

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಯುವ ಕಾಂಗ್ರೆಸ್ನ ರಾಜ್ಯ ಘಟಕದಲ್ಲಿ ಕಾಣಿಸಿಕೊಂಡಿದ್ದ ಮಸುಕು ಸರಿದು ಹೊಸ ಹುರುಪು ಕಂಡುಕೊಳ್ಳಲು ಮೈಕೊಡವಿ ಸಜ್ಜಾಗುತ್ತಿದೆ. ಯುವ ಕಾಂಗ್ರೆಸ್ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಆಯ್ಕೆಗಾಗಿ ನಡೆದಿದ್ದ ಚುನಾವಣೆ, ಬಳಿಕ ನಡೆದ ಆಯ್ಕೆ ಪ್ರಕ್ರಿಯೆಯಿಂದ ಸಂಘಟನೆಯಲ್ಲಿ ಅಸಹಜ ಬೆಳವಣಿಗೆ ನಡೆದಿತ್ತು. ಪಕ್ಷವು ರಕ್ಷಾ ರಾಮಯ್ಯ ಅವರನ್ನು ಅಧ್ಯಕ್ಷ ಎಂದು ಘೋಷಿಸಿದ್ದರೆ, ಚುನಾವಣೆಯಲ್ಲಿ ಸ್ಪರ್ಧಿಯಾಗಿದ್ದ ಮಹಮದ್ ನಳಪಾಡ್, ಅಧ್ಯಕ್ಷ ಸ್ಥಾನ ನನಗೆ ಸಿಗಬೇಕೆಂದು ವರಿಷ್ಠರ ಮೇಲೆ ಒತ್ತಡ ತಂದಿದ್ದರು.
ಪಕ್ಷದ ಪ್ರಮುಖ ನಾಯಕರೆಲ್ಲ ಸೇರಿ ಪರಿಹಾರ ಸೂತ್ರ ಮಾಡಿಕೊಟ್ಟ ಬಳಿಕ ರಕ್ಷಾ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಲ್ಲದೆ, ಸಂಘಟನೆ ಚಟುವಟಿಕೆಗೆ ಚುರುಕು ನೀಡಿದ್ದಾರೆ. ಜತೆಗೆ ನಳಪಾಡ್ ಹಾಗೂ ರಕ್ಷಾ ಇಬ್ಬರೂ ಪಕ್ಷದ ಕಚೇರಿಯಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಪರಿಹಾರ ಸೂತ್ರದ ಪ್ರಕಾರ ಡಿಸೆಂಬರ್ ಕೊನೆಯವರೆಗೂ ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುತ್ತಾರೆ. ಬಳಿಕ ನಳಪಾಡ್ ಜವಾಬ್ದಾರಿ ವಹಿಸಿಕೊಳ್ಳುತ್ತಾರೆ. ಈ ನಡುವೆ ತಮಗೆ ಸಿಕ್ಕಿರುವ ಅವಕಾಶದಲ್ಲಿ ಪಕ್ಷವನ್ನೇ ತಮ್ಮತ್ತ ಗಮನ ಸೆಳೆಯುವಂಥ ಎರಡು ಪ್ರಮುಖ ಕಾರ್ಯಕ್ರಮ ಅನುಷ್ಠಾನ ಮಾಡಲು ರಕ್ಷಾ ರಾಮಯ್ಯ ಸಿದ್ಧತೆ ನಡೆಸಿರುವುದು ವಿಶೇಷ ಸಂಗತಿ.
ಯುವ ಕಾಂಗ್ರೆಸ್ನ ಇಮೇಜ್ ಬದಲಿಸುವ ಗುರಿಹಾಕಿಕೊಂಡಿರುವುದು ಮತ್ತು ಯುವಕರನ್ನು ಪಕ್ಷಕ್ಕೆ ಸೆಳೆಯುವುದು, ಯುವ ಮತದಾರರನ್ನು ಕೇಂದ್ರೀಕರಿಸಿ ‘ಯುವ ಕರ್ನಾಟಕ’ ಎಂಬ ಕಾರ್ಯಕ್ರಮ ರೂಪಿಸಿದ್ದು, ಶೀಘ್ರವೇ ಚಟುವಟಿಕೆಗೆ ಚಾಲನೆ ದೊರೆಯುತ್ತಿದೆ.
ಉದ್ಯೋಗ ಮೇಳ: ಯುವ ಕಾಂಗ್ರೆಸ್ ಎಂದರೆ ಹೋರಾಟ, ಪ್ರತಿಭಟನೆ, ಧರಣಿಗೆ ಸೀಮಿತ ಎಂಬ ಭಾವನೆ ಬದಲಿಸಲು, ಜನರ ನಡುವೆ ಹೊಸ ಅಭಿಪ್ರಾಯ ಮೂಡಿಸುವ ಉದ್ದೇಶದಿಂದ ಸದ್ಯದ ಸಮಸ್ಯೆಗೆ ಸ್ಪಂದಿಸುವ ಉದ್ದೇಶ ಹಾಕಿಕೊಳ್ಳಲಾಗಿದೆ.
ಈ ಹೊಸ ಕಾರ್ಯಕ್ರಮದ ಬಗ್ಗೆ ‘ವಿಜಯವಾಣಿ’ಗೆ ವಿವರಣೆ ನೀಡಿದ ರಕ್ಷಾ ರಾಮಯ್ಯ, ರಾಜ್ಯದ ಉದ್ದಗಲಕ್ಕೂ ಉದ್ಯೋಗ ಮೇಳ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಕರೊನಾದಿಂದ ಉದ್ಯೋಗ ಕಳೆದುಕೊಂಡವರಿಗೆ ಮತ್ತು ಹೊಸದಾಗಿ ಪದವಿ ಪೂರೈಸಿದವರು ಎದುರಿಸುತ್ತಿರುವ ಸಂಕಷ್ಟಕ್ಕೆ ನೆರವಾಗಲು ದೊಡ್ಡ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಉದ್ಯಮಿ, ಉದ್ಯೋಗದಾತರನ್ನು ಯುವ ಘಟಕದ ಕಡೆಯಿಂದ ಆಹ್ವಾನಿಸಿ ಪ್ರತಿ ಜಿಲ್ಲೆಯಲ್ಲೂ ಉದ್ಯೋಗ ಮೇಳ ನಡೆಸಲು ಉದ್ದೇಶಿಸಲಾಗಿದೆ. ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರ ನಡುವೆ ಯುವ ಕಾಂಗ್ರೆಸ್ ಸಂಪರ್ಕಕೊಂಡಿಯಾಗಿ ಕಾರ್ಯನಿರ್ವಹಿಸಲಿದೆ ಎಂದು ತಿಳಿಸಿದರು. ಅಲ್ಲದೆ 2023 ಮತ್ತು 2024ರಲ್ಲಿ ನಡೆಯುವ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿರುವ ಯುವ ಮತದಾರರನ್ನು ಗುರಿಯಾಗಿಸಿ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಶೀಘ್ರವೇ ಈ ಬಗ್ಗೆ ಸ್ಪಷ್ಟತೆ ದೊರೆಯಲಿದೆ ಎಂದು ತಿಳಿಸಿದ ರಕ್ಷಾ, ಹೊಸ ಮತದಾರರು ಪಕ್ಷಕ್ಕೆ ಅತೀ ಮುಖ್ಯ. ಅವರನ್ನು ಪಕ್ಷಕ್ಕೆ ಕರೆತರುವುದು ನಮ್ಮ ಘಟಕದ ಮಹತ್ವದ ಜವಾಬ್ದಾರಿ. ಆ ಕರ್ತವ್ಯವನ್ನು ನಮ್ಮ ಇಡೀ ತಂಡ ನಿಭಾಯಿಸಲಿದೆ ಎಂದರು.
ತಮಗೆ ಲಭಿಸಿರುವ ಅವಧಿಯಲ್ಲಿ ಉತ್ತಮ ಕಾರ್ಯ ಮಾಡಬೇಕೆಂಬ ಬಯಕೆ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾರ್ಗದರ್ಶನದಲ್ಲಿ ಮುನ್ನೆಡೆಯುತ್ತೇನೆ. ಮುಂದೇನು ಎಂಬುದು ನಾಯಕರಿಗೆ ಬಿಟ್ಟ ವಿಚಾರ ಎಂದು ಭವಿಷ್ಯದ ಚಟುವಟಿಕೆ ಬಗ್ಗೆ ಪ್ರತಿಕ್ರಿಯಿಸಿದರು.
| ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ