

Zayn Shiraz: ಪ್ರತಿಭೆ, ಬುದ್ಧಿವಂತಿಕೆ ಯಾರಪ್ಪನ ಆಸ್ತಿಯಲ್ಲ. ಇವುಗಳನ್ನು ಯಾರೊಬ್ಬರು ಕಿತ್ತುಕೊಳ್ಳಲು ಸಾಧ್ಯವೂ ಇಲ್ಲ. ಪ್ರತಿಭೆಗಳು ಅನಾವರಣಗೊಳ್ಳಲು ಒಂದು ವೇದಿಕೆ ಎಷ್ಟು ಮುಖ್ಯವೋ, ಅದಕ್ಕಿಂತ ಹೆಚ್ಚಾಗಿ ಪ್ರತಿಭೆಯನ್ನು ಸಾಬೀತುಪಡಿಸುವ ಧೈರ್ಯವು ಇರಬೇಕು. ಇದಕ್ಕೆ ಯಾವ ವಯಸ್ಸಿನ ಮಿತಿಯಿಲ್ಲ. ಇಲ್ಲಿ ಯಾರು ಬೇಕಾದರೂ ಅಸಾಧ್ಯ ಎನ್ನುವುದನ್ನು ಸಾಧ್ಯವಾಗಿಸಬಹುದು ಎನ್ನುವುದಕ್ಕೆ ಇಲ್ಲೊಬ್ಬ ಐದು ವರ್ಷದ ಪುಟ್ಟ ಪೋರನ ಅತ್ಯದ್ಭುತ ಜ್ಞಾನ ಬಂಡಾರವೇ ಜ್ವಲಂತ ಸಾಕ್ಷಿ.
ವಿಶ್ವಸಂಸ್ಥೆಯ ಮಾನ್ಯತೆ ಪಡೆದ ಒಟ್ಟು 195 ದೇಶಗಳ ಹೆಸರುಗಳನ್ನು ಕೇವಲ 2 ನಿಮಿಷ 14 ಸೆಕೆಂಡುಗಳಲ್ಲಿ ವರ್ಣಮಾಲೆಯ ಪ್ರಕಾರದಲ್ಲಿ ಹೇಳುವ ಮೂಲಕ ಪುಟ್ಟ ಪೋರನ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿಕೊಂಡಿದೆ. ಈ ದಾಖಲೆಗೈದ 5 ವರ್ಷದ ಬಾಲಕನನ್ನು ಉತ್ತರ ಪ್ರದೇಶದ ಮೊರಾದಾಬಾದ್‌ನ ಝೈನ್ ಶಿರಾಜ್ ಎಂದು ಹೇಳಲಾಗಿದೆ. ಬಾಲಕ ತನ್ನ ಕಣ್ಣುಮುಚ್ಚಿಯೇ ಈ ಸಾಧನೆ ಮಾಡಿರುವುದು ಹೆತ್ತವರಲ್ಲಿ ಭಾರೀ ಸಂತಸ ಮನೆ ಮಾಡಿದೆ.
ಅಕ್ಟೋಬರ್ 6, 2019ರಂದು ಡಾ. ಸಿರಾಜ್ ಅಹ್ಮದ್ ಮತ್ತು ಡಾ. ಜೂಹಿ ಅಹ್ಮದ್ ದಂಪತಿಗೆ ಜನಿಸಿದ ಝೈನ್, ನಗರದ ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ಯೂರೋ ಕಿಡ್ಸ್‌ನಲ್ಲಿ ಯೂರೋ ಜೂನಿಯರ್ ತರಗತಿಯ ವಿದ್ಯಾರ್ಥಿ. ಓದುವುದರಲ್ಲಿ ಝೈನ್ ಸದಾ ಕುತೂಹಲಕಾರಿ ಮಗು ಮತ್ತು ಕಲಿಕೆಗೆ ಹೆಚ್ಚು ಆದ್ಯತೆ ನೀಡುವವ ಎಂದು ಅವರ ಪೋಷಕರು ಹೇಳಿದ್ದಾರೆ. ನಾಲ್ಕು ವರ್ಷ ವಯಸ್ಸಿನಲ್ಲೇ ಪ್ರಪಂಚದ ಎಲ್ಲಾ 195 ದೇಶಗಳ ಹೆಸರುಗಳನ್ನು ಸಂಪೂರ್ಣವಾಗಿ ಕಂಠಪಾಠ ಮಾಡಿದ್ದನು. ಗೇಮ್ಸ್ ಆಡಲು ಹಾಗೂ ಮತ್ತಿತ್ತರ ವಿಷಯಗಳಿಗೆ ಫೋನ್ ಉಪಯೋಗಿಸದ ಝೈನ್, ಅದರಲ್ಲಿ ಲಭ್ಯವಾಗುವ ಅಂತ್ಯವಿಲ್ಲದ ಜ್ಞಾನದ ಮೂಲವನ್ನು ತನ್ನ ವಿಚಾರ ಗ್ರಹಿಕೆಗಾಗಿ ಬಳಕೆ ಮಾಡುತ್ತಾನೆ ಎಂದು ಹೆತ್ತವರು ಹೆಮ್ಮೆಯಿಂದ ತಿಳಿಸಿದ್ದಾರೆ.
ಡಿಸೆಂಬರ್ 23, 2024ರಂದು ಫರಿದಾಬಾದ್‌ನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಝೈನ್ ಅವರ ಹೆಸರನ್ನು ದಾಖಲಿಸಲಾಯಿತು. ಮಗನ ಸಾಧನೆಗೆ ಕುಟುಂಬ, ಶಾಲೆ ಮತ್ತು ಇಡೀ ನಗರವೇ ಹೆಮ್ಮೆ ಪಡುತ್ತಿದ್ದು, ಪ್ರಶಂಸೆಗಳ ಮಹಾಪೂರವೇ ಹರಿದುಬರುತ್ತಿದೆ ಎಂದು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ. ಪಾಠಗಳ ಬಗ್ಗೆ ಅವನ ಉತ್ಸಾಹ ಮತ್ತು ಹೊಸ ವಿಷಯಗಳ ಕಲಿಕೆ ಆತ ಕೊಡುವ ಪ್ರಾಮುಖ್ಯತೆಯೇ ಇಂದು ಅವನು ಈ ಎತ್ತರಕ್ಕೆ ಏರಲು ಮುಖ್ಯ ಕಾರಣ ಎಂದು ಝೈನ್ ಶಿಕ್ಷಕರು ಹೇಳಿದ್ದಾರೆ,(ಏಜೆನ್ಸೀಸ್).