ಯುವ ಓದುಗರು ಹೊಸ ಭರವಸೆ

ವಿಜಯವಾಣಿ (2)
Published on
| ಎಂ.ಎ. ಸುಬ್ರಹ್ಮಣ್ಯ, 

ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ

* ಪ್ರಕಾಶನವು ಉದ್ಯಮವೆಂದು ಗಣಿಸಲ್ಪಟ್ಟರೆ, ಅಲ್ಲಿಯ ಉತ್ಸಾಹಕ್ಕೆ ಆಯುಷ್ಯ ಸಹಜವಾಗಿಯೇ ಕಮ್ಮಿಯಾಗಿಬಿಡುತ್ತದೆ. ಲಾಭ ಕಡಿಮೆ, ತಲೆನೋವು ಜಾಸ್ತಿ ಎಂಬುದು ಅನುಭವವಾಗುತ್ತಿದ್ದಂತೆ ಮೊದಮೊದಲಿನ ಉತ್ಸಾಹ ಕಡಿಮೆಯಾಗುತ್ತ ಹೋಗುತ್ತದೆ. ಪ್ರಕಾಶನವೆಂಬುದನ್ನು ಪ್ಯಾಶನ್- ಹುಚ್ಚು ಎಂದೇ ಅಂಟಿಸಿಕೊಂಡು ಮಾಡುತ್ತಹೋದರೆ, ಅತಿಯಾದ ಲಾಭ ಬರದಿದ್ದರೂ ನಷ್ಟವಂತೂ ಆಗದು. ಪ್ರಕಾಶಕನಾದವನಿಗೆ ಕೆಲವಾದರೂ ಕನಿಷ್ಠ ಅರ್ಹತೆಗಳಿರಲೇಬೇಕು. ಓದುವ ಹವ್ಯಾಸ, ಸಾಹಿತ್ಯದ ಇತಿಹಾಸ ಮತ್ತು ಬದಲಾವಣೆಗಳ ಗಮನ, ಕರಡು ತಿದ್ದುಪಡಿ ಮೊದಲಾದವುಗಳು ಗೊತ್ತಿರಬೇಕು. ಆಗ ಮಾತ್ರ ಆ ಕ್ಷೇತ್ರಕ್ಕೂ ಓದುಗರಿಗೂ ನ್ಯಾಯ ಒದಗಿಸಬಹುದು. ಹೊಸತನ, ಉತ್ಸಾಹ ಮುಂತಾದವುಗಳ ಹೆಸರಿನಲ್ಲಿ ಪುಸ್ತಕವೂ ಒಂದು ಸರಕಾಗಿ ಮಾರ್ಪಡಬಾರದು.

ಹೌದು. ಐವತ್ತು ವರ್ಷಗಳಿಂದಲೂ ಕನ್ನಡ ಪುಸ್ತಕಗಳ ಮಾರಾಟದಲ್ಲಿ ತೊಡಗಿಕೊಂಡಿರುವ ನನಗೆ ನೆನಪಿದೆ. ನಾವು ಕನ್ನಡದಲ್ಲಿ ಪ್ರಕಟವಾದ ಪ್ರತಿಯೊಂದು ಪುಸ್ತಕವೂ ನಮ್ಮಲ್ಲಿ ಲಭ್ಯ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೆವು. ಪತ್ರಿಕೆಗಳ ಭಾನುವಾರದ ಪುರವಣಿಗಳಲ್ಲಿ ಸಾದರ ಸ್ವೀಕಾರ, ವಿಮರ್ಶೆಗಳನ್ನು ನೋಡಿಯೇ ಎಲ್ಲೆಲ್ಲಿಂದಲೋ ಓದುಗರು ಪತ್ರಬರೆದು, ವೀಪಿ ಮೂಲಕ ತರಿಸಿಕೊಳ್ಳುತ್ತಿದ್ದರು. ಈಗಿನ ಏಳೆಂಟು ಸಾವಿರ ಪುಸ್ತಕಗಳು ಅಚ್ಚಾಗುವ ಕಾಲದಲ್ಲಿ ಅವೆಲ್ಲವನ್ನೂ ತರಿಸಿಟ್ಟುಕೊಂಡು ತೋರಿಸುವುದು, ಮಾರಾಟ ಮಾಡುವುದು- ವಾಸ್ತವವಾಗಿ ಅಸಾಧ್ಯ. ಮಾಧ್ಯಮಗಳ ಆದ್ಯತೆಯೂ ಬದಲಾಗಿ, ಪುಸ್ತಕ-ಸಾಹಿತ್ಯಚರ್ಚೆಗಳ ಸ್ಥಳಾವಕಾಶವೂ ಕಡಿಮೆಯಾಗಿದೆ. ಆದರೆ, ಸಾಮಾಜಿಕ ಜಾಲತಾಣಗಳು ತುಂಬ ಪ್ರಭಾವಿಯಾಗಿರುವುದರಿಂದ ಹಲವಾರು ಲೇಖಕರೂ, ಹಲವಾರು ಪ್ರಕಾಶಕರೂ ತುಂಬ ಚೆನ್ನಾಗಿಯೇ ಓದುಗರನ್ನು ತಲುಪುತ್ತಿದ್ದಾರೆ.

ಕನ್ನಡದ ಯುವಪೀಳಿಗೆ ಪುಸ್ತಕ ಓದುತ್ತಿರುವುದು ತುಂಬ ಒಳ್ಳೆಯ ಬೆಳವಣಿಗೆ. ದೊಡ್ಡ ಬೆಳಕಿನ ನಿರೀಕ್ಷೆ ಅದು. ಬರೀ ಬೆಂಗಳೂರಿನ ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ, ಮಿಥಿಕ್ ಸೊಸೈಟಿಗಳ ಲೈಬ್ರರಿಗಳಲ್ಲ, ಸಣ್ಣ ಊರುಗಳ ಸರ್ಕಾರಿ ಗ್ರಂಥಾಲಯಗಳಲ್ಲೂ ಯುವಕರು ತುಂಬಿರುತ್ತಾರೆ. ಓದುತ್ತಿರುತ್ತಾರೆ. ಅದರಲ್ಲಿ ಕೆಲವೇಕೆಲವು ಓದುಗರಿಗೆ ಉತ್ಕೃಷ್ಟ ಅಭಿರುಚಿ ಬೆಳೆಸುವಂತಹ ಶಿಕ್ಷಕರೋ ಮಾರ್ಗದರ್ಶಕರೋ ಗ್ರಂಥಪಾಲಕರೋ ಸಿಕ್ಕಿರುತ್ತಾರೆ. ಕೆಲವರು ತಾವೇ ಸ್ವಂತವಾಗಿ ಹಾಗೊಂದು ವಿಮರ್ಶಾತ್ಮಕ ದೃಷ್ಟಿಯನ್ನು ಕಂಡುಕೊಂಡಿರುತ್ತಾರೆ. ಕೊರತೆ ಇರುವುದೇ ಈಗ ಅಲ್ಲಿ. ಓದುವಂತೆ ಮಾಡುವ ಓದಿದ ಶಿಕ್ಷಕರೂ ಪಾಲಕರೂ ತುಂಬ ಕಮ್ಮಿಯಾಗುತ್ತಿರುವುದು. ಆ ಕೆಲಸವನ್ನೂ ಪ್ರಕಾಶಕ, ಪುಸ್ತಕ ಮಾರಾಟಗಾರ ಮಾಡಲೇಬೇಕು.

ಈಗಿನ ಹೊಸ ಮತ್ತು ಯುವ ಓದುಗರು ತುಂಬ ಲೋಕಾನುಭವಿಗಳೇ. ದೇಶವನ್ನೂ ವಿದೇಶಗಳನ್ನೂ ಹೆಚ್ಚಾಗಿ ಕಂಡವರೇ. ಹಾಗಾಗಿ, ಜಾಳು ಬರಹಗಳನ್ನು ಇಷ್ಟಪಡಲಾರರು. ತಾವು ವ್ಯಯಿಸುವ ಹಣ ಮತ್ತು ಸಮಯಕ್ಕೆ ತಕ್ಕುದಾದ ಪ್ರತಿಫಲವನ್ನು ನಿರೀಕ್ಷೆ ಮಾಡುವಂಥವರು. ಎಂಥದೋ ಪುಸ್ತಕವನ್ನು ಪ್ರಕಾಶಕ ಕೊಟ್ಟರೆ, ಒಬ್ಬ ಓದುಗನ ಜೊತೆಗೆ ನಿಮ್ಮ ಮೇಲಿನ ಅವನ ನಂಬಿಕೆಯನ್ನೂ ಕಳೆದುಕೊಂಡಂತಾದೀತು. ಹಾಗೊಂದು ಎಚ್ಚರ ಇಟ್ಟುಕೊಂಡಿದ್ದರಿಂದಲೇ ನಾನು ತುಂಬ ಜನ ಓದುಗರನ್ನು ಹುಟ್ಟುಹಾಕಿದ್ದೇನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net