

ಕೇರಳ: ಆಘಾತಕಾರಿ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಯುವವೈದ್ಯೆಯ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆಕೆ ಮೃತಪಟ್ಟಿರುವ ಘಟನೆ ಕೇರಳದ ಕೊಟ್ಟಾರಕ್ಕರಾದಲ್ಲಿ ನಡೆದಿದೆ. ಈ ಘಟನೆಯು ಕೊಟ್ಟಾರಕ್ಕರಾ ತಾಲೂಕು ಆಸ್ಪತ್ರೆಯಲ್ಲಿ ಬೆಳಗ್ಗೆ 5 ಗಂಟೆ ಸುಮಾರಿಗೆ ನಡೆದಿದೆ.
ಸಂತ್ರಸ್ತೆಯನ್ನು ಡಾ|| ವಂದನಾ ದಾಸ್ ಎಂದು ಗುರುತಿಸಲಾಗಿದ್ದು, ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ಕರೆತಂದಿದ್ದ ಆರೋಪಿ ಸಂದೀಪ್ ಎಂಬಾತ ಚಿಕಿತ್ಸೆ ವೇಳೆ ಕತ್ತರಿಯಿಂದ ಹಲ್ಲೆ ನಡೆಸಿದ್ದಾನೆ. ಶಾಲಾ ಶಿಕ್ಷಕನಾಗಿದ್ದ ಸಂದೀಪ್ ಆಸ್ಪತ್ರೆಗೆ ಕರೆತರುವ ಮುಂಚೆ ನೆರೆಹೊರೆಯವರೊಂದಿಗೆ ನಡೆದ ಜಗಳದಲ್ಲಿ ಸಣ್ಣಪುಟ್ಟ ಗಾಯಗೊಂಡಿದ್ದ. ಅನಂತರ ಈತನ ವಿರುದ್ಧ ದೂರು ಸಹ ದಾಖಲಾಗಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರು ಮದ್ಯಪಾನ ಮಾಡಿದ್ದ ಈತನನ್ನು, ವಶಕ್ಕೆ ತೆಗೆದುಕೊಂಡು ಚಿಕಿತ್ಸೆಗೆಂದು ಕರೆತಂದಿದ್ದರು. ಈ ವೇಳೆ ಗಾಯಗಳಿಗೆ ಚಿಕಿತ್ಸೆ ನೀಡುತ್ತಿರುವಾಗ ಅಲ್ಲಿಯೇ ಇದ್ದ ಕತ್ತರಿ ತೆಗೆದುಕೊಂಡ ಸಂದೀಪ್ ವೈದ್ಯೆ ಸೇರಿದಂತೆ ಸೆಕ್ಯೂರಿಟಿ ಗಾರ್ಡ್ ಮತ್ತು ಒಬ್ಬ ಪೊಲೀಸ್ ಅಧಿಕಾರಿಗೆ ಇರಿದಿದ್ದಾನೆ. ನಂತರ ಆತನನ್ನು ತೀವ್ರ ಹರಸಾಹಸ ಪಟ್ಟು ಬಂಧಿಸಲಾಯಿತು
ತೀವ್ರ ಗಾಯಗೊಂಡಿದ್ದ ವೈದ್ಯೆಗೆ ತಕ್ಷಣ ಚಿಕಿತ್ಸೆಯ ವ್ಯವಸ್ಥೆ ಮಾಡಲಾದರೂ, ಚಿಕಿತ್ಸೆ ಫಲಿಸದೆ ಆಕೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರತೀಯ ವೈದ್ಯರ ಸಂಘಟನೆ ಈ ಕುರಿತು ತೀವ್ರ ಆಕ್ರೋಶ ಹೊರಹಾಕಿದ್ದು, ಆರೋಪಿ ಹಾಗೂ ಅಪರಾಧಿಗಳಿಗೆ ಚಿಕಿತ್ಸೆ ನೀಡುವ ವೇಳೆ ಕೋಳ ತೊಡಿಸಬೇಕು ಆದೇಶವಿದ್ದರೂ ಅವನಿಗೆ ಕೋಳ ಹಾಕಿರಲಿಲ್ಲ. ಪೊಲೀಸರ ನಿರ್ಲಕ್ಷ್ಯವೇ ಘಟನೆ ಕಾರಣ ಎಂದು ಆರೋಪಿಸಿದ್ದಾರೆ.(ಏಜೆನ್ಸೀಸ್)