

ವಿಜಯಪುರ: ಈ ಬಾರಿಯ ದಸರಾ ಹಬ್ಬ ಮುಕ್ತಾಯವಾಗುತ್ತಿದ್ದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ (CM Siddaramaiah) ಅವರು ರಾಜೀನಾಮೆ ಕೊಡುವುದು ಖಚಿತ. ಈ ಬಗ್ಗೆ ದಿನಾಂಕ ಕೂಡ ನಿಗದಿಯಾಗಿದೆ. ಕಾಂಗ್ರೆಸ್ ಹೈಕಮಾಂಡ್ನಲ್ಲಿ ಇದರ ಕುರಿತು ಚರ್ಚೆಯೂ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಸ್ಫೋಟಕ ಹೇಳಿಕೆ ನೀಡಿದ್ದರು. ಇದೀಗ ಈ ಹೇಳಿಕೆಗೆ ತಿರುಗೇಟು ನೀಡಿರುವ ವಕ್ಫ್ ಮತ್ತು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ (Zameer Ahmed), ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರು ರಾಜೀನಾಮೆ ಕೊಡುವುದಿಲ್ಲ ಎಂದು ಹೇಳಿದರು.
"ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಪರ ಇದೆ. ಹೀಗಾಗಿ ಯಾವುದೇ ಕಾರಣಕ್ಕೂ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲ್ಲ. ದಸರಾ ಹಬ್ಬ ಆದ ಬಳಿಕ ತಮ್ಮ ಕುರ್ಚಿ ಬಿಟ್ಟುಕೊಡ್ತಾರೆ ಎಂದು ಹೇಳಲು ವಿಜಯೇಂದ್ರ ಯಾರು? 'ಹೂ ಇಸ್ ವಿಜಯೇಂದ್ರ" ಎಂದು ಆಂಗ್ಲ ಭಾಷೆಯಲ್ಲಿ ಕೇಳಿದರು.
"ವಿಜಯೇಂದ್ರ ಕಾಂಗ್ರೆಸ್ ಹೈಕಮಾಂಡಾ? ಅವರು ಹೇಳಿದ ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಾ? ನಮ್ಮ ಪಕ್ಷದ ಹೈಕಮಾಂಡ್ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರು ನೀವು ಯಾವುದೇ ಕಾರಣಕ್ಕೂ ರಾಜೀನಾಮೆ ಘೋಷಿಸಬಾರದು ಎಂದು ಸ್ಪಷ್ಟವಾಗಿ ಅವರಿಗೆ ತಿಳಿಸಿದ್ದಾರೆ" ಎಂದರು.
"ಸತೀಶ್ ಜಾರಕಿಹೊಳಿ ಕಾರ್ಯಕ್ರಮವೊಂದರಲ್ಲಿ ಮುಂದಿನ ಸಿಎಂ ಸತೀಶ್ ಅವರು ಎಂಬ ಕೂಗು ಕೇಳಿ ಬಂದ ಬಗ್ಗೆ ಪ್ರತಿಕ್ರಿಯಿಸಿದ ಜಮೀರ್, ಅಭಿಮಾನಿಗಳು ಕೂಗುವುದು ಸಾಮಾನ್ಯ. ಅವರೆಲ್ಲ ಜೈಕಾರ ಹಾಕಿದ ತಕ್ಷಣ ಮುಖ್ಯಮಂತ್ರಿಗಳು ಆಗಿ ಬಿಡುತ್ತಾರಾ? ನನ್ನ ಅಭಿಮಾನಿಗಳು ಕೂಡ ಕೂಗುತ್ತಾರೆ. ಹಾಗಂತ ನಾನು ಸಿಎಂ ಆಗ್ತೀನಾ?" ಎಂದು ತಿರುಗೇಟು ನೀಡಿದರು.