ಸ್ನೇಹಿತರಿಂದಲೇ ಯುವಕನ ಕೊಲೆ

Murder (2) (1)
Published on

ಬೆಂಗಳೂರು: ಮದ್ಯದ ಪಾರ್ಟಿ ಮಾಡುವಾಗ ಕ್ಷುಲ್ಲಕ ವಿಚಾರಕ್ಕೆ ನಡೆದ ಗಲಾಟೆ ವೇಳೆ ಇಬ್ಬರು ಸ್ನೇಹಿತರು ಓರ್ವನ ಮೇಲೆ ಮರದ ರಿಪೀಸ್ ಪಟ್ಟಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಹತ್ಯೆ ಮಾಡಿದ್ದಾರೆ.

ಕನಕನಗರ ನಿವಾಸಿ ಅಜೀಜ್ ಅಹಮದ್ (25) ಮೃತ. ಮೇ 8ರ ತಡರಾತ್ರಿ ಕಾವೇರಿ ಲೇಔಟ್‌ನ ಮರಿಯಣ್ಣನಪಾಳ್ಯದ ಕಲವರಿ ಬೆಟ್ಟದ ಹಾದಿಯ 4ನೇ ಕ್ರಾಸ್‌ನಲ್ಲಿ ಘಟನೆ ನಡೆದಿದೆ. ಈ ಸಂಬಂಧ ಕಾವೇರಿ ಲೇಔಟ್‌ನ ಪವನ್ ಮತ್ತು ವೀರಮಣಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಜೀಜ್ ಮತ್ತು ಆರೋಪಿಗಳಾದ ಪವನ್, ವೀರಮಣಿ ಸ್ನೇಹಿತರಾಗಿದ್ದು, ಪೇಟಿಂಗ್ ಕೆಲಸ ಮಾಡುತ್ತಿದ್ದರು. ಮೇ 8ರ ತಡರಾತ್ರಿ ಮೂವರು ಮರಿಯಣ್ಣಪಾಳ್ಯದ ಕಲವರಿ ಬೆಟ್ಟಕ್ಕೆ ಹಾದಿಯಲ್ಲಿ ಮದ್ಯದ ಪಾರ್ಟಿಗೆ ಸೇರಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಅಜೀಜ್ ಮತ್ತು ಪವನ್ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ಶುರುವಾಗಿ ವಿಕೋಪಕ್ಕೆ ತಿರುಗಿತು. ಆಗ ಪವನ್ ಹಾಗೂ ವೀರಮಣಿ ಸೇರಿ ಮರದ ರಿಪೀಸ್ ಪಟ್ಟಿಯಿಂದ ಅಜೀಜ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ತೀವ್ರ ಗಾಯಗೊಂಡಿದ್ದ ಅಜೀಜ್ ಕುಸಿದುಬಿದ್ದಿದ್ದ. ಮಾರನೇ ದಿನ ವೀರಮಣಿ 108 ಆಂಬುಲೆನ್ಸ್ ಕರೆಸಿ, ‘ಅಪಘಾತವಾಗಿದೆ’ ಎಂದು ಸುಳ್ಳು ಹೇಳಿ, ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದ್ದ. ಮೇ 12ರ ಸಂಜೆ ಚಿಕಿತ್ಸೆ ಫಲಿಸದೆ ಅಜೀಜ್ ಮೃತಪಟ್ಟಿದ್ದ. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ಎಂಬುದು ಗೊತ್ತಾಗಿದೆ.

ಅಮೃತಹಳ್ಳಿ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಸ್ಥಳೀಯರನ್ನು ವಿಚಾರಿಸಿದಾಗ ಗಲಾಟೆ ವಿಚಾರ ಗೊತ್ತಾಗಿತ್ತು. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಮೃತಹಳ್ಳಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net