

ಜಯಭಾರತ ಜನನಿಯ ತನುಜಾತೆ ನಾಡಗೀತೆ ಗುರುವಾರ ಹೈಕೋರ್ಟ್ನಲ್ಲಿ ಮೊಳಗಿತು. ನಾಡಗೀತೆಯ ಹಾಡಿನಲ್ಲಿರುವ ಬೇರೆಬೇರೆ ಧಾಟಿಗಳ ವ್ಯತ್ಯಾಸಗಳನ್ನು ಸುಗಮ ಸಂಗೀತ ಗಾಯಕರು, ಕೋರ್ಟ್ ಹಾಲ್ನಲ್ಲೇ ಹಾಡಿ ನ್ಯಾಯಮೂರ್ತಿಗಳಿಗೆ ತೋರಿಸಿದರು. ಪ್ರತಿನಿತ್ಯ ವಾದ-ಪ್ರತಿವಾದಕ್ಕಷ್ಟೇ ಸೀಮಿತವಾಗಿರುತ್ತಿದ್ದ ಕೋರ್ಟ್ ಕಲಾಪ ಕೆಲ ಗಂಟೆಗಳ ಕಾಲ ನಾಡಗೀತೆ ಹಾಡಲು ಮೀಸಲಾಗಿದ್ದದ್ದು ವಿಶೇಷ...
ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿಯೇ ನಾಡಗೀತೆಯನ್ನು 2 ನಿಮಿಷ 30 ಸೆಕೆಂಡ್ಗಳಲ್ಲಿ ಹಾಡಬೇಕು ಎಂಬುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2022ರ ಸೆ.25ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ಕಲಾಪದ ವೇಳೆ ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ಮೃತ್ಯುಂಜಯ ದೊಡ್ಡವಾಡ ಜಯ ಭಾರತ ಜನನಿಯ ತನುಜಾತೆ..., ಕಟ್ಟುವೆವು ನಾವು ಹೊಸ ನಾಡೊಂದನ್ನು..., ಎದೆ ತುಂಬಿ ಹಾಡಿದೆನು...ಹೀಗೆ ಕೆಲವು ಗೀತೆಗಳನ್ನು ಹಾಡಿ ಅವುಗಳ ಧಾಟಿಯನ್ನು ನ್ಯಾಯಪೀಠಕ್ಕೆ ವಿವರಿಸಿದರು.
ಮಧ್ಯಂತರ ಅರ್ಜಿದಾರರ ಪರ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ವಾದ ಮಂಡಿಸಿ, ರಾಜ್ಯ ಸರ್ಕಾರ ಈಗಾಗಲೆ ತನ್ನೆಲ್ಲ ಅಧಿಕೃತ ಕಾರ್ಯಕ್ರಮಗಳಲ್ಲಿ ಮೈಸೂರು ಅನಂತಸ್ವಾಮಿ ಅವರ ಧಾಟಿಯಲ್ಲೇ ಹಾಡುವುದು ಸೂಕ್ತ ಎಂಬುದನ್ನು ತೀರ್ವನಿಸಿ ಆದೇಶ ಹೊರಡಿಸಿದೆ. ಈ ಆದೇಶ ಹೊರಡಿಸುವ ಮುನ್ನ ಅರ್ಜಿದಾರರು ಈಗ ಎತ್ತಿರುವ ಎಲ್ಲ ತಕರಾರುಗಳನ್ನು ಕೂಲಂಕಷವಾಗಿ ರ್ಚಚಿಸಿದ ನಂತರವೇ ನಿರ್ಧರಿಸಿದೆ. ಇದಲ್ಲದೆ ಸ್ವತಃ ಕುವೆಂಪು ಮತ್ತು ಜಿ.ಎಸ್.ಶಿವರುದ್ರಪ್ಪ ಕೂಡ ಮೈಸೂರು ಅನಂತಸ್ವಾಮಿ ಅವರ ಧಾಟಿಯನ್ನೇ ಅನುಮೋದಿಸಿದ್ದರು ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಇದೇ ಧಾಟಿಯಲ್ಲಿ ಇರಬೇಕು ಎಂಬುದಕ್ಕೆ ನಿಯಮಗಳೇನಿವೆ ಹಾಗೂ ಸರ್ಕಾರದ ಆದೇಶವನ್ನು ಪುರಸ್ಕರಿಸುವ ಕಾನೂನು ಅಂಶಗಳು ಮತ್ತು ವ್ಯಾಖ್ಯಾನಗಳು ಏನಿವೆ ಎಂಬುದನ್ನು ತಿಳಿಸುವಂತೆ ಅರ್ಜಿದಾರರಿಗೆ ಸೂಚಿಸಿತು. ಸರ್ಕಾರದ ಪರ ಹಾಜರಿದ್ದ ವಕೀಲೆ ನವ್ಯಾ ಶೇಖರ್ ಅವರಿಗೆ, ಮಧ್ಯಂತರ ಅರ್ಜಿದಾರರ ಮನವಿಯನ್ನು ಪುರಸ್ಕರಿಸಲು ನಿಮ್ಮ ಬಳಿ ಇರುವ ಪೂರಕ ಅಂಶಗಳೇನು ಎಂಬುದನ್ನೂ ವಿವರಿಸಿ ಎಂದು ನಿರ್ದೇಶಿಸಿ, ವಿಚಾರಣೆಯನ್ನು ಸೆ.1ಕ್ಕೆ ಮುಂದೂಡಿತು.
ಇದಕ್ಕೂ ಮುನ್ನ ಅರ್ಜಿದಾರ ಕಿಕ್ಕೇರಿ ಕೃಷ್ಣಮೂರ್ತಿ ಪರ ವಾದ ಮಂಡಿಸಿದ ಹಿರಿಯ ವಕೀಲ ಅಶೋಕ ಹಾರನಹಳ್ಳಿ, ಅಶ್ವತ್ಥ್ ಅವರು ಹಾಡಿದ ಧಾಟಿಯಲ್ಲಿ ಹಾಡಲು ಶಾಲೆಗಳಲ್ಲಿ ಅವಕಾಶ ನೀಡುತ್ತಿಲ್ಲ. ನಾಡಗೀತೆಯನ್ನು ಇದೇ ಧಾಟಿಯಲ್ಲಿ ಹಾಡಬೇಕು, ಇಷ್ಟೇ ನಿಮಿಷ ಹಾಡಬೇಕೆಂಬ ಅಧಿಕೃತ ಕಾನೂನೇನೂ ಇಲ್ಲ. ಆದರೆ, ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ಮೈಸೂರು ಅನಂತಸ್ವಾಮಿ ಅವರ ಧಾಟಿಯಲ್ಲೇ ಹಾಡಬೇಕೆಂದು ನಿರ್ಬಂಧ ಹೇರಿರುವುದು ಗಾಯನದ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟು ಮಾಡಿದೆ ಎಂದರು.
ಬಿ.ಕೆ.ಸುಮಿತ್ರಾಗೆ ನ್ಯಾಯಪೀಠ ಧನ್ಯವಾದ: ಮಧ್ಯಂತರ ಅರ್ಜಿದಾರರ ಪರವಾಗಿ 82 ವರ್ಷದ ಗಾಯಕಿ ಬಿ.ಕೆ.ಸುಮಿತ್ರಾ ಖುದ್ದು ಹಾಜರಾಗಿ ಮೈಸೂರು ಅನಂತಸ್ವಾಮಿ ಮತ್ತು ಸಿ.ಅಶ್ವತ್ಥ್ ಅವರ ಧಾಟಿಗಳ ಕುರಿತಾದ ವ್ಯತ್ಯಾಸವನ್ನು ನ್ಯಾಯಪೀಠಕ್ಕೆ ತಿಳಿಸಿದರು. ಮಾಜಿ ಸಚಿವೆ ಎಚ್.ಆರ್.ಲೀಲಾವತಿ ಅಧ್ಯಕ್ಷತೆಯಲ್ಲಿ 17 ಜನರ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ ಸರ್ವಾನುಮತದಿಂದ ಮೈಸೂರು ಅನಂತಸ್ವಾಮಿ ಅವರ ಧಾಟಿಯನ್ನೇ ಅಳವಡಿಸಿಕೊಂಡು ನಾಡಗೀತೆ ಪೂರ್ಣಪಾಠ ಬಳಸಬೇಕೆಂದು ಒಪ್ಪಿಕೊಳ್ಳಲಾಯಿತು. ಆದರೀಗ ನಾಡಗೀತೆ ವಿಚಾರದಲ್ಲಿ ಎದ್ದಿರುವ ಗೊಂದಲ ವೈಯಕ್ತಿಕವಾಗಿ ನನಗೆ ಬೇಸರ ತರಿಸಿದೆ. ಸುಗಮ ಸಂಗೀತ ಕ್ಷೇತ್ರದಲ್ಲಿ ಈ ರೀತಿ ಎದ್ದಿರುವ ವಿವಾದ ಆದಷ್ಟು ಶೀಘ್ರ ಮುಕ್ತಾಯವಾಗಲಿ ಎಂದು ಆಶಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ನಾಡು, ನುಡಿಯ ಕಾಳಜಿಗೆ ನಿಮ್ಮಂಥವರ ಹಾಜರಿಯಿಂದ ಕೋರ್ಟ್ ಘನತೆ ಇಂದು ಹೆಚ್ಚಿದೆ. ನಾವೆಲ್ಲಾ ಚಿಕ್ಕಂದಿನಿಂದಲೂ ನಿಮ್ಮ ಹಾಡು ಕೇಳಿ ಬೆಳೆದಿದ್ದೇವೆ. ಒಂದು ವೇಳೆ ನಿಮ್ಮ ಹಾಡನ್ನು ಯಾರಾದರೂ ಕೇಳಿಲ್ಲ ಎಂದಾದರೆ ಅದು ಯಾರು ಇನ್ನೂ ಹುಟ್ಟಿಲ್ಲವೋ ಅವರು ಮಾತ್ರ ಎಂದು ಬಣ್ಣಿಸಿತು.
ಎಲ್ಲರ ಅಭಿಪ್ರಾಯ ಆಲಿಸಿದ ನ್ಯಾಯಪೀಠ, ಅನಂತಸ್ವಾಮಿ ಮತ್ತು ಅಶ್ವತ್ಥ್ ಇಬ್ಬರೂ ದಿಗ್ಗಜರೆ. ಅತಿರಥ ಮಹಾರಥರೇ. ಸಂಗೀತ ಎಂಬುದು ಅತಿದೊಡ್ಡ ಶಾಸ್ತ್ರ ಮತ್ತು ಅಧ್ಯಯನದ ವಿಷಯ ಎಂಬುದನ್ನು ಪುನುರಚ್ಚರಿಸಿತು. ಈ ರಾಷ್ಟ್ರದಲ್ಲಿ ರಾಗಕ್ಕೆ ಪ್ರಧಾನವಾದ ಸ್ಥಾನ ಇದೆ. ರಾಗ ಸರಳವಾಗಿದೆ ಎಂದು ಪ್ರೇಮದ ರಾಗ ಯುದ್ಧ ರಂಗದಲ್ಲಿ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿತು.