

ಮುಂಬೈ: ಕಳೆದ ಒಂದೆರೆಡು ದಿನಗಳಿಂದ ಮುಂಬೈ ನಗರದಲ್ಲಿ ಧಾರಕಾರ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನಿನ್ನೆ (ಸೆ.25) ಮಳೆಯ ಆರ್ಭಟಕ್ಕೆ ನಗರದ ಮುಖ್ಯ ರಸ್ತೆಗಳು, ಪ್ರದೇಶಗಳು ಜಲಾವೃತಗೊಂಡಿತು. ಇದೇ ಸಮಯದಲ್ಲಿ ಮನೆಯಲ್ಲಿ ಕುಳಿತು ಬಟರ್ ಚಿಕನ್ ಆರ್ಡರ್ ಮಾಡಿದ್ದ ಮಹಿಳೆಯೊಬ್ಬರು, ಮಳೆ ಸಮಯದಲ್ಲೇ ತಮ್ಮಿಷ್ಟದ ಫುಡ್ ಅನ್ನು ಆರ್ಡರ್ ಮಾಡಿದ್ದಾರೆ. ಈ ವೇಳೆ ತನ್ನ ಬೈಕ್ ಕೆಟ್ಟುನಿಂತರು, ನಿಗದಿತ ಸಮಯಕ್ಕೆ ಆತ ಆಹಾರ ತಲುಪಿಸಿರುವುದನ್ನು ಮಹಿಳೆ ತಮ್ಮ ಇನ್ಸ್ಟಾಗ್ರಾಮ್ ಥ್ರೆಡ್ನಲ್ಲಿ ಬರೆದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಿತ್ತಲ್ ಸ್ವಾತಿ ಎಂಬ ಮಹಿಳೆ ಜೊಮ್ಯಾಟೋ ಆನ್ಲೈನ್ ಫುಡ್ ಡೆಲಿವರಿ ಆ್ಯಪ್ನಿಂದ ತಮ್ಮಿಷ್ಟದ ಬಟರ್ ಚಿಕನ್ ಐಟಂ ಅನ್ನು ಆರ್ಡರ್ ಮಾಡಿದ್ದಾರೆ. ಇದೇ ವೇಳೆ ನಗರದ ಸುತ್ತಮುತ್ತ ಧಾರಕಾರ ಮಳೆ ಸುರಿದಿದೆ. ಡೆಲಿವರಿ ಮಾಡುವ ವ್ಯಕ್ತಿ ರಾಹತ್ ಎಂಬುವವರು, ನದಿಗಳಂತೆ ಮುಳುಗಿದ್ದ ರಸ್ತೆಗಳಲ್ಲಿಯೇ ಬೈಕ್ ಓಡಿಸಿಕೊಂಡು ಬಂದಿದ್ದಾರೆ. ಆದ್ರೆ, ಗಾಡಿಯೊಳಗೆ ನೀರು ಹೋಗಿ, ಬೈಕ್ ಕೆಟ್ಟುನಿಂತಿತು. ಇದರಿಂದ ಕಂಗಾಲಾಗದ ಡೆಲಿವರಿ ಬಾಯ್, ಗ್ರಾಹಕರ ವಿಳಾಸಕ್ಕೆ ಕಾಲ್ನಡಿಗೆಯಲ್ಲೇ ತಲುಪಿ. ಆಹಾರದ ಬ್ಯಾಗ್ ಹಸ್ತಾಂತರಿಸಿದ್ದಾರೆ.
ಮಹಿಳೆ ಹೇಳಿಕೊಂಡಿರುವ ಪ್ರಕಾರ, "ನಾವು ಆಹಾರವನ್ನು ಆರ್ಡರ್ ಮಾಡಿದ್ದೆವು. ರಾಹತ್ ಎಂಬ ಡೆಲಿವರಿ ಬಾಯ್, ಮಳೆಗೆ ತಮ್ಮ ಬೈಕ್ ಕೆಟ್ಟುಹೋದರು ಸಹ ಆರ್ಡರ್ ಮಾಡಿದ್ದ ಊಟವನ್ನು ಸರಿಯಾದ ಸಮಯಕ್ಕೆ ತಂದುಕೊಟ್ಟಿದ್ದಾರೆ. ಇಷ್ಟೊಂದು ಅನುಕೂಲ ಹೊಂದಿರುವ ನಾವು ಇಂತಹ ಶ್ರಮಜೀವಿಗಳಿಗೆ ನಿಜವಾಗಲೂ ಒಂದು ಮೆಚ್ಚುಗೆ ಕೊಡಬೇಕು ಹಾಗೂ ಬೆಂಬಲಿಸಬೇಕು, ಧನ್ಯವಾದಗಳು" ಎಂದು ಕೃತಜ್ಞತೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).