

ನಮ್ಮ ದೇಹದ ಇಂಧನ ಯಾವುದೆಂದರೆ ಅದು ವಿವಿಧ ಪೋಷಕಾಂಶಗಳು. ನಾವು ತಿನ್ನುವ ಆಹಾರದಿಂದ ಇವುಗಳನ್ನು ಪಡೆಯುತ್ತೇವೆ. ಪ್ರತಿಯೊಂದು ಪೋಷಕಾಂಶವು ವಿವಿಧ ಆಹಾರ ಪದಾರ್ಥಗಳಲ್ಲಿ ಒಳಗೊಂಡಿರುತ್ತದೆ. ನೀವು ಒಂದನ್ನು ಮಾತ್ರ ಪ್ರಮುಖವಾಗಿ ಗಮನಿಸಬೇಕು. ಅದೇನೆಂದರೆ ಸಣ್ಣ ಪೌಷ್ಟಿಕಾಂಶದ ಕೊರತೆಯು ನಮಗೆ ದೊಡ್ಡ ಸಮಸ್ಯೆಗಳನ್ನು ಸೃಷ್ಟಿಸುತ್ತದೆ. ಅದಕ್ಕಾಗಿಯೇ ನೀವು ಪ್ರತಿದಿನ ಯಾವ ರೀತಿಯ ಆಹಾರವನ್ನು ಸೇವಿಸುತ್ತೀರಿ ಎಂದು ನೀವೇ ನಿರ್ಣಯಿಸುವುದು ತುಂಬಾ ಒಳ್ಳೆಯದು. ದೇಹಕ್ಕೆ ಬಹಳ ಮುಖ್ಯವಾದ ಅನೇಕ ಪೋಷಕಾಂಶಗಳಿವೆ. ಅದರಲ್ಲಿ ಪೊಟ್ಯಾಶಿಯಂ ಕೂಡ ತುಂಬಾ ಮುಖ್ಯವಾಗಿದೆ.
ಸರಿಯಾದ ಪೊಟ್ಯಾಶಿಯಂ ಮಟ್ಟವನ್ನು ಕಾಪಾಡಿಕೊಳ್ಳುವುದು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಮುಖ್ಯವಾಗಿದೆ. ಈ ಪೊಟ್ಯಾಶಿಯಂ ಅಗತ್ಯವಾದ ಖನಿಜ ಮತ್ತು ಎಲೆಕ್ಟ್ರೋಲೈಟ್ ಆಗಿದೆ. ಇದು ಸ್ನಾಯುವಿನ ಸಂಕೋಚನಗಳು, ನರಗಳ ಪ್ರಚೋದನೆ ಮತ್ತು ದೇಹದಲ್ಲಿರುವ ದ್ರವದ ಸಮತೋಲನ ಸೇರಿದಂತೆ ಅನೇಕ ದೈಹಿಕ ಕಾರ್ಯಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪೊಟ್ಯಾಶಿಯಂ ಮಟ್ಟವು ಅಗತ್ಯಕ್ಕಿಂತ ಕಡಿಮೆಯಾದಾಗ, ಇದು ಸ್ನಾಯು ದೌರ್ಬಲ್ಯ ಮತ್ತು ಆಯಾಸಕ್ಕೆ ಕಾರಣವಾಗಬಹುದು ಮತ್ತು ಹೃದಯದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಹೀಗಾಗಿ ನಿಮ್ಮ ಆಹಾರದಲ್ಲಿ ಪೊಟ್ಯಾಶಿಯಂ ಭರಿತ ಆಹಾರಗಳನ್ನು ಸೇರಿಸುವುದು ಆರೋಗ್ಯಕರ ಪೊಟ್ಯಾಶಿಯಂ ಮಟ್ಟವನ್ನು ಮರುಸ್ಥಾಪಿಸಲು ಮತ್ತು ನೈಸರ್ಗಿಕವಾಗಿ ನಿರ್ವಹಿಸಲು ಉತ್ತಮ ಮಾರ್ಗವಾಗಿದೆ.
ಪೊಟ್ಯಾಶಿಯಂ ಒಳಗೊಂಡಿರುವ ಆಹಾರ ಮದಾರ್ಥಗಳು ಈ ಕೆಳಕಂಡಂತಿವೆ.
ಸಿಹಿ ಗೆಣಸು: ಮಧ್ಯಮ ಗಾತ್ರದ ಸಿಹಿ ಗೆಣಸು ಸುಮಾರು 450 ಮಿಲಿಗ್ರಾಮ್ನಷ್ಟು ಪೊಟ್ಯಾಶಿಯಂ ಅನ್ನು ಹೊಂದಿರುತ್ತದೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ಬೆಣ್ಣೆಹಣ್ಣು(ಅವಕಾಡೋ): ಆವಕಾಡೊ ಒಂದು ಉತ್ತಮವಾದ ಹಣ್ಣು. ಇದು 975 ಮಿಲಿಗ್ರಾಮ್ನಷ್ಟು ಪೊಟ್ಯಾಶಿಯಂ ಹೊಂದಿರುತ್ತದೆ. ಹೆಚ್ಚಿನ ಪೊಟ್ಯಾಶಿಯಂ ಜತೆಗೆ ಆರೋಗ್ಯಕರ ಕೊಬ್ಬುಗಳು ಮತ್ತು ಫೈಬರ್ ಅಂಶ ಅವಕಾಡೋದಲ್ಲಿ ಹೇರಳವಾಗಿವೆ.
ಬೀನ್ಸ್, ಪಿಯರ್ಸ್: ಬೀನ್ಸ್ನಂತಹ ದ್ವಿದಳ ಧಾನ್ಯಗಳು ಮತ್ತು ಪಿಯರ್ಸ್, ಸಸ್ಯ ಆಧಾರಿತ ಪೊಟ್ಯಾಶಿಯಂ ಅತ್ಯುತ್ತಮ ಮೂಲವಾಗಿದೆ.
ಕಿತ್ತಳೆ: ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳು ರಿಫ್ರೆಶ್ ಮತ್ತು ಪೊಟ್ಯಾಶಿಯಂನ ಉತ್ತಮ ಮೂಲವಾಗಿದೆ. ಮಧ್ಯಮ ಗಾತ್ರ ಕಿತ್ತಳೆ ಹಣ್ಣು ಸುಮಾರು 240 ಮಿಲಿಗ್ರಾಮ್ನಷ್ಟು ಪೊಟ್ಯಾಶಿಯಂ ಅನ್ನು ಹೊಂದಿರುತ್ತದೆ. ಕಿತ್ತಳೆ ಹಣ್ಣನ್ನು ಸ್ನ್ಯಾಕ್ಸ್ ಆಗಿ ಸೇವಿಸಿ ಮತ್ತು ಬೆಳಗಿನ ಉಪಾಹಾರದ ಸಮಯದಲ್ಲೂ ಇದನ್ನು ಸೇರಿಸಿ.
ಮೊಸರು: ಒಂದು ಕಪ್ ಮೊಸರು ಸುಮಾರು 500 ಮಿಲಿಗ್ರಾಮ್ನಷ್ಟು ಪೊಟ್ಯಾಶಿಯಂ ಹೊಂದಿರುತ್ತದೆ.
ಇತರ ಆಹಾರಗಳಾದ ಬಾಳೆಹಣ್ಣುಗಳು, ಕಾಳುಗಳು, ಮೀನುಗಳು, ಬೀಜಗಳು ಮತ್ತು ಹಾಲಿನಲ್ಲಿ ಪೊಟ್ಯಾಶಿಯಂ ಅಧಿಕವಾಗಿದೆ. ನಿಮ್ಮ ದೈನಂದಿನ ಆಹಾರದಲ್ಲಿ ಈ ಪೊಟ್ಯಾಶಿಯಂ ಭರಿತ ಆಹಾರಗಳನ್ನು ಸೇರಿಸುವುದರಿಂದ ನೀವು ಅದನ್ನು ನೈಸರ್ಗಿಕವಾಗಿ ಪಡೆಯುತ್ತೀರಿ ಮತ್ತು ಉತ್ತಮ ಆರೋಗ್ಯವನ್ನು ಹೊಂದುತ್ತೀರಿ. (ಏಜೆನ್ಸೀಸ್)