ಟ್ರೆಡ್​ ಮಿಲ್​ ಮೇಲೆ ವ್ಯಾಯಾಮ ಮಾಡುವಾಗ ವಿದ್ಯುತ್​ ಶಾಕ್​: ಯುವಕ ದುರಂತ ಸಾವು

Youth Dies
Published on

ನವದೆಹಲಿ: ಟ್ರೆಡ್ ​ಮಿಲ್​ ಮೇಲೆ ವ್ಯಾಯಾಮ ಮಾಡುವಾಗ ವಿದ್ಯುತ್​ ಶಾಕ್​ನಿಂದ ಯುವ ಇಂಜಿನಿಯರ್​ ದುರಂತ ಸಾವಿಗೀಡಾಗಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

ಮೃತ ಯುವಕನನ್ನು ಸಕ್ಷಮ್ ಪೃತಿ (24) ಎಂದು ಗುರುತಿಸಲಾಗಿದೆ. ಈತ ಗುರುಗ್ರಾಮದ ಕಂಪನಿ ಒಂದರಲ್ಲಿ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದ ಸಲ್ಲಿಸುತ್ತಿದ್ದ. ದೆಹಲಿಯ ರೋಹಿಣಿ ಏರಿಯಾದ ಸೆಕ್ಟರ್​ 15ರ ಜಿಂಪ್ಲೆಕ್ಸ್​ ಫಿಟ್​ನೆಸ್​ ಕೇಂದ್ರದಲ್ಲಿ ಈ ದುರ್ಘಟನೆ ಸಂಭವಿಸಿದೆ.

ನಿನ್ನೆ ಬೆಳಗ್ಗೆ ಟ್ರೆಡ್ ​ಮಿಲ್​ ಮೇಲೆ ವ್ಯಾಯಾಮ ಮಾಡುವಾಗ ಸಕ್ಷಮ್​ ಕುಸಿದುಬಿದ್ದಿದ್ದ. ಬಳಿಕ ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಆತನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಕಾರಣ ಬಹಿರಂಗವಾಗಿದ್ದು, ವಿದ್ಯುತ್​ ಶಾಕ್​ನಿಂದ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.

ಜಿಮ್​ ಮ್ಯಾನೇಜರ್​ ಅನುಭವ್​ ದುಗ್ಗಲ್​ನನ್ನು ಪೊಲೀಸರು ಈ ಪ್ರಕರಣ ಸಂಬಂಧ ಬಂಧಿಸಿದ್ದಾರೆ. ಆತನ ವಿರುದ್ಧ ತಿಳಿಯದೆ ಮಾಡಿದ ನರಹತ್ಯೆ ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದ್ದು, ವಿದ್ಯುತ್ ಸ್ಪರ್ಶ ಹೇಗೆ ಸಂಭವಿಸಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net