ಮುಂದಿನ ವರ್ಷ ITR ಫೈಲಿಂಗ್‌ನಲ್ಲಿ 3 ಬದಲಾವಣೆಗಳು! ತೆರಿಗೆ ಕಟ್ಟುವವರಿಗೆ ಇನ್ನಷ್ಟು ಸುಲಭ | Income Tax

ವಿಜಯವಾಣಿ (72)
Published on

Income Tax: ತೆರಿಗೆದಾರರಿಗೆ ಇದು ಶುಭ ಸುದ್ದಿಯೇ. ಆದಾಯ ತೆರಿಗೆ ಮಸೂದೆ 2025 ಶೀಘ್ರದಲ್ಲೇ ಬರಲಿದ್ದು, ಆದಾಯ ತೆರಿಗೆ ಕುರಿತ ಲೋಕಸಭಾ ಆಯ್ಕೆ ಸಮಿತಿ (ಆದಾಯ ತೆರಿಗೆ ಮಸೂದೆ 2025) ಜುಲೈ 21 ರಂದು 4,500 ಪುಟಗಳ ವರದಿಯನ್ನು ಸಲ್ಲಿಸಿದೆ. 1961ರ ಹಳೆಯ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸಲು ಆದಾಯ ತೆರಿಗೆ ಮಸೂದೆ 2025ರಲ್ಲಿ ಮಹತ್ವದ ಬದಲಾವಣೆಗಳನ್ನು ಶಿಫಾರಸು ಮಾಡಿದೆ.

ಈ ಪ್ರಸ್ತಾಪಗಳು ಪ್ರಸ್ತುತ ಸಂಸತ್ತಿನ ಪರಿಶೀಲನೆಯಲ್ಲಿವೆ. ಅತಿ ಮುಖ್ಯವಾಗಿ, ಆದಾಯ ತೆರಿಗೆ ರಿಟರ್ನ್ (ಐಟಿಆರ್) ಪ್ರಕ್ರಿಯೆಯನ್ನು ಸರಳಗೊಳಿಸಲಾಗುತ್ತದೆ. ಮರುಪಾವತಿ ಹಕ್ಕುದಾರರು, ಮನೆ ಖರೀದಿದಾರರು ಮತ್ತು ಸಂಬಳ ಪಡೆಯುವ ನೌಕರರು ಮುಂದಿನ ದಿನಗಳಲ್ಲಿ ಇದರ ನೇರ ಪ್ರಯೋಜನಗಳನ್ನು ಪಡೆಯಲಿದ್ದಾರೆ. ಪ್ರಸ್ತುತ ಆದಾಯ ತೆರಿಗೆ ಭಾಷೆಯನ್ನು ಅರ್ಥಮಾಡಿಕೊಳ್ಳುವುದು ಸಾಮಾನ್ಯ ಜನರಿಗೆ ತುಂಬಾ ಕಷ್ಟಕರವಾಗಿದೆ. ಆದ್ರೆ, ಹೊಸ ಆದಾಯ ತೆರಿಗೆ ಮಸೂದೆ 2025ರಲ್ಲಿ ಈ ತೊಂದರೆ ಕಾಡುವುದಿಲ್ಲ ಎನ್ನಲಾಗಿದೆ.

ಈಗ ಸಾಮಾನ್ಯ ಜನರು ಸಹ ಆದಾಯ ತೆರಿಗೆ ಮಸೂದೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಹೀಗಾಗಿ, ಐಟಿಆರ್ ಫೈಲಿಂಗ್‌ನಲ್ಲಿ ತಪ್ಪುಗಳ ಸಾಧ್ಯತೆ ಕಡಿಮೆಯಾಗಲಿದೆ. ಹೊಸ ಆದಾಯ ತೆರಿಗೆ ಮಸೂದೆ 2025 ಸರಳ ಭಾಷೆಯನ್ನು ಬಳಸಲಿದ್ದು, ಇದು ತೆರಿಗೆದಾರರು ಐಟಿ ನಿಯಮಗಳನ್ನು ಅರ್ಥಮಾಡಿಕೊಳ್ಳಲು ಇನ್ನಷ್ಟು ಸುಲಭಗೊಳಿಸುತ್ತದೆ. ಇದು ತಪ್ಪು ವ್ಯಾಖ್ಯಾನಗಳ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ತೆರಿಗೆದಾರರನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ಹೊಸ ತೆರಿಗೆ ವ್ಯವಸ್ಥೆಯನ್ನು ವಿನ್ಯಾಸಗೊಳಿಸುತ್ತಿರುವುದು ಖುಷಿ ವಿಷಯ.

ಇದರ ಭಾಗವಾಗಿ, ಕೇಂದ್ರವು ಡಿಜಿಟಲ್ ತೆರಿಗೆ ವ್ಯವಸ್ಥೆಯನ್ನು ಗುರಿಯಾಗಿಟ್ಟುಕೊಂಡು 285 ಬದಲಾವಣೆಗಳನ್ನು ಮಾಡಲಿದೆ. ಈ ಬದಲಾವಣೆಗಳನ್ನು ಅನುಮೋದಿಸಿದರೆ, ಅವು ಮುಂದಿನ ಹಣಕಾಸು ವರ್ಷದಿಂದ ಜಾರಿಗೆ ಬರುತ್ತವೆ ಎಂದು ವರದಿಗಳು ತಿಳಿಸಿವೆ.

1. ಐಟಿಆರ್ ತಡವಾಗಿ ಸಲ್ಲಿಸುವುದಕ್ಕೆ ಮರುಪಾವತಿ ದಂಡವಿಲ್ಲ: ಷರತ್ತು 479 ತೆರಿಗೆದಾರರಿಗೆ ಅತ್ಯಂತ ಮುಖ್ಯ. ಪ್ರಸ್ತುತ, ಐಟಿಆರ್ ತಡವಾಗಿ ಸಲ್ಲಿಸುವುದಕ್ಕೆ 1,000 ರೂ. ವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಒಬ್ಬ ವ್ಯಕ್ತಿಯು ಮರುಪಾವತಿಗಾಗಿ ಮಾತ್ರ ಐಟಿಆರ್ ಸಲ್ಲಿಸಿದರೆ, ಸಂಪೂರ್ಣ ಆದಾಯವು ತೆರಿಗೆಗೆ ಒಳಪಡದಿದ್ದರೂ ಸಹ ತಡವಾಗಿ ಸಲ್ಲಿಸುವುದಕ್ಕೆ ಯಾವುದೇ ದಂಡವಿರುವುದಿಲ್ಲ. ಈ ಹೊಸ ಬದಲಾವಣೆ ಜಾರಿಗೆ ಬಂದರೆ, ತೆರಿಗೆ ಪಾವತಿಸದ ಆದಾಯ ಹೊಂದಿರುವ ಲಕ್ಷಾಂತರ ತೆರಿಗೆದಾರರಿಗೆ ಇದು ದೊಡ್ಡ ಪ್ರಯೋಜನವಾಗುತ್ತದೆ.

2. ಮನೆ ಮತ್ತು ಬಾಡಿಗೆ ಆದಾಯದ ಮೇಲೆ ಭಾರಿ ಕಡಿತ: ಮನೆ ಬಾಡಿಗೆಗಳಿಂದ ಬರುವ ಆದಾಯದ ಅಡಿಯಲ್ಲಿ ಎರಡು ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಲಾಗಿದೆ. ಪುರಸಭೆಯ ತೆರಿಗೆಯ ನಂತರದ ಪ್ರಸ್ತುತ ಶೇ.30ರಷ್ಟು ಪ್ರಮಾಣಿತ ಕಡಿತವನ್ನು ಹೊಸ ಕಾನೂನಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಬೇಕು.

ಬಾಡಿಗೆ ಆಸ್ತಿಗಳಿಗೆ ಬಡ್ಡಿ ಕಡಿತ: ಗೃಹ ಸಾಲದ ಬಡ್ಡಿ ಕಡಿತವನ್ನು ಮಾಲೀಕರು ವಾಸಿಸುವ ಆಸ್ತಿಗಳಿಗೆ ಮಾತ್ರವಲ್ಲದೆ ಬಾಡಿಗೆ ಮನೆಗಳಿಗೂ ವಿಸ್ತರಿಸಬೇಕೆಂದು ಸಮಿತಿ ಶಿಫಾರಸು ಮಾಡಿದೆ. ಈ ಹೊಸ ಬದಲಾವಣೆಗಳು ಮಧ್ಯಮ ವರ್ಗದ ಮನೆಮಾಲೀಕರಿಗೆ, ವಿಶೇಷವಾಗಿ ಬಾಡಿಗೆ ಆದಾಯಕ್ಕಾಗಿ ಆಸ್ತಿಯಲ್ಲಿ ಹೂಡಿಕೆ ಮಾಡುವವರಿಗೆ ಪ್ರಯೋಜನವನ್ನು ನೀಡುತ್ತದೆ.

3. ಟಿಡಿಎಸ್/ಟಿಸಿಎಸ್ ಮರುಪಾವತಿ ತ್ವರಿತ: ತೆರಿಗೆದಾರರನ್ನು ನಿರಾಶೆಗೊಳಿಸುತ್ತಿರುವ ಟಿಡಿಎಸ್ ಮತ್ತು ಟಿಸಿಎಸ್‌ಗಾಗಿ ಸರಳೀಕೃತ ಮರುಪಾವತಿ ಪ್ರಕ್ರಿಯೆಯನ್ನು ಜಾರಿಗೆ ತರುವ ಸಾಧ್ಯತೆಯಿದೆ. ತೆರಿಗೆ ನಿಯಮಗಳು ಮತ್ತು ಅಧಿಕೃತ ವಿಳಂಬವನ್ನು ಕಡಿತಗೊಳಿಸಲು ಈಗ ಹೊಸ ಮಸೂದೆಯನ್ನು ರಚಿಸಲಾಗುತ್ತಿದೆ. ತೆರಿಗೆದಾರರು ಯಾವುದೇ ತೊಂದರೆಗಳನ್ನು ಎದುರಿಸದಂತೆ ಹೊಸ ತೆರಿಗೆ ಮಸೂದೆಯನ್ನು ನಿಯಮಗಳೊಂದಿಗೆ ರಚಿಸಲಾಗುತ್ತಿದೆ ಎಂದು ಸಿಬಿಡಿಟಿ ಮುಖ್ಯಸ್ಥರು ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net