

ದೊಡ್ಡಬಳ್ಳಾಪುರ: ಲಾಕ್ಡೌನ್ ನಡುವೆಯೂ ಗೆಳೆಯನ ಹುಟ್ಟು ಹಬ್ಬ ಆಚರಣೆ ನೆಪದಲ್ಲಿ ಮೋಜು-ಮಸ್ತಿಗೆಂದು ಬೈಕ್ನಲ್ಲಿ ಹೋಗಿದ್ದ 8 ಮಂದಿ ಪೈಕಿ ಮೂವರು ಜಲಸಮಾಧಿಯಾಗಿದ್ದಾರೆ. ಬರ್ತ್ ಡೇ ಬಾಯ್ ಕೂಡ ಸಾವಿಗೀಡಾಗಿದ್ದು, ಸಂಭ್ರಮಾಚರಣೆ ದುರಂತ ಅಂತ್ಯ ಕಂಡಿದೆ.
ಬೆಂಗಳೂರಿನ ರಾಮಮೂರ್ತಿನಗರದ ಚಂದ್ರು(20), ರಾಜು(19) ಮತ್ತು ನವೀನ್ ಕುಮಾರ್(24) ಮೃತ ದುರ್ಧೈವಿಗಳು.
ಸೋಮವಾರ ನವೀನ್ ಕುಮಾರ್ ಜನ್ಮದಿನ. ಈ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಾಡಲೆಂದು ರಾಮಮೂರ್ತಿ ನಗರದಿಂದ ನವೀನ್ ಸೇರಿ ನಾಲ್ವರು ಯುವಕರು ಹಾಗೂ ನಾಲ್ವರು ಯುವತಿಯರು 4 ಬೈಕ್ನಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿಗೆ ಲಾಂಗ್ ಡ್ರೈವ್ ಬಂದಿದ್ದರು.
ಆರಂಭದಲ್ಲಿ ಘಾಟಿ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತೆರಳಿದ ಇವರು, ಲಾಕ್ಡೌನ್ ಹಿನ್ನೆಲೆ ದೇವಾಲಯದ ಬಾಗಿಲು ಹಾಕಿದ್ದರಿಂದ ಹೊರಗೇ ನಿಂತು ಕೈ ಮುಗಿದು ಬಳಿಕ ತಿಪ್ಪಗಾನಹಳ್ಳಿ ಕೆರೆ ಬಳಿ ಮೋಜು ಮಾಡಲು ಹೋಗಿದಾಗ ಅವಘಡ ಸಂಭವಿಸಿದೆ.
ತಿಪ್ಪಗಾನಹಳ್ಳಿ ಕೆರೆಯಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿನಲ್ಲಿ ಆಟವಾಡಲೆಂದು 8 ಮಂದಿಯೂ ಇಳಿದಿದ್ದಾರೆ. ಆ ವೇಳೆ ಮೂವರು ಯುವಕರು ನೀರುಪಾಲಾಗಿದ್ದಾರೆ. ತಮ್ಮ ಕಣ್ಣೆದುರಲ್ಲೇ ಸ್ನೇಹಿತರು ನೀರುಪಾಲಾಗುತ್ತಿದ್ದರೂ ಉಳಿಸಿಕೊಳ್ಳಲು ಆಗದ ಐವರು ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿತ್ತು.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹಗಳ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.