

ಚಾಮರಾಜನಗರ: ನೂರ್ಕಾಲ ಬಾಳಲೆಂದು ಆಶೀರ್ವಾದ ಪಡೆಯುವ ಹುಟ್ಟುಹಬ್ಬದ ದಿನವೇ ಆ ಮುದ್ದು ಕಂದಮ್ಮ ಸತ್ತು ಹೋದಳು.. 3 ವರ್ಷದ ಮಗಳ ಜನ್ಮದಿನದ ಸಂಭ್ರಮವನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಹಂಚಿಕೊಂಡಿದ್ದ ತಂದೆ ಅದೇ ದಿನ ಮಗುವನ್ನು ಕಳೆದುಕೊಂಡ...
ಮಲೆ ಮಹದೇಶ್ವರ ಬೆಟ್ಟದಿಂದ ಹಿಂದಿರುಗುವಾಗ ಹನೂರಿನ ಮಂಗಲ ರಸ್ತೆಯಲ್ಲಿ ಕಾರು ಪಲ್ಟಿಯಾಗಿ ಮೈಸೂರಿನ ಮಾರ್ಬಳ್ಳಿಯ ನಿವಾಸಿ ವೆಂಕಟೇಶ ಮತ್ತು ಮಂಜು ದಂಪತಿ ಪುತ್ರಿ ತನ್ಮಯಾ(3) ಜನ್ಮದಿನದಂದೇ ಮೃತಪಟ್ಟಳು.
ಗುರುವಾರ ತನ್ಮಯಾ ಹುಟ್ಟುಹಬ್ಬವಾಗಿದ್ದರಿಂದಲೇ ಇವರು ಮಲೆ ಮಹದೇಶ್ವರ ಬೆಟ್ಟಕ್ಕೆ ಬಂದಿದ್ದರು. ದೇವರ ದರ್ಶನ ಪಡೆದು, ಗೋಪುರದ ಮುಂದೆ ಕುಟುಂಬ ಸಮೇತ ಪೋಟೋ ತೆಗೆದುಕೊಂಡಿದ್ದರು. ಮೃತ ಮಗು ತನ್ಮಯಾ ತಂದೆ ವೆಂಕಟೇಶ್ ಈ ಪೋಟೋ ಅನ್ನು ವಾಟ್ಸಾಪ್ ಸ್ಟೇಟಸ್ ಗೆ ಹಾಕಿ "ಇಂದು ನನ್ನ ಮಗಳ ಜನ್ಮ ದಿನದ ಪ್ರಯುಕ್ತ ಶ್ರೀಮಲೆ ಮಹದೇಶ್ವರರ ದರ್ಶನ ಪಡೆದೆವು. ಮಾದಪ್ಪ ಎಲ್ಲರಿಗೂ ಒಳ್ಳೆಯದು ಮಾಡಲಿ"..ಎಂದು ಬರೆದುಕೊಂಡಿದ್ದರು.
ಬಳಿಕ ಬೆಟ್ಟ ಇಳಿದು ಮಂಗಲ ಬಳಿ ಹೋಗುವಾಗ ಕಾರು ಪಲ್ಟಿಯಾಗಿದೆ. ತನ್ಮಯಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ವೆಂಕಟೇಶ, ಮಂಜು, ಕುಟುಂಬದ ಸದಸ್ಯರು ಸೇರಿ ಒಟ್ಟು 6 ಜನರಿಗೆ ಗಂಭೀರ ಗಾಯಗಳಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹನೂರು ಪೊಲೀಸರು ಸಾರ್ವಜನಿಕರ ಸಹಾಯದಿಂದ ಗಾಯಾಳುಗಳನ್ನು ಸಮೀಪದ ಕಾಮಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.