

ಬೆಂಗಳೂರು: ಬೆಂಗಳೂರಿನ ವೇಗಾ ಸಿಟಿ ಮಾಲ್ನಲ್ಲಿ ಝೊಮಾಟೊ(Zomato) ಫುಡ್ ಡೆಲಿವರಿ ಸಂಸ್ಥೆ ಇದೀಗ ತನ್ನ ಮೊದಲ ರೆಸ್ಟಿಂಗ್ ಪಾಯಿಂಟ್(Resting Point) ಅನ್ನು ಆರಂಭಿಸಿದೆ.
ಫುಡ್ ಡೆಲಿವರಿ ಮಾಡುವ ಹುಡುಗರಿಗೆ ವಿಶ್ರಾಂತಿ ಪಡೆಯಲು ಈ ಕೇಂದ್ರವನ್ನು ಪ್ರತ್ಯೇಕವಾಗಿ ಸ್ಥಾಪಿಸಿದ್ದು, ಕೇವಲ ಝೊಮಾಟೊ ಸಂಸ್ಥೆಯ ಹುಡುಗರು ಮಾತ್ರ ಈ ರೆಸ್ಟಿಂಗ್ ಪಾಯಿಂಟ್ನಲ್ಲಿ ವಿಶ್ರಾಂತಿ ಪಡೆಯಬಹುದು ಎಂಬುದೇನಿಲ್ಲ! ಬೇರೆ ಸಂಸ್ಥೆಯ ಪುಡ್ ಡೆಲಿವರಿ ಹುಡುಗರು ಕೂಡ ಇಲ್ಲಿನ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳಬಹುದು ಎಂದು ಝೆಮಾಟೋ ಸಂಸ್ಥೆ ತಿಳಿಸಿದೆ.
ಈ ವಿಶ್ರಾಂತಿ ಕೇಂದ್ರ ಬೆಂಗಳೂರಿನಲ್ಲಿ(Bengaluru) ಸ್ಥಾಪನೆಯಾಗುವ ಮೂಲಕ ದಕ್ಷಿಣ ಭಾರತದ ಮೊದಲ ರೆಸ್ಟಿಂಗ್ ಪಾಯಿಂಟ್ ಎಂಬ ಖ್ಯಾತಿಗೆ ಒಳಪಟ್ಟಿದೆ. ರೆಸ್ಟಿಂಗ್ ಪಾಯಿಂಟ್ನ ಉದ್ಘಾಟನೆ ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ(Tejasvi Surya) ಭಾಗವಹಿಸಿದ್ದರು.
ಈ ಬಗ್ಗೆ ತಮ್ಮ ಟ್ವಿಟರ್(Twitter) ಖಾತೆಯಲ್ಲಿ ಬರೆದುಕೊಂಡಿರುವ ಸಂಸದ ತೇಜಸ್ವಿ ಸೂರ್ಯ, "ದಕ್ಷಿಣ ಭಾರತದ ಮೊದಲ ವಿಶ್ರಾಂತಿ ಕೇಂದ್ರವನ್ನು ಝೊಮಾಟೊ ಸಂಸ್ಥೆ ಬೆಂಗಳೂರಿನ ವೇಗಾ ಸಿಟಿ ಮಾಲ್ನಲ್ಲಿ ಸ್ಥಾಪಿಸಿದೆ. ಈ ರೆಸ್ಟಿಂಗ್ ಪಾಯಿಂಟ್ನಲ್ಲಿ ಪ್ರಥಮ ಚಿಕಿತ್ಸೆ, ಕುಡಿಯುವ ನೀರು, ಸ್ವಚ್ಛವಾದ ವಿಶ್ರಾಂತಿ ಕೊಠಡಿಗಳು ಲಭ್ಯವಿದೆ. ಡೆಲಿವರಿ ಹುಡುಗರು ಇಲ್ಲಿ ಬಂದು ವಿಶ್ರಾಂತಿ ಪಡೆಯಲು ಸೂಕ್ತವಾದ ಸ್ಥಳ" ಎಂದು ಟ್ವೀಟ್ನಲ್ಲಿ ಹೇಳಿದ್ದಾರೆ.