40,000 ರೂ. ಮಾತ್ರ...! ಒಂದು ಸಣ್ಣ ಕಾರಣಕ್ಕೆ ಮನನೊಂದ ಯುವಕ ದುರಂತ ಸಾವು | Suicide Case

ವಿಜಯವಾಣಿ - 2025-05-06T210751.825
Published on

Suicide Case: ಎಲ್ಲರೆದರೂ ತಲೆ ತಗ್ಗಿಸುವಂತಾಯಿತು ಎಂಬ ಸಣ್ಣ ಕಾರಣಕ್ಕೆ ದುಡುಕಿ ನಿರ್ಧಾರ ಕೈಗೊಂಡ ಯುವಕನೊಬ್ಬ, ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ವರದಿಯಾಗಿದೆ.

ವೆಂಪಲ್ಲೆ ಪಂಚಾಯತ್‌ನ ಜಂಗವರಿಪಲ್ಲಿ ನಿವಾಸಿ ರೆಡ್ಡೆಪ್ಪ ಮತ್ತು ಕಾಂತಮ್ಮ ದಂಪತಿಯ ಏಕೈಕ ಪುತ್ರ ಶ್ರೀಕಾಂತ್ (25) ಮೃತ ದುರ್ದೈವಿ. ಪಟ್ಟಣದ ಖಾಸಗಿ ಎಲೆಕ್ಟ್ರಾನಿಕ್ಸ್ ಶೋ ರೂಂನಲ್ಲಿ ಸೇಲ್ಸ್​ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ ಶ್ರೀಕಾಂತ್​, ಕ್ರೆಡಿಟ್​ ಕಾರ್ಡ್​ನಲ್ಲಿ 3 ಲಕ್ಷ ರೂ. ಸಾಲ ತೆಗೆದುಕೊಂಡಿದ್ದ. ಪಡೆದ ಹಣವನ್ನು ಪಾವತಿ ಮಾಡದ ಹಿನ್ನೆಲೆ ಬ್ಯಾಂಕ್​ ಸಿಬ್ಬಂದಿ ಪದೇ ಪದೇ ಕರೆ ಮಾಡಿ, ತಕ್ಷಣವೇ ಪಾವತಿಸುವಂತೆ ಎಚ್ಚರಿಸಿದ್ದರು. ಇಷ್ಟಾದರೂ ಎಚ್ಚೆತ್ತುಕೊಳ್ಳದ ಶ್ರೀಕಾಂತ್​ ನಡೆಗೆ ಸಿಟ್ಟಾದ ಬ್ಯಾಂಕ್​ ಸಿಬ್ಬಂದಿಗಳು, ಆತನ ಮನೆಗೆ ಬಂದು ಈಗಲೇ ಪಾವತಿ ಮಾಡುವಂತೆ ಒತ್ತಾಯಿಸಿದ್ದರು.

3 ಲಕ್ಷ ರೂ. ಸಾಲದಲ್ಲಿ 40,000 ರೂ. ಬಾಕಿ ಉಳಿಸಿಕೊಂಡಿದ್ದ ಶ್ರೀಕಾಂತ್​, ಬ್ಯಾಂಕ್ ಸಿಬ್ಬಂದಿ ಕಿರುಕುಳಕ್ಕೆ ಬೇಸತ್ತಿದ್ದ. ಉಳಿಸಿದ್ದ ಅಲ್ಪ-ಸ್ವಲ್ಪ ಹಣದಲ್ಲಿ ಸಾಲದ ಮುಕ್ಕಾಲು ಭಾಗವನ್ನು ಹೇಗೋ ತೀರಿಸಿದ್ದ. ಇನ್ನು ಉಳಿದಿದ್ದ 40 ಸಾವಿರ ರೂ. ತೀರಿಸಲು ಸಾಕಷ್ಟು ಸಮಯ ತೆಗೆದುಕೊಂಡಿದ್ದ. ಸಾಲ ಮರುಪಾವತಿ ಮಾಡದ ಹಿನ್ನೆಲೆ ನೇರವಾಗಿ ಶ್ರೀಕಾಂತ್ ಮನೆಗೆ ಧಾವಿಸಿದ ಬ್ಯಾಂಕ್​ ಸಿಬ್ಬಂದಿ, ಕೂಡಲೇ ಹಣ ಕಟ್ಟುವಂತೆ ಒತ್ತಾಯ ಹೇರಿದ್ದರು.

ಎಲ್ಲರೆದರೂ ತನಗೆ ಅವಮಾನ ಆಯಿತು ಎಂಬ ಕೊರಗಿನಲ್ಲೇ ಭಾನುವಾರ (ಮೇ.04) ಬೆಳಗ್ಗೆ ಮನೆಯಲ್ಲಿದ್ದ ಕೀಟನಾಶಕ ಸೇವಿಸಿ, ಶ್ರೀಕಾಂತ್ ಪ್ರಾಣಬಿಟ್ಟಿದ್ದಾನೆ. ಮಗನ ಪಕ್ಕದಲ್ಲಿ ಕೀಟನಾಶಕ ಬಿದ್ದಿರುವುದನ್ನು ಕಂಡ ಹೆತ್ತವರು ತಕ್ಷಣವೇ ಆತನನ್ನು ಹತ್ತಿರದ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಈ ವೇಳೆ ಶ್ರೀಕಾಂತ್​ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದು, ತಾಲೂಕು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net