IIT Baba: ಮಹಾಕುಂಭ ಮೇಳ ಶುರುವಾದ ಮೊದಲ ದಿನದಿಂದಲೂ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ಐಐಟಿ ಬಾಬಾ ಎಂದೇ ಖ್ಯಾತಿ ಪಡೆದಿರುವ ಅಭಯ್ ಸಿಂಗ್, ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಜನರ ಆಕರ್ಷಣಾ ಕೇಂದ್ರವಾಗಿ ಗಮನ ಸೆಳೆಯುತ್ತಿದ್ದಾರೆ. ಅಪಾರ ಜ್ಞಾನ, ಹಲವು ವಿದ್ಯೆಗಳಲ್ಲಿ ಪಂಡಿತರಾಗಿರುವ ಅಭಯ್ ಸಿಂಗ್ (ಐಐಟಿ ಬಾಬಾ), ಹೆಚ್ಚಿನ ಸಂಬಳದ ಉದ್ಯೋಗವನ್ನೆಲ್ಲ ಬಿಟ್ಟು ಆಧ್ಯಾತ್ಮದತ್ತ ಮುಖ ಮಾಡಿರುವುದು ಅವರ ಪೋಷಕರಲ್ಲಿ ಅತೀವ ನೋವನ್ನು ಉಂಟುಮಾಡಿದೆ. ಜಾಲತಾಣಗಳಲ್ಲಿ ವೈರಲ್ ಆಗಿರುವ ಐಐಟಿ ಬಾಬಾ ತನ್ನ ವೈಚಾರಿಕತೆ, ಅಧ್ಯಯನ, ಅಪಾರ ಜ್ಞಾನಕ್ಕೆ ಹೆಸರುವಾಸಿ ಆಗಿದ್ದರೂ ತನ್ನ ತಂದೆ-ತಾಯಿಯ ಕಣ್ಣೀರಿಗೆ ಕಾರಣರಾಗಿರುವುದು ಸದ್ಯ ಅನೇಕರನ್ನು ಗೊಂದಲಕ್ಕೆ ದೂಡಿದೆ.
ಇದನ್ನೂ ಓದಿ: ಬರಲಿದೆ “ಜೈಲರ್ 2′; ಸಂಕ್ರಾಂತಿ ಹಬ್ಬಕ್ಕೆ ಸೀಕ್ವೆಲ್ ಘೋಷಿಸಿದ ನಿರ್ದೇಶಕ ನೆಲ್ಸನ್
ಹೆತ್ತವರಿಂದ ದೂರ
ತಮ್ಮ ಪುತ್ರ ಅಭಯ್ ಸಿಂಗ್ನನ್ನು ಮನೆಗೆ ಹಿಂತಿರುಗಿ ಬರುವಂತೆ ಕೇಳಿಕೊಂಡ ಪೋಷಕರಿಗೆ ಐಐಟಿ ಬಾಬಾ, ನಾನು ಮನೆಗೆ ವಾಪಾಸ್ ಬರಲು ಸಾಧ್ಯವಿಲ್ಲ. ಅದರಲ್ಲೂ ಸನ್ಯಾಸತ್ವ ತೆಗೆದುಕೊಂಡ ನಂತರ ಇದು ಅಸಾಧ್ಯ ಎಂದು ತಂದೆ ಕರಣ್ ಗ್ರೆವಾಲ್ ಬಳಿ ಹೇಳಿದ್ದಾರೆ. ಮನೆಯ ಜವಾಬ್ದಾರಿ ಹೊರಬೇಕಾದ ಮಗನೇ ತಮ್ಮಿಂದ ದೂರ ಹೋಗಿರುವಾಗ ನಾವೇನು ಮಾಡಲು ಸಾಧ್ಯವಾಗ್ತಿಲ್ಲ. ಮನೆಗೆ ಬರಲು ಹೇಳಿದ್ರು ಕೂಡ ಅದನ್ನು ಕಡೆಗಣಿಸಿ ಮಾತನಾಡಿದ್ದಾನೆ ಎಂದು ಪೋಷಕರು ಭಾವುಕರಾಗಿದ್ದಾರೆ.
ಮದುವೆ ಬೇಡ
ಇನ್ನು ಈ ವಿಷಯ ವೈರಲ್ ಆದ ಜಾಲತಾಣಗಳಲ್ಲಿಯೇ ಚರ್ಚೆಗೆ ಗ್ರಾಸವಾಗಿದ್ದು, ಇಷ್ಟೊಂದು ಓದಿಕೊಂಡು, ಹಲವು ವಿದ್ಯೆಗಳಲ್ಲಿ ಪಂಡಿತರಾಗಿ, ದೊಡ್ಡ ಸಂಸ್ಥೆಯ ಕೆಲಸ ಬಿಟ್ಟು ಸನ್ಯಾಸತ್ವ ತೆಗೆದುಕೊಳ್ಳುವ ಉದ್ದೇಶವೇನು? ವಿದ್ಯಾವಂತರಾದ ಅಭಯ್, ಹೆತ್ತವರನ್ನು ತೊರೆದು ಆಧ್ಯಾತ್ಮದತ್ತ ಮುಖ ಮಾಡಲು ಕಾರಣವೇನು? ಎಂಬ ಪ್ರಶ್ನೆಗಳು ವ್ಯಾಪಕವಾಗಿ ಕೇಳಿಬಂದಿತ್ತು. ಕಡೆಗೂ ಈ ಎಲ್ಲಾ ಪ್ರಶ್ನೆಗಳಿಗೂ ಅವರಿಂದಲೇ ಉತ್ತರ ಸಿಕ್ಕಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅಭಯ್ ಸಿಂಗ್, ಬಾಲ್ಯದಲ್ಲಿ ನಾನು ನೋಡಿದ ಕೌಟುಂಬಿಕ ಕಲಹ, ಮಾನಸಿಕ ಹಿಂಸೆಯೇ ಇಂದು ನನ್ನ ಆಧ್ಯಾತ್ಮಿಕ ಹಾದಿಗೆ ದೊಡ್ಡ ಕಾರಣ. ತಂದೆ-ತಾಯಿ ಮಧ್ಯೆ ನಡೆಯುತ್ತಿದ್ದ ಜಗಳಗಳೇ ಸನ್ಯಾಸತ್ವ ಪಡೆಯಲು ಪ್ರಭಾವ ಬೀರಿತು ಎಂದರು.
ಏಕಾಂತ ಜೀವನ
“ಹೆತ್ತವರ ನಿರಂತರ ಜಟಾಪಟಿಗಳು ನನ್ನನ್ನು ಆಘಾತಕ್ಕೆ ದೂಡಿತು. ಬಾಲ್ಯದ ಬೆಳವಣಿಗೆಯಲ್ಲಿ ಮನೆಯಲ್ಲಿನ ಕಲಹಗಳಿಂದ ತಪ್ಪಿಸಿಕೊಳ್ಳಲು ನಾನು ತಡರಾತ್ರಿಯಲ್ಲಿ ಓದುತ್ತಿದ್ದೆ. ಇಂದು ನಾನು ಮದುವೆಯಾಗದಿರಲು ಪೋಷಕರ ಜಗಳಗಳೇ ಕಾರಣ. ಅದನ್ನೆಲ್ಲ ಕಣ್ಣಿಂದ ನೋಡಿದ ಮೇಲೆ ದಾಂಪತ್ಯ ಜೀವನದಿಂದ ದೂರ ಉಳಿಯಬೇಕು ಅನಿಸಿತು. ನೆಮ್ಮದಿ,ಶಾಂತಿ, ಏಕಾಂತ ಜೀವನವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದೆನಿಸಿತು. ಹೀಗಾಗಿ ಸನ್ಯಾಸತ್ವ ತೆಗೆದುಕೊಂಡೆ” ಎಂದು ಹೇಳಿದ್ದಾರೆ,(ಏಜೆನ್ಸೀಸ್).
ದಯವಿಟ್ಟು ಮನೆಗೆ ವಾಪಾಸ್ ಬಾ… ಪೋಷಕರ ಮನವಿಗೆ ವೈರಲ್ ಐಐಟಿ ಬಾಬಾ ಕೊಟ್ಟ ಉತ್ತರವಿದು, ತಾಯಿ ಕಣ್ಣೀರು | IIT Baba