ಗಡಿ ಪರಿಸ್ಥಿತಿ ಕುರಿತು ಕೇಂದ್ರ ತಪ್ಪು ಮಾಹಿತಿ ನೀಡಿದೆ ಎಂದ ಮನಮೋಹನ್ ಸಿಂಗ್

PM JPG
Published on

ನವದೆಹಲಿ : ಲಡಾಖ್ ಗಡಿಯಲ್ಲಿ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸದಿದ್ದರೆ ಅದು ಮತ್ತಷ್ಟು ಗಂಭೀರತೆಗೆ ಕಾರಣವಾಗಬಹುದು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಂಗಳವಾರ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇಂದು ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಕೋವಿಡ್-19 ಅನ್ನು ಧೈರ್ಯ, ಪ್ರಮಾಣ ಮತ್ತು ಶ್ರಮದಿಂದ ನಿಭಾಯಿಸದಿದ್ದಕ್ಕಾಗಿ ಕೇಂದ್ರದ ವಿರುದ್ಧ ಹರಿಹಾಯ್ದರು.

ನಂತರ ಅವರು ಇಂಡೋ-ಚೀನಾ ಗಡಿ ವಿವಾದದ ಕುರಿತು ಮಾತನಾಡಿ, "ಗಡಿಯಲ್ಲಿನ ಬಿಕ್ಕಟ್ಟನ್ನು ವ್ಯವಸ್ಥಿತವಾಗಿ ನಿಭಾಯಿಸದಿದ್ದರೆ ಅದು ಗಂಭೀರ ಪರಿಸ್ಥಿತಿಗೆ ಕಾರಣವಾಗಬಹುದು ಎಂದರು.

ಇದೇ ಸಂದರ್ಭದಲ್ಲಿ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮಾತನಾಡಿ ಗಡಿ ಪರಿಸ್ಥಿತಿಯನ್ನು "ಪೂರ್ಣ ಪ್ರಮಾಣದ ಬಿಕ್ಕಟ್ಟು" ಎಂದು ಬಣ್ಣಿಸಿದರು ಮತ್ತು ಪ್ರಬುದ್ಧ ರಾಜತಾಂತ್ರಿಕತೆ ಮತ್ತು ನಿರ್ಣಾಯಕ ನಾಯಕತ್ವವು ಭಾರತದ ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸುವಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ ನೀಡುತ್ತದೆ ಎಂದು ನಾವು ಭಾವಿಸುತ್ತೇವೆ ಎಂದರು.

ಸೋಮವಾರ ಮನಮೋಹನ್ ಸಿಂಗ್ ಚೀನಾದ ಅತಿಕ್ರಮಣ ಕುರಿತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಚೀನಾದೊಂದಿಗಿನ ಗಡಿ ವಿವಾದದ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು. ಸರ್ವಪಕ್ಷ ಸಭೆಯಲ್ಲಿ ಮೋದಿಯವರ ಹೇಳಿಕೆ ಹಾಗೂ ನಂತರ ಪ್ರಧಾನ ಮಂತ್ರಿ ಕಚೇರಿಯಿಂದ ಅವರ ಸ್ಪಷ್ಟೀಕರಣ ಬಂದ ನಂತರ ಸಿಂಗ್ ವಾಗ್ದಾಳಿ ನಡೆಸಿದ್ದರು.

"ಪ್ರಧಾನಮಂತ್ರಿಯವರು ಈ ಬಿಕ್ಕಟ್ಟನ್ನು ನಿಭಾಯಿಸಲು ಮತ್ತು ಅದು ಭವಿಷ್ಯದಲ್ಲಿ ಹೆಚ್ಚಾಗದಂತೆ ತಡೆಯಲು ಸರ್ಕಾರದ ಎಲ್ಲ ಅಂಗಗಳು ಒಟ್ಟಾಗಿ ಕೆಲಸ ಮಾಡುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.

ತಪ್ಪು ಮಾಹಿತಿ ನೀಡುವುದು ರಾಜತಾಂತ್ರಿಕತೆ ಅಥವಾ ನಿರ್ಣಾಯಕ ನಾಯಕತ್ವಕ್ಕೆ ಪರ್ಯಾಯವಲ್ಲ ಎಂದು ನಾವು ಸರ್ಕಾರಕ್ಕೆ ನೆನಪಿಸುತ್ತೇವೆ. ಸಮಾಧಾನಕರವಾದ, ಆದರೆ ಸುಳ್ಳು ಹೇಳಿಕೆಗಳನ್ನು ನೀಡುವ ಮೂಲಕ ಸತ್ಯವನ್ನು ಮರೆಮಾಚಲಾಗುವುದಿಲ್ಲ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net