ಕರೊನಾ ಬಗ್ಗೆ ಕ್ಯಾರೇ ಇಲ್ಲ- ಚೀನಾದಲ್ಲಿ ನಡೀತಿದೆ ಬೌಬೌ ಬಿರಿಯಾನಿ ಫೆಸ್ಟಿವಲ್​!

Dog meat Festival 2020
Published on

ಬೀಜಿಂಗ್​: ಕರೊನಾ ಕೋವಿಡ್ 19 ವೈರಸ್​ ಉಗಮ ಸ್ಥಾನವೆಂದು ಪರಿಗಣಿಸಲ್ಪಟ್ಟಿರುವ ವುಹಾನ್​ನಿಂದ ಕೇವಲ 1,200 ಕಿ.ಮೀ. ಅಂತರದಲ್ಲಿರುವ ಯುಲಿನ್​ ನಲ್ಲಿ ಈಗ ಹತ್ತು ದಿನಗಳ ಡಾಗ್ ಮೀಟ್ ಫೆಸ್ಟಿವಲ್​ ಸಂಭ್ರಮವಂತೆ! ಯುಲಿನ್​ನಲ್ಲಿರುವ ಒಂದು ಬೀದಿಯನ್ನು ಜಗತ್ತು ಗುರುತಿಸುವುದೇ ಡಾಗ್ ಮೀಟ್ ಸ್ಟ್ರೀಟ್ ಎಂದು. ಕರೊನಾ ಸೋಂಕು ಜಗತ್ತನ್ನೇ ತಲ್ಲಣಗೊಳಿಸಿರುವ ಈ ಸಂದರ್ಭದಲ್ಲಿ ಈ ಫೆಸ್ಟಿವಲ್ ನಡೆಸುತ್ತಿರುವುದಕ್ಕೆ ಪ್ರಾಣಿ ಹಕ್ಕು ಸಂಘಟನೆಯವರು ತೀವ್ರ ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆಯನ್ನು ನಡೆಸಿದ್ದರು. ಆದರೆ ಅವರದು ಅರಣ್ಯ ರೋಧನವಾಗಿದೆ.

ಮೇಲ್ ಆನ್​ಲೈನ್ ವರದಿ ಪ್ರಕಾರ, ಚೀನಾದ ಗುವಾನ್​ಗ್ಸಿ ಪ್ರಾಂತ್ಯ ಕೃಷಿ ಚಟುವಟಿಕೆಗೆ ಹೆಸರುವಾಸಿ. ಆದರೆ, ಇದೇ ಪ್ರಾಂತ್ಯದ ಯುಲಿನ್​​ ಮಾತ್ರ ಡಾಗ್​ ಮೀಟ್ ಫೆಸ್ಟಿವಲ್ ಮೂಲಕ ಗಮನಸೆಳೆದಿದೆ. ಕರೊನಾ ಇದ್ದಾಗ್ಯೂ ಇಲ್ಲಿ ಯಾರೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ಮಾಸ್ಕ್ ಧರಿಸದೆ ಅಡ್ಡಾಡುತ್ತಿದ್ದಾರೆ. ರಸ್ತೆ ಬದಿಯಲ್ಲೇ ನಾಯಿಗಳನ್ನು ನೇತುಹಾಕಲಾಗಿದ್ದು, ಅದರ ಖಾದ್ಯಗಳನ್ನು ತಯಾರಿಸಿ ಉಣಬಡಿಸುತ್ತಿದ್ದಾರೆ. ಕರೊನಾ ಸೋಂಕಿನ ಭೀತಿ, ಫೆಸ್ಟಿವಲ್​ನ ಹೆಸರು ಬದಲಾವಣೆ ಇತ್ಯಾದಿಗಳ ಕಾರಣದಿಂದಾಗಿ ಗ್ರಾಹಕರ ಸಂಖ್ಯೆ ಕಡಿಮೆಯಾಗಿದೆ ಎನ್ನುತ್ತಿದ್ದಾರೆ ವ್ಯಾಪಾರಿಗಳು.

ಯುಲಿನ್ ಸಮ್ಮರ್ ಸೊಲ್​ಸ್ಟಿಸ್ ಫೆಸ್ಟಿವಲ್ ಎಂದು ಈ ಸಲ ಹೆಸರು ಬದಲಾವಣೆ ಮಾಡಿಕೊಂಡಿದ್ದು, ಡಾಗ್ ಮೀಟ್ ಸ್ಟ್ರೀಟ್​ನಲ್ಲಿ ಪೊಲೀಸ್ ಅಧಿಕಾರಿಗಳನ್ನು ಸರ್ಕಾರ ನಿಯೋಜಿಸಿದೆಯಾದರೂ ಅವರೇನೂ ಮಾಡುತ್ತಿಲ್ಲ. ಜನರಲ್ಲಿ ಜಾಗೃತಿ ಮೂಡಿಸುವ ಅಥವಾ ಎಚ್ಚರಿಸುವ ಕೆಲಸವನ್ನು ಮಾಡುತ್ತಿಲ್ಲ ಎಂಬುದು ಸಾಮಾಜಿಕ ಕಾರ್ಯಕರ್ತರ ಕಳಕಳಿ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net