

IND vs ENG: ಪ್ರಸಕ್ತ ಮ್ಯಾಂಚೆಸ್ಟರ್ನಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ನ ಮೂರನೇ ದಿನಾಂತ್ಯಕ್ಕೆ ಇಂಗ್ಲೆಂಡ್ 186 ರನ್ಗಳ ಮುನ್ನಡೆಯನ್ನು ಸಾಧಿಸಿದೆ. ಟೀಮ್ ಇಂಡಿಯಾ ಬೌಲರ್ಗಳಿಗೆ ದುಃಸ್ವಪ್ನದಂತೆ ಕಾಡುತ್ತಿರುವ ಆಂಗ್ಲ ಬ್ಯಾಟರ್ಗಳ ಪೈಕಿ ಜೋ ರೂಟ್, ಬೆನ್ ಸ್ಟೋಕ್ಸ್ ಅಬ್ಬರದ ಬ್ಯಾಟಿಂಗ್ ನಡೆಸಿದ್ದಾರೆ.
ಮೂರನೇ ದಿನಾಂತ್ಯಕ್ಕೆ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 7 ವಿಕೆಟ್ಗಳ ನಷ್ಟಕ್ಕೆ 544 ರನ್ ಗಳಿಸಿದೆ. ಅಜೇಯರಾಗಿ ಉಳಿದಿರುವ ಬೆನ್ ಸ್ಟೋಕ್ಸ್ (77) ಮತ್ತು ಲಿಯಾಮ್ ಡಾಸನ್ (21) ಕ್ರೀಸ್ಗೆ ಅಂಟಿ ನಿಂತಿರುವುದು ಟೀಮ್ ಇಂಡಿಯಾಗೆ ಸವಾಲಿನ ಪರಿಸ್ಥಿತಿಯನ್ನು ನಿರ್ಮಿಸಿದೆ. ಈ ವೇಳೆ ಟೀಮ್ ಇಂಡಿಯಾ ನಾಯಕ ಶುಭ್ಮನ್ ಗಿಲ್ ತೆಗೆದುಕೊಂಡ ಕೆಲವು ನಿರ್ಧಾರಗಳು ಸರಿಯಿರಲಿಲ್ಲ ಎಂದು ರವಿಶಾಸ್ತ್ರಿ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಗಿಲ್ ನಾಯಕತ್ವದ ಬಗ್ಗೆ ಕೆರಳಿದ ರವಿಶಾಸ್ತ್ರಿ, ಇಂಗ್ಲೆಂಡ್ ಬ್ಯಾಟಿಂಗ್ಗಿಳಿದ ಸಂದರ್ಭದಲ್ಲಿ ಶುಭಮನ್ ಬಳಸಿದ ತಂತ್ರಗಳನ್ನು ಪ್ರಶ್ನಿಸಿದ್ದಾರೆ. ಈ ಕುರಿತಂತೆ ಮಾತನಾಡಿದ ಅವರು, "ವಾಷಿಂಗ್ಟನ್ ಸುಂದರ್ ತಡವಾಗಿ ಬೌಲಿಂಗ್ ಮಾಡಿದ್ದೇಕೆ?. ಅದೇ ರೀತಿ, ಮೊದಲ ಓವರ್ನಲ್ಲಿ ಅನ್ಶುಲ್ ಕಾಂಬೋಜ್ಗೆ ಹೊಸ ಬಾಲ್ ಅನ್ನು ನೀಡುವ ನಿರ್ಧಾರ ತೆಗೆದುಕೊಂಡಿದ್ದೇಕೆ? ಗಿಲ್ನ ಈ ನಿರ್ಧಾರಗಳು ಇಂಗ್ಲೆಂಡ್ ಮೇಲಿನ ಒತ್ತಡವನ್ನು ಕಡಿಮೆ ಮಾಡಿತು. ಇನ್ನು 4 ವಿಕೆಟ್ಗಳನ್ನು ಪಡೆದು ಮಿಂಚಿದ ಸುಂದರ್ರನ್ನು 67 ಮತ್ತು 69 ಓವರ್ನಲ್ಲಿ ಆಡಿಸಿದ್ದು ಯಾಕೆಂದು ನನಗೆ ಗೊತ್ತಿಲ್ಲ. ಹೀಗೆ ಮಾಡುವುದರಿಂದ ಆಟಗಾರನ ಆತ್ಮವಿಶ್ವಾಸ ಕುಸಿಯುತ್ತದೆ" ಎಂದು ಹೇಳಿದ್ದಾರೆ.
"ಫಾರ್ಮ್ನಲ್ಲಿರುವ ಸುಂದರ್ರನ್ನು, ಮೊದಲ 30 ಮತ್ತು 35 ಓವರ್ಗಳಲ್ಲಿ ಆಡಿಸಬೇಕಿತ್ತು. ಆದರೆ, 69 ಓವರ್ಗಳ ನಂತರ ಅವರಿಗೆ ಬೌಲಿಂಗ್ ಜವಾಬ್ದಾರಿ ಹಸ್ತಾಂತರಿಸಲಾಯಿತು. ಇದನ್ನೆಲ್ಲ ನೋಡಿದರೆ, ಗಿಲ್ ಸರಿಯಾದ ಸಮಯಕ್ಕೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ತಂಡದಲ್ಲಿ ಹಿರಿಯ ಆಟಗಾರರು ಜವಾಬ್ದಾರಿಯುತ ಆಟವನ್ನು ಪ್ರದರ್ಶಿಸಬೇಕು" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).