

ಬೆಂಗಳೂರು: ಭಾರತೀಯ ನ್ಯಾಯಸಂಹಿತೆ ಅನ್ವಯ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಜೀರೋ ಎಫ್ ಐಆರ್ (ದೇಶದ ಯಾವುದೇ ಠಾಣೆಗೆ ದೂರು ಸಲ್ಲಿಸುವ ಅವಕಾಶ) ಪ್ರಕರಣ ದಾಖಲಿಸಲಾಗಿದೆ.
ವಿಠ್ಠಲ್ ಮಲ್ಯ ರಸ್ತೆ ಯುಬಿ ಟವರ್ಸ್ ಕಟ್ಟಡದಲ್ಲಿ ಇರುವ ಖಾಸಗಿ ಕಂಪನಿಯ ಅಪೂರ್ವ ಪ್ರಕಾಶ್, ಈ ದೂರು ದಾಖಲಿಸಿದ್ದಾರೆ. ಕಂಪನಿ ಕಡೆಯಿಂದ ಹೈದರಾಬಾದ್ ಇಂಟರ್‌ನ್ಯಾಷನಲ್ ಕಾನ್ಫರೆನ್ಸ್ ಹಾಲ್‌ನಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಜು. 9ರಂದು ಅಪೂರ್ವ ಪ್ರಕಾಶ್ ಭಾಗವಹಿಸಿದ್ದರು. ಅದೇ ದಿನ ಸಂಜೆ 5.30ರಲ್ಲಿ ಇವರ ಕೊಠಡಿಯಿಂದ ಲ್ಯಾಪ್‌ಟಾಪ್ ಅನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದರು.
ಬೆಂಗಳೂರಿಗೆ ವಾಪಸ್ ಬರಲು ಟಿಕೆಟ್ ಬುಕ್ ಆಗಿದ್ದರ ಪರಿಣಾಮ ಹೈದರಾಬಾದ್‌ನ ಸ್ಥಳೀಯ ಪೊಲೀಸ್ ಠಾಣೆಗೆ ದೂರು ಕೊಡಲು ಸಾಧ್ಯವಾಗಿರಲಿಲ್ಲ. ಆದರಿಂದ ಅಂದು ಸಂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಪೂರ್ವ ಪ್ರಕಾಶ್ ವಾಪಸ್ ಬಂದಿದ್ದರು. ಬಳಿಕ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಹಾಜರಾದ ಅವರು, ಜೀರೋ ಎಫ್ ಐಆರ್ ಮುಖಾಂತರ ದೂರು ಸಲ್ಲಿಸಿದ್ದರು.
ಇದರ ಮೇರೆಗೆ ಎಫ್ ಐಆರ್ ದಾಖಲಿಸಿದ ಪೊಲೀಸರು, ತನಿಖೆ ಸಲುವಾಗಿ ಕೃತ್ಯ ನಡೆದ ಹೈದರಾಬಾದ್ ಪೊಲೀಸ್ ಠಾಣೆಗೆ ಆನ್‌ಲೈನ್‌ನಲ್ಲಿ ಎ್ಐಆರ್ ದಾಖಲಿಸಿದ್ದಾರೆ.