ಮಧ್ಯಪ್ರದೇಶದಲ್ಲೂ ಮಹಿಳೆಯರಿಗೆ ಹಣ 'ಗ್ಯಾರಂಟಿ'; ಸ್ತ್ರೀಯರ ಮತ ಸೆಳೆಯಲು ನಗದು ತಂತ್ರ!

Griha Lakshmi
ಕರ್ನಾಟಕದಲ್ಲಿ ಕಾಂಗ್ರೆಸ್ ಘೋಷಿಸಿದ್ದ ಗೃಹಲಕ್ಷ್ಮಿ ಯೋಜನೆ
Published on

ನವದೆಹಲಿ: ಕರ್ನಾಟಕದಲ್ಲಿ ಸ್ಪಷ್ಟ ಬಹುಮತದಿಂದ ಗೆದ್ದಿರುವ ಕಾಂಗ್ರೆಸ್​ನ ಚುನಾವಣಾ ತಂತ್ರಗಳಲ್ಲಿ ಪ್ರಮುಖವಾದದ್ದು ಗ್ಯಾರಂಟಿ. ಕಾಂಗ್ರೆಸ್​ ಗ್ಯಾರಂಟಿ ಹೆಸರಿನಲ್ಲಿ ಪಕ್ಷವು ಐದು ಯೋಜನೆಗಳನ್ನು ಜನರ ಮುಂದಿಟ್ಟಿದ್ದು, ಇದೀಗ ಅವೆಲ್ಲದರ ಅನುಷ್ಠಾನಕ್ಕೆ ಆದೇಶವನ್ನೂ ಜಾರಿ ಮಾಡಿ, ಒಂದೊಂದನ್ನೇ ಕಾರ್ಯರೂಪಕ್ಕೆ ತರುತ್ತಿದೆ.

ಹೀಗೆ ಮಹಿಳೆಯರ ಮತಗಳನ್ನು ಸೆಳೆಯಲು ಮಧ್ಯಪ್ರದೇಶದಲ್ಲೂ ನಗದು ತಂತ್ರ ಬಳಸಲಾಗುತ್ತಿದೆ. ನವೆಂಬರ್​ನಲ್ಲಿ ಅಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಬಿಜೆಪಿ ಈಗಾಗಗಲೇ 'ಲಾಡ್ಲಿ ಬೆಹ್ನಾ' ಯೋಜನೆ ಮೂಲಕ ಮಹಿಳೆಯರಿಗೆ ಮಾಸಿಕ 1,000 ರೂ. ನೀಡಲು ಮುಂದಾಗಿದೆ. ಮಾತ್ರವಲ್ಲ, ಮುಂದಿನ ಕೆಲವು ತಿಂಗಳಲ್ಲಿ ಹಾಗೂ ಚುನಾವಣಾ ಪ್ರಚಾರಗಳಲ್ಲಿ ಇದನ್ನೇ ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಿ ಮತ ಸೆಳೆಯಲು ಯೋಜನೆ ಹಾಕಿಕೊಂಡಿದೆ.

ಇದರ ಬೆನ್ನಿಗೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕೂಡ ಮಹಿಳೆಯರಿಗೆ ಭರಪೂರ ನಗದು ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮಾಸಿಕ 1,500 ರೂ. ನೀಡುವುದಾಗಿ ಅವರು ಭರವಸೆಯನ್ನು ನೀಡಿದ್ದಾರೆ.

ಮಧ್ಯಪ್ರದೇಶದಲ್ಲಿನ 5.39 ಕೋಟಿ ಮತದಾರರ ಪೈಕಿ ಶೇ. 48.2 ಮತದಾರರು ಮಹಿಳೆಯರಿದ್ದಾರೆ. ಮಾತ್ರವಲ್ಲ, ಹೊಸದಾಗಿ ಸೇರ್ಪಡೆಯಾದ 15 ಲಕ್ಷ ಮತದಾರರಲ್ಲಿ 7 ಲಕ್ಷ ಮಂದಿ ಮಹಿಳೆಯರು. ಹೀಗಾಗಿ ಎರಡೂ ಪಕ್ಷಗಳು ಸ್ತ್ರೀಯರ ಮತಗಳ ಮೇಲೆ ಗಮನಹರಿಸಿದ್ದು, ಅದಕ್ಕಾಗಿ ಈ ಕಸರತ್ತು ನಡೆಸುತ್ತಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net