ಅಂಗಾಂಗ ವೈಫಲ್ಯದಲ್ಲಿ ಯುವಜನರದ್ದೇ ಬಹುಪಾಲು: ರಾಷ್ಟ್ರೀಯ ಅಂಗಾಂಗ ದಾನ ದಿನ ಇಂದು

Organ Donation (1)
Published on

| ಪಂಕಜ ಕೆ.ಎಂ. ಬೆಂಗಳೂರು

ರಾಜ್ಯದಲ್ಲಿ ವಿವಿಧ ಅಂಗಾಂಗಗಳ ವೈಫಲ್ಯದಿಂದ ಬಳಲುತ್ತಿರುವ ಸಾವಿರಾರು ಮಂದಿಯಲ್ಲಿ, ಅಂಗಾಂಗ ಕಸಿಗಾಗಿ ಹೆಸರು ನೋಂದಾಯಿಸಿ ಕಾಯುತ್ತಿರುವವರ ಸಂಖ್ಯೆ 7,500ಕ್ಕೂ ಅಧಿಕವಿದೆ. ಈ ಪೈಕಿ ರಕ್ತ ಸಂಬಂಧಿಯಿಂದ ಕೆಲವರು ಕಿಡ್ನಿ ಪಡೆದು ಕಸಿ ಮಾಡಿಸಿಕೊಳ್ಳುತ್ತಾರೆ. ಅದು ಸಾಧ್ಯವಾಗದ 5,288 ಮಂದಿ ದಾನಿಗಳ ನಿರೀಕ್ಷೆಯಲ್ಲಿದ್ದಾರೆ.

ಅಂಗಾಂಗ ಕಸಿಗಾಗಿ ಕಾಯುತ್ತಿರುವವರಲ್ಲಿ ಯುವಜನರೇ (20-40 ವರ್ಷದ) ಶೇ. 60 ಹೆಚ್ಚಿನವರಾಗಿದ್ದಾರೆ. ಬದಲಾದ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಪ್ರತಿ 10 ಲಕ್ಷ ಜನರಲ್ಲಿ 800 ಮಂದಿ ಕಿಡ್ನಿ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (ಖಣಖಖಣ)ಯಲ್ಲಿ 7,502 ಮಂದಿ ವಿವಿಧ ಅಂಗಾಂಗ ಕಸಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ ಕಿಡ್ನಿ ಕಸಿಗಾಗಿ 5,288 ಮಂದಿ ಸರತಿಯಲ್ಲಿದ್ದಾರೆ.

ಹಿಂಜರಿಕೆ ಮತ್ತು ಅರಿವಿನ ಕೊರತೆಯಿಂದಾಗಿ ಅಂಗಾಂಗ ದಾನದ ಕುರಿತು ಜನರಲ್ಲಿ ಜಾಗೃತಿ ಇಲ್ಲದೆ, ರಾಜ್ಯವು ದಾನಿಗಳ ಕೊರತೆ ಎದುರಿಸುತ್ತಿದೆ. ಕರ್ನಾಟಕ 3ನೇ ಸ್ಥಾನದಲ್ಲಿದೆ. ತೆಲಂಗಾಣ ಮೊದಲ ಸ್ಥಾನದಲ್ಲಿ ಹಾಗೂ ಗುಜರಾತ್ 2ನೇ ಸ್ಥಾನದಲ್ಲಿದೆ. ಅಂತಿಮ ಹಂತದ ಅಂಗ ವೈಫಲ್ಯದಿಂದ ಬಳಲುತ್ತಿರುವ ವ್ಯಕ್ತಿಗಳ ಜೀವ ಉಳಿಸಲು ಅಗತ್ಯತೆಗೆ ಹೋಲಿಸಿದರೆ ಮಾನವ ಅಂಗಗಳು ಮತ್ತು ಅಂಗಾಂಶಗಳ ತೀವ್ರ ಕೊರತೆಯಿದೆ. ಈ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎನ್ನುತ್ತಾರೆ ಸಂಸ್ಥೆ ಅಧಿಕಾರಿಗಳು.

ಮಾನ್ಯತೆ ಪಡೆದಿರುವ ಆಸ್ಪತ್ರೆಗಳು: ಕರ್ನಾಟಕ ಸರ್ಕಾರ ಆರೋಗ್ಯ ಇಲಾಖೆಯಿಂದ ಮಾನ್ಯತೆ ಪಡೆದ ರಾಜ್ಯದ 70 ಆಸ್ಪತ್ರೆಗಳಲ್ಲಿ ಅಂಗಾಂಗ ಕಸಿ ಚಿಕಿತ್ಸೆ ಸೌಲಭ್ಯವಿದೆ. ಬೆಂಗಳೂರು ನಗರದಲ್ಲಿ 47, ದಕ್ಷಿಣ ಕನ್ನಡದಲ್ಲಿ 9, ಮೈಸೂರಿನಲ್ಲಿ 6, ಧಾರವಾಡದಲ್ಲಿ 4, ಕಲಬುರಗಿಯಲ್ಲಿ 2 ಹಾಗೂ ಬೆಳಗಾವಿ ಮತ್ತು ಉಡುಪಿಯಲ್ಲಿ ತಲಾ ಒಂದು ಆಸ್ಪತ್ರೆ ಅಂಗಾಂಗ ಕಸಿಗೆ ನೋಂದಣಿಯಾಗಿವೆ.

ಅಂಗಾಂಗ ವಿಫಲರಾದವರು ಹಾಗೂ ಅಂಗಾಂದ ದಾನ ಮಾಡಲು ಬಯಸುವವರು ಮಾಹಿತಿಗಾಗಿ ದೂ: 080-23295636, ಮೊ: 9845006768. ಇ-ಮೇಲ್ ವಿಳಾಸ: jeevasarthakathe@gmail.com ಸಂಪರ್ಕಿಸಬಹುದು.

ದಾನಕ್ಕೆ ಅರ್ಹರು ಯಾರು?: ಅಂಗಾಂಗ ದಾನ ಮಾಡಲು ಹಾಗೂ ಪಡೆಯಲು ವಯಸ್ಸಿನ ಮಿತಿಯಿಲ್ಲ. ಆದರೆ, ಕ್ಯಾನ್ಸರ್, ಏಡ್ಸ್ ಸೋಂಕಿತರನ್ನು ಹೊರತುಪಡಿಸಿ ಎಲ್ಲರೂ ದಾನ ಮಾಡಬಹುದಾಗಿದೆ. ಅಪಘಾತ, ಬ್ರೖೆನ್​ಸ್ಟ್ರೋಕ್​ನಂತಹ ಸಂದರ್ಭದಲ್ಲಿ ರೋಗಿಯ ಮಿದುಳು ನಿಷ್ಕ್ರಿಯವಾಗಿರುತ್ತದೆ. ಆದರೆ, ಹೃದಯ ಬಡಿತವಿರುತ್ತದೆ. ಆಗಲೂ ಕಣ್ಣು ದಾನ ಮಾಡಬಹುದು. ಮರಣಾನಂತರ ನಿರ್ದಿಷ್ಟ ಸಮಯದೊಳಗೆ ಹೃದಯ, ಮೂತ್ರಪಿಂಡ, ಯಕೃತ್, ಕರುಳು, ಶ್ವಾಕೋಶ, ಮೇದೋಜೀರಕ ಗ್ರಂಥಿ ದಾನ ಪಡೆದು ನಿಗದಿತ ಸಮಯದೊಳಗೆ ಕಸಿ ಮಾಡಬೇಕು ಎನ್ನುತ್ತಾರೆ ವೈದ್ಯರು.

ಎಷ್ಟು ಮಂದಿಯಿಂದ ದಾನ?: 2017ರಲ್ಲಿ 88 ಮಂದಿ ಅಂಗಾಂಗ ದಾನ ಮಾಡಿದರೆ, 2018ರಲ್ಲಿ 89; 2019ರಲ್ಲಿ 105 ಕ್ಕೆ ಏರಿಕೆಯಾಗಿತ್ತು. ಆದರೆ, ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಈ ಸಂಖ್ಯೆ 35ಕ್ಕೆ ಇಳಿಕೆಯಾಗಿತ್ತು. ನಂತರದಲ್ಲಿ ಏರಿಕೆ ಕಂಡು ಬಂದಿದ್ದು, 2021ರಲ್ಲಿ 70; 2022ರಲ್ಲಿ 151 ಹಾಗೂ 2023ರಲ್ಲಿ (ಈವರೆಗೆ) 94 ಮಂದಿಯಿಂದ ಅಂಗಾಂಗ ದಾನವಾಗಿದೆ. ರಸ್ತೆ ಅಪಘಾತಕ್ಕೆ ಒಳಗಾಗಿ ಸಾಯುವ ಮುನ್ನ ಅಂಗಾಂಗ ದಾನ ಮಾಡಿದ ಹರೀಶ್ ಅಂಗಾಂಗ ದಾನಕ್ಕೆ ಪ್ರೇರಣೆಯಾಗಿದ್ದರು. ರಾಜ್ಯ ಸರ್ಕಾರ ಅಪಘಾತದ ಗಾಯಾಳುಗಳ ತುರ್ತು ಚಿಕಿತ್ಸೆಗಾಗಿ ‘ಹರೀಶ್ ಸಾಂತ್ವನ ಯೋಜನೆ’ ಜಾರಿಗೆ ತಂದಿತ್ತು. ನಂತರ ಜನರಲ್ಲಿ ಮತ್ತೆ ನಿರಾಸಕ್ತಿ ಮುಂದುವರಿಯಿತು. ಆದರೆ, ಅಪಘಾತದಿಂದ ಮೃತಪಟ್ಟ ಸಂಚಾರಿ ವಿಜಯ್ ಅವರ ಅಂಗಾಂಗ ದಾನ ಹಾಗೂ ಹೃದಯಾಘಾತದಿಂದ ಮೃತಪಟ್ಟ ನಟ ಪುನೀತ್ ರಾಜ್​ಕುಮಾರ್ ಅವರ ನೇತ್ರದಾನದಿಂದ ಪ್ರೇರಿತರಾಗಿ ಅಂಗಾಂಗ ದಾನಕ್ಕೆ ಜನರು ಮುಂದಾಗಿದ್ದಾರೆ. ಹೀಗಾಗಿ, ಕಳೆದ ಎರಡು ವರ್ಷಗಳಿಂದ ದಾನಿಗಳ ಸಂಖ್ಯೆ ಹೆಚ್ಚಿದೆ.

ಭಾರತೀಯ ಅಂಗಾಂಗ ದಿನ ಆಚರಣೆ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಗುರುವಾರ (ಆ. 3) ಬೆಳಗ್ಗೆ 9.30ಕ್ಕೆ ನಗರದ ಸೆಂಟ್ರಲ್ ಕಾಲೇಜು ಆವರಣದಲ್ಲಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ‘ಭಾರತೀಯ ಅಂಗಾಂಗ ದಿನ’ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ 151 ಅಂಗಾಂಗ ದಾನಿಗಳ ಕುಟುಂಬಗಳನ್ನು ಗೌರವಿಸುವ ಮೂಲಕ ಅಂಗಾಂಗ ದಾನದ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಇಲಾಖೆ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.

ಕಸಿ ಚಿಕಿತ್ಸೆ ಹೇಗೆ?: ಮಿದುಳು ನಿಷ್ಕ್ರಿಯಗೊಂಡ ದೇಹದಿಂದ ತೆಗೆದ ಮೂತ್ರಪಿಂಡವನ್ನು 24 ಗಂಟೆಗಳೊಂದಿಗೆ ಕಸಿ ಮಾಡಬೇಕು. ಹೃದಯವನ್ನು 4-6 ಗಂಟೆಯೊಳಗೆ, ಯಕೃತ್, ಶ್ವಾಸಕೋಶ, ಮೇದೋಜೀರಕ, ಸಣ್ಣ ಕರುಳು ಇವುಗಳನ್ನು 6 ಗಂಟೆಯೊಳಗೆ ಕಸಿ ಮಾಡಬೇಕು. ಕಣ್ಣು 14 ದಿನಗಳವರೆಗೆ ಸಂರಕ್ಷಿಸಿ ಇಡಬಹುದಾಗಿದೆ. ಇದಕ್ಕಾಗಿ ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (SOTTO) ದಾನಿಯ ಕುಟುಂಬ, ಕಸಿಗಾಗಿ ಕಾಯುತ್ತಿರುವ ರೋಗಿ ಹಾಗೂ ಆಸ್ಪತ್ರೆಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net