ಉತ್ಪಾದನೆ ಇಲ್ಲದೆ ಕಂಪನಿಗಳು ಕಂಗಾಲು, ಕರೊನಾದಿಂದ ಸಂಕಷ್ಟ ಕೆಲಸ ಕಳೆದುಕೊಳ್ಳುತ್ತಿರುವ ಕಾರ್ಮಿಕರು

jigani industries
Published on

ಆನೇಕಲ್: ಕರೊನಾದಿಂದ ಕಾರ್ಮಿಕರಿಗಲ್ಲದೆ ಕಂಪನಿ ಹಾಗೂ ಕಾರ್ಖಾನೆಗಳಿಗೂ ಭಾರಿ ಹೊಡೆತ ಬಿದ್ದಿದ್ದು, ಉತ್ಪಾದನೆ, ಮಾರುಕಟ್ಟೆ ಇಲ್ಲದೆ ಕಾರ್ಮಿಕರನ್ನು ಕೆಲಸದಿಂದ ತೆಗೆಯುವಂತಾಗಿದೆ.

ಆನೇಕಲ್ ತಾಲೂಕಿನ ಬೊಮ್ಮಸಂದ್ರ, ವೀರಸಂದ್ರ, ಅತ್ತಿಬೆಲೆ, ಜಿಗಣಿ ಕೈಗಾರಿಕಾ ಪ್ರದೇಶಗಳು ರಾಜ್ಯ ಹಾಗೂ ಹೊರ ರಾಜ್ಯದಿಂದ ಬಂದಿರುವ ಕಾರ್ಮಿಕರಿಗೆ ಜೀವನಾಧಾರವಾಗಿವೆ. ಆದರೆ ಕರೊನಾ ಹಿನ್ನೆಲೆಯಲ್ಲಿ ಕಂಪನಿಗಳಲ್ಲಿ ಉತ್ಪಾದನೆಯಾದ ವಸ್ತುಗಳು ಮಾರುಕಟ್ಟೆಗೆ ಹೋಗದೆ, ಹೊಸ ಬೇಡಿಕೆ ಬರದೇ ಕೆಲವೊಂದು ಕಂಪನಿಗಳು ಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಲಾಗುತ್ತಿದೆ.

ಈಗಾಗಲೇ ಐದೂವರೆ ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. 4 ಕೈಗಾರಿಕಾ ಪ್ರದೇಶ ಸೇರಿ ಕೇವಲ ಒಂದೂವರೆ ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎನ್ನುವ ಆತಂಕದ ವರದಿ ಹೊರಬಿದ್ದಿದೆ ಎಂದು ಬೊಮ್ಮಸಂದ್ರ ಕೈಗಾರಿಕಾ ಸಂಘದ ಅಧ್ಯಕ್ಷ ಎ. ಪ್ರಸಾದ್ ವಿಜಯವಾಣಿಗೆ ತಿಳಿಸಿದ್ದಾರೆ.

ಕೈಗಾರಿಕಾ ಸಂಘಗಳಿಂದ ಸಹಾಯ: ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ಒಂದರಲ್ಲಿ ಮೂರೂವರೆ ಲಕ್ಷ ಕಾರ್ಮಿಕರು ಹಾಗೂ 1800 ಕಂಪನಿಗಳಿವೆ, ದೇಶ ಹಾಗೂ ವಿದೇಶಗಳಿಗೆ ರಫ್ತು ಮಾಡಲಾಗುತ್ತಿರುವ ಎಲೆಕ್ಟ್ರಾನಿಕ್ ವಸ್ತು, ಬಟ್ಟೆ, ಔಷಧ ತಯಾರಿಕಾ ಕಂಪನಿ, ಮೋಟಾರ್ ವಾಹನ ಬಿಡಿಭಾಗ ಸೇರಿ ಹಲವಾರು ಕಂಪನಿಗಳು ಸಂಕಷ್ಟದ ಸುಳಿಯಲ್ಲಿ ಸಿಲುಕಿವೆ. ಕೆಲವು ಕಂಪನಿಗಳು ಈಗಾಗಲೇ ಇರುವ ಕಾರ್ಮಿಕರಿಗೆ ಸಂಬಳ ಕಡಿತ ಮಾಡಿವೆ. ಕೈಗಾರಿಕಾ ಸಂಘಗಳು ಕೈಗಾರಿಕೆಗಳ ಪರ ನಿಂತು ಕಾರ್ಮಿಕರು ಹಾಗೂ ಉತ್ಪಾದಕರನ್ನು ಉಳಿಸುವ ಕೆಲಸ ಮಾಡಲು ಮುಂದಾಗಿದೆ.

4 ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 2800 ಕಂಪನಿಗಳಿದ್ದು 1000ಕ್ಕೂ ಹೆಚ್ಚು ಕಂಪನಿಗಳು ಉತ್ಪಾದನೆ ಇಲ್ಲದೆ ಸಂಕಷ್ಟದಲ್ಲಿವೆ. ಇಂತಹ ಪರಿಸ್ಥಿತಿಯಲ್ಲಿ ಕೆಲ ಕಂಪನಿಗಳು ಕಾರ್ಮಿಕರಿಗೆ ಸಂಬಳ ಕಡಿತ ಮಾಡದಿರುವುದು ಶ್ಲಾಘನೀಯ. ಸಂಜೀವ್ ಸಾವಂತ್, ಕೆನರಾ ಪ್ಲೆಕ್ಸ್ ಕಂಪನಿ ಮಾಲೀಕ ಕಂಪನಿಗಳಿಗೆ ಕಾರ್ಮಿಕರ ಹಿತ ಕಾಯುವುದೇ ಮುಖ್ಯವಾಗಿರುತ್ತದೆ. ಆದರೆ ಕರೊನಾ ಬಂದ ನಂತರ ಬಹುತೇಕ ಕಂಪನಿಗಳಲ್ಲಿ ಉತ್ಪಾದನೆಯಾಗುತ್ತಿಲ್ಲ. ನಮ್ಮ ಕಂಪನಿಗಳಲ್ಲಿಯೂ ಇದೇ ಸಮಸ್ಯೆ ಎದುರಾಗಿದೆ. ರಾಜೇಶ್. ಸನ್ಸೆರಾ ಕಂಪನಿ ವ್ಯವಸ್ಥಾಪಕ ಈ ಭಾಗದ ಸ್ಥಳೀಯರಿಗೆ ಅನ್ನದಾತ ಎನಿಸಿಕೊಂಡಿರುವ ಕಂಪನಿಗಳು ಸಂಕಷ್ಟದಲ್ಲಿದ್ದು, ಉತ್ಪಾದನೆ ಹಾಗೂ ಮಾರುಕಟ್ಟೆ ಇಲ್ಲವಾಗಿದೆ. ಕಾರ್ಮಿಕರು ಉದ್ಯೋಗ ಇಲ್ಲದೆ ತೊಂದರೆಪಡುವಂತಾಗಿದೆ. ಸರ್ಕಾರ ಕಾರ್ಮಿಕರು ಹಾಗೂ ಕೈಗಾರಿಕೆ ಎರಡನ್ನೂ ಉಳಿಸುವ ಕೆಲಸ ಮಾಡಬೇಕಿದೆ. ಕಿರಣ್, ಸ್ಥಳೀಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net