲಿತ್ತು. ಕಿಂಗ್ ಕೊಹ್ಲಿ 2014 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 692 ರನ್ಗಳಿಸಿ ದಾಖಲೆ ನಿರ್ಮಿಸಿದ್ದರು. ಇದೀಗ ಚೊಚ್ಚಲ ಟೆಸ್ಟ್ನಾಯಕತ್ವದಲ್ಲೇ ಗಿಲ್ ಹೊಸ ಇತಿಹಾಸ ನಿರ್ಮಿಸಿದ್ದಾರೆ. 11 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ.
ಶುಭ್ಮನ್ ಗಿಲ್ ಪ್ರಸ್ತುತ ಇಂಗ್ಲೆಂಡ್ ಸರಣಿಯಲ್ಲಿ ಈವರೆಗೆ 697 ರನ್ ಕಲೆಹಾಕಿದ್ದಾರೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಸರಣಿವೊಂದರಲ್ಲಿ ಭಾರತದ ಪರ ಅತ್ಯಧಿಕ ರನ್ ಗಳಿಸಿದ ಟೀಮ್ ಇಂಡಿಯಾ ಕ್ಯಾಪ್ಟನ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಗೆಯೇ ಆಂಗ್ಲರ ನಾಡಿನಲ್ಲಿ ಸರಣಿವೊಂದರಲ್ಲಿ ಅತ್ಯಧಿಕ ರನ್ಗಳಿಸಿದ ಏಷ್ಯನ್ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಗಿಲ್ ಭಾರತದ ದಂತಕಥೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿರುವ ಸರ್ವಶ್ರೇಷ್ಠ ದಾಖಲೆಯತ್ತ ದಾಪುಗಾಲಿಟ್ಟಿದ್ದಾರೆ. ಟೀಮ್ ಇಂಡಿಯಾ ಪರ ಟೆಸ್ಟ್ ಸರಣಿವೊಂದರಲ್ಲಿ ಅತೀ ಹೆಚ್ಚು ರನ್ ಗಳಿಸಿದ ದಾಖಲೆ ಸುನಿಲ್ ಗವಾಸ್ಕರ್ ಹೆಸರಿನಲ್ಲಿದೆ. 1971 ರಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಗವಾಸ್ಕರ್ 774 ರನ್ ಕಲೆಹಾಕಿದ್ದರು. ಇದೀಗ 697 ರನ್ಗಳಿಸಿರುವ ಗಿಲ್ 4ನೇ ಟೆಸ್ಟ್ ಅಥವಾ 5ನೇ ಟೆಸ್ಟ್ ಪಂದ್ಯದಲ್ಲಿ 78 ರನ್ ಬಾರಿಸಿದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ.