

ಲುಧಿಯಾನಾ: ಅಪ್ರಾಪ್ತಳೊಂದಿಗೆ ಓಡಿಹೋದ ಯುವಕನಿಗೆ ಸಾರ್ವಜನಿಕವಾಗಿ ಅವಮಾನಿಸಿ, ಮುಖಕ್ಕೆ ಮಸಿಬಳಿದ ಘಟನೆ ಪಂಜಾಬ್ನ ಹಳ್ಳಿಯೊಂದರಲ್ಲಿ ನಡೆದಿದೆ.
ಯುವಕ ಅಪ್ರಾಪ್ತಳೊಂದಿಗೆ ಓಡಿಹೋಗಿದ್ದ. ಆದರೆ ಇಬ್ಬರನ್ನೂ ಪತ್ತೆ ಮಾಡಿದ ಬಾಲಕಿಯ ಮನೆಯವರು, ಯುವಕನ್ನು ಮರಕ್ಕೆ ಕಟ್ಟಿದ್ದಲ್ಲದೆ, ಆತನ ಮುಖಕ್ಕೆ ಕಪ್ಪು ಮಸಿ ಬಳಿದು, ಕುತ್ತಿಗೆಗೆ ಚಪ್ಪಲಿಯ ಹಾರ ಹಾಕಿ ಅವಮಾನ ಮಾಡಿದ್ದಾರೆ. ನಂತರ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಲುಧಿಯಾನಾದ ಕೂಮ್ ಕಲನ್ ಏರಿಯಾ ಬಳಿ ಘಟನೆ ನಡೆದಿದೆ. ಈ ಯುವಕ ಮತ್ತು ಅಪ್ರಾಪ್ತಳ ಮನೆ ನೆರೆಹೊರೆಯಲ್ಲೇ ಇತ್ತು. ಆ ಯುವಕನಿಗೆ ಬಾಲಕಿಯ ಮೇಲೆ ಪ್ರೀತಿಯಾಗಿತ್ತು. ಹಾಗಾಗಿ ಪ್ರತಿದಿನ ಆಕೆಯನ್ನು ಮಾತನಾಡಿಸುತ್ತಿದ್ದ. ನಂತರ ಇತ್ತೀಚೆಗೆ ಒಂದು ದಿನ ಇಬ್ಬರೂ ಮನೆಯಿಂದ ಓಡಿಹೋದರು.
ಬಾಲಕಿಯ ಮನೆಯವರು ಕೂಮ್ ಕಲನ್ ಪೊಲೀಸರಿಗೆ ದೂರು ನೀಡಿದರು. ಅವರ ದೂರಿನ ಅನ್ವಯ ಪೊಲೀಸರು ಯುವಕನ ವಿರುದ್ಧ ಪ್ರಕರಣ ದಾಖಲಿಸಿದರು. ಇದನ್ನೂ ಓದಿ: ಉತ್ಪಾದನೆ ಇಲ್ಲದೆ ಕಂಪನಿಗಳು ಕಂಗಾಲು, ಕರೊನಾದಿಂದ ಸಂಕಷ್ಟ ಕೆಲಸ ಕಳೆದುಕೊಳ್ಳುತ್ತಿರುವ ಕಾರ್ಮಿಕರು
ಆದರೆ ಬಾಲಕಿಯ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದರೂ, ತಾವೂ ಕೂಡ ಇಬ್ಬರನ್ನೂ ಹುಡುಕುತ್ತಿದ್ದರು. ಹಾಗೇ, ಪೊಲೀಸರಿಗಿಂತ ಮೊದಲು ಯುವಕ ಮತ್ತು ಬಾಲಕಿಯನ್ನು ಪತ್ತೆ ಹಚ್ಚಿದರು.
ಗುರುವಾರ ಬೆಳಗ್ಗೆ ಇವರಿಬ್ಬರನ್ನೂ ಊರಿಗೆ ಕರೆತಂದ ಕುಟುಂಬದವರು, ಯುವಕನನ್ನು ಮರಕ್ಕೆ ಕಟ್ಟಿ, ಸಾರ್ವಜನಿಕವಾಗಿ ತೀವ್ರವಾಗಿ ಅವಮಾನಿಸಿದರು.
ನಂತರ ಅದೇ ಹಳ್ಳಿಯ ಕೆಲವರು ಆ ಯುವಕನನ್ನು ಕಾಪಾಡಿ, ಪೊಲೀಸರಿಗೆ ವಿಷಯ ತಿಳಿಸಿದರು. ನಂತರ ಪೊಲೀಸರು ಯುವಕನ್ನು ವಶಕ್ಕೆ ಪಡೆದಿದ್ದಾರೆ. (ಏಜೆನ್ಸೀಸ್)