

ಮಂಡ್ಯ: ಕರೊನಾ ವೈರಸ್ ನಂತರದ ಕಾಲದಲ್ಲಿ ಹೃದಯಾಘಾತ ಹಾಗೂ ಕುಸಿದು ಬಿದ್ದು ಸಾಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ತೀವ್ರ ಆತಂಕವನ್ನು ಸೃಷ್ಟಿ ಮಾಡಿದೆ. ಪ್ರತಿನಿತ್ಯ ಒಂದಲ್ಲ ಒಂದು ಕಡೆ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಸಾವಿಗೀಡಾಗುತ್ತಿರುವ ಪ್ರಕರಣಗಳುನ ವರದಿಯಾಗುತ್ತಿದ್ದು, ಕಾರಣ ಏನು ಎಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಇದೀಗ ಹೃದಯಾಘಾತಕ್ಕೆ ಮಂಡ್ಯದ 24 ವರ್ಷದ ಯುವ ನಟ ಬಲಿಯಾಗಿದ್ದಾರೆ. ಪವನ್ ಮೃತ ಕಲಾವಿದ. ಈತ ಮುಂಬೈನಲ್ಲಿಯೇ ನೆಲೆಸಿದ್ದ. ಇವರು ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಹರಿಹರಪುರ ಗ್ರಾಮದವರು. ಹಿಂದಿ, ತಮಿಳು ಕಿರುತೆರೆಯಲ್ಲಿ ಕಲಾವಿದರಾಗಿ ಹೊರಹೊಮ್ಮುತ್ತಿದ್ದರು.
ಸಿನಿಮಾಗಳಲ್ಲಿ ಅಭಿನಯಿಸಿ, ಬೆಳ್ಳಿತೆರೆಯಲ್ಲಿ ಮಿಂಚಬೇಕೆಂದು ಕನಸ್ಸು ಕಂಡಿದ್ದ. ತಂದೆ ನಾಗರಾಜು ಹಾಗೂ ತಾಯಿ ಸರಸ್ವತಿಯೊಂದಿಗೆ ಮುಂಬೈನಲ್ಲಿ ನೆಲೆಸಿದ್ದ ಪವನ್, ಗುರುವಾರ (ಆ.17) ನಸುಕಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇಂದು ಹುಟ್ಟೂರಿನಲ್ಲಿ ಮೃತ ಯುವ ನಟನ ಅಂತ್ಯಸಂಸ್ಕಾರ ನಡೆಯಲಿದೆ. ಮಗನನ್ನು ಕಳೆದುಕೊಂಡು ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.
ಕೆಲ ದಿನಗಳ ಹಿಂದಷ್ಟೇ ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನಲ್ಲಿ ಹೃದಯಾಘಾತದಿಂದ ಮೃತಪಟ್ಟರು. ರಾತ್ರಿ ಊಟ ಮಾಡಿ ಮಲಗಿದವರು ಬೆಳಗ್ಗೆ ಎದ್ದೇಳಲಿಲ್ಲ ಎಂದು ಹೇಳಲಾಗುತ್ತಿದೆ. ಸ್ವಂದನಾ ಸಾವಿನ ಸುದ್ದಿ ಒಂದು ದಿನದ ನಂತರ ತಿಳಿಯಿತು. ಬ್ಯಾಂಕಾಕ್ನಲ್ಲೇ ಮರಣೋತ್ತರ ಪರೀಕ್ಷೆ ಸೇರಿದಂತೆ ಎಲ್ಲ ಪ್ರಕ್ರಿಯೆಯನ್ನು ಮುಗಿಸಿ ಒಂದು ದಿನದ ಬಳಿಕ ಭಾರತಕ್ಕೆ ಕರೆತರಲಾಯಿತು. ಇದಾದ ಬಳಿಕ ಆ. 9ರಂದು ಮಲ್ಲೇಶ್ವರಂನ ಹರಿಶ್ಚಂದ್ರ ಘಾಟ್ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. (ದಿಗ್ವಿಜಯ ನ್ಯೂಸ್)