

ಬೆಂಗಳೂರು: ಸುಹಾಸ್ ಶೆಟ್ಟಿಯನ್ನು ಮಹಾತ್ಮ ಎಂದು ಬಿಂಬಿಸುತ್ತಿರುವ ಬಿಜೆಪಿಯವರು ಆತನನ್ನು ರೌಡಿ ಪಟ್ಟಿಗೆ ಸೇರಿಸದ್ದೇಕೆ(BJP government has added Suhas Shetty to the rowdy list)? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundurao) ತಿರುಗೇಟು ನೀಡಿದ್ದಾರೆ.
ಬಿಜೆಪಿಯವರೇ ಕ್ರಿಮಿನಲ್‌ಗಳ ನಿಜವಾದ ಸೃಷ್ಟಿಕರ್ತರು. ಅವರು ಅಧಿಕಾರದಲ್ಲಿದ್ದಾಗ ಕ್ರಿಮಿನಲ್‌ಗಳನ್ನು ಸೃಷ್ಟಿಸುತ್ತಾರೆ. ಅವರ ಮೇಲೆ ರೌಡಿ ಶೀಟರ್ ತೆರೆಯುತ್ತಾರೆ. ಹೆಣ ಬಿದ್ದ ಕೂಡಲೇ ಅದೇ ಕ್ರಿಮಿನಲ್‌ಗಳನ್ನು ಮಹಾತ್ಮ ಎಂಬಂತೆ ಬಿಂಬಿಸಿ ಹುತಾತ್ಮರನ್ನಾಗಿ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸುಹಾಸ್ ಶೆಟ್ಟಿ ವಿರುದ್ಧ ರೌಡಿ ಶೀಟ್ ಓಪನ್ ಆಗಿದ್ದು 2020ರಲ್ಲಿ. ಆಗ ಅಧಿಕಾರದಲ್ಲಿದ್ದದ್ದು ಬಿಜೆಪಿ ಸರ್ಕಾರ. ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಇಂದು ಸುಹಾಸ್‌ನನ್ನು ಮಹಾತ್ಮ ಎಂದು ಬಿಂಬಿಸುತ್ತಿದ್ದಾರೆ. ಬಿಜೆಪಿಯವರು ಆಗ ಯಾಕೆ ಸುಹಾಸ್‌ನನ್ನು ರೌಡಿ ಪಟ್ಟಿಗೆ ಸೇರಿಸಿದ್ದರು? ಎಂದು ಕೆಣಕಿದ್ದಾರೆ.
ಕರಾವಳಿಯನ್ನು ಕೋಮು ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿರುವ ಬಿಜೆಪಿಯವರೇ ಕ್ರಿಮಿನಲ್‌ಗಳ ನಿಜವಾದ ಸೃಷ್ಟಿಕರ್ತರು. ಸುಹಾಸ್ ಹತ್ಯೆ ನಂತರ ಕೂಗುಮಾರಿಗಳಂತೆ ಅರಚುತ್ತಿರುವ ಬಿಜೆಪಿ ನಾಯಕರ ಯಾರ ಮಕ್ಕಳಾದರೂ ಧರ್ಮದ ಅಮಲಿನಲ್ಲಿ ಬೀದಿ ಕಾಳಗ ಮಾಡುತ್ತಿದ್ದಾರೆಯೆ? ಅಥವಾ ಧರ್ಮಕ್ಕಾಗಿ ಬಡಿದಾಡುತ್ತಿದ್ದಾರೆಯೆ? ಬಿಜೆಪಿ ನಾಯಕರ ಧರ್ಮಾಂಧತೆಗೆ ಬೀದಿ ಹೆಣವಾಗುತ್ತಿರುವುದು ಬಡವರ ಮಕ್ಕಳು. ಇದು ಸತ್ಯವಲ್ಲವೆ? ಬಿಜೆಪಿಯವರ ಕೆಟ್ಟ ರಾಜಕೀಯಕ್ಕೆ ಕರಾವಳಿಯಲ್ಲಿ ಎಷ್ಟೋ ಜನರ ಬಲಿಯಾಗಿದೆ. ಎಷ್ಟೋ ಮನೆಗಳ್ ದೀಪ ಆರಿ ಹೋಗಿದೆ. ಇಷ್ಟಾದರೂ ಇವರ ರಕ್ತದಾಹ ನಿಂತಿಲ್ಲ ಎಂದು ಹರಿಹಾಯ್ದಿದ್ದಾರೆ.
ಕರಾವಳಿಯ ಜನ ಇನ್ನಾದರೂ ಬಿಜೆಪಿಯ ಹುನ್ನಾರ ಅರಿಯಬೇಕಿದೆ. ಇಲ್ಲದಿದ್ದರೆ ಬಿಜೆಪಿಯವರ ಕೆಟ್ಟ ರಾಜಕಾರಣಕ್ಕೆ ಜಿಲ್ಲೆಯ ನೆಮ್ಮದಿಯೇ ಹಾಳಾಗಲಿದೆ ಎಂದು ದಿನೇಶ್ ಗುಂಡೂರಾವ್ ಎಚ್ಚರಿಸಿದ್ದಾರೆ.