

ಒಮ್ಮೆ ನಾನು ಒಂದು ವೃದ್ಧಾಶ್ರಮಕ್ಕೆ ಅಲ್ಲಿಯ ನಿವಾಸಿಗಳ ಸ್ಥಿತಿಗತಿಯನ್ನು ವಿಚಾರಿಸಲು ಹೋಗಿದ್ದೆ. ಒಬ್ಬೊಬ್ಬರಿಗೆ ಒಂದೊಂದು ಹಿನ್ನೆಲೆ. ಒಬ್ಬೊಬ್ಬರದು ಒಂದೊಂದು ಕತೆ. ಓರ್ವ ವೃದ್ಧರಂತೂ ಅಸಹನೀಯ ಸ್ಥಿತಿಯನ್ನು ಅನುಭವಿಸುತ್ತ, ಅಸಹಾಯಕರಾಗಿ ಮಂಚದ ಮೇಲೆ ಬಿದ್ದುಕೊಂಡಿದ್ದರು. ಎದ್ದೇಳಲೂ ಆಗದ, ಎದ್ದುಕೂತರೂ ಇತರರ ಸಹಾಯವಿಲ್ಲದೆ ನಡೆಯಲಾಗದ ವಿಧಿ ಅವರದಾಗಿತ್ತು. ಎಲ್ಲದಕ್ಕೂ ಇತರರನ್ನು ಅವಲಂಬಿಸಬೇಕಾಗುತ್ತಿತ್ತು. ಹೌದು, ಮುಪ್ಪು ಅಥವಾ ವೃದ್ಧಾಪ್ಯವೆಂಬುದು ಎಲ್ಲರಿಗೂ ಒಂದು ಸವಾಲು.
ಕೆಲವರಿಗಂತೂ ಒಂದು ಸಮಸ್ಯೆ. ಕಾರಣ, ಪ್ರಾಯದಲ್ಲಿ ನಾವು ಹೇಳಿದಂತೆ ಕೇಳುತ್ತಿದ್ದ ಶರೀರ ವಯಸ್ಸಾದಂತೆ ಅದು ಹೇಳಿದಂತೆ ಕೇಳಲೇಬೇಕಾದ ಪರಿಸ್ಥಿತಿಯನ್ನು ತಂದೊಡ್ಡುತ್ತದೆ. ದೇಹದ ಮೇಲೆ ಮತ್ತು ಅದರ ಚಟುವಟಿಕೆಗಳ ಮೇಲೆ ಹತೋಟಿಯೇ ಇರುವುದಿಲ್ಲ. ಎಲ್ಲೆಂದರಲ್ಲಿ ಮಲ ಮೂತ್ರಗಳ ವಿಸರ್ಜನೆಯೂ ಆಗುತ್ತಿರುತ್ತದೆ. ಬೆನ್ನು ನೋವು, ಮಂಡಿನೋವು, ಕೀಲುನೋವುಗಳ ಪರಿಣಾಮವಾಗಿ, ಚಲನವಲನ ಕುಂಠಿತಗೊಳ್ಳುತ್ತದೆ. ಜೊತೆಗೆ ದೃಷ್ಟಿಮಾಂದ್ಯ, ಶ್ರವಣ ಮಾಂದ್ಯ, ನಿದ್ರಾ ಹೀನತೆ, ಜ್ಞಾಪಕ ಶಕ್ತಿಯ ಕೊರತೆ ಇವುಗಳ ಹೊರತಾಗಿ ವಯೋ ಸಹಜವಾದ ಕಾಯಿಲೆಗಳು ಸೇರಿ ಬಿಟ್ಟರಂತೂ ಸಮಸ್ಯೆ ಗಂಭೀರ. ಏತನ್ಮಧ್ಯೆ ತಿನ್ನುವ ಚಪಲ ಕಡಿಮೆ ಆಗಿರುವುದಿಲ್ಲ. ಆದರೆ ತಿಂದಿದ್ದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಜೀರ್ಣಾಂಗಗಳಲ್ಲಿ ಕಡಿಮೆ ಆಗಿರುತ್ತದೆ. ಇವುಗಳ ನಡುವೆ ಸಂಪರ್ಕ ಅಭಾವ, ಪರಿಣಾಮವಾಗಿ ಅಜೀರ್ಣ, ಭೇದಿ ಇಲ್ಲವೆ ಮಲಬದ್ಧತೆ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ.
ಹೀಗೆ ಬದುಕಿರಲು ಕಷ್ಟವಾಗಿ, ಸಾಯಲೂ ಸಾಧ್ಯವಾಗದೆ ಚಡಪಡಿಸುತ್ತಿದ್ದ ಆ ವೃದ್ಧರನ್ನು ಕೇಳಿದೆ. ‘ಹೇಗಿದ್ದೀರಿ?’ ನನ್ನ ಪ್ರಶ್ನೆಗೆ ಅವರು ಕೊಟ್ಟ ಮಾರ್ವಿುಕ ಉತ್ತರ ಸಾಯುವವರೆಗೆ ಬದುಕಲೇಬೇಕಲ್ಲಪ್ಪ! ಎಂಬುದು. ಈ ವೃದ್ಧಾಪ್ಯದಲ್ಲಿ ಎಲ್ಲರ ಉತ್ತರವೂ ಇದೇ ಆಗಬಹುದಾದ ಕಾರಣ, ಇದಕ್ಕೆ ಕೆಲವೊಂದು ಪರಿಹಾರಗಳನ್ನು ಪ್ರಸ್ತುತಪಡಿಸುತ್ತಿದ್ದೇನೆ. ಹಾಗಂತ ಇಂತಹ ಪರಿಸ್ಥಿತಿಗಳು ಬಂದಾಗ, ಆತ್ಮಹತ್ಯೆ ಒಂದು ಶಾಶ್ವತ ಪರಿಹಾರವೆಂದೆನಿಸಿದರೂ, ಅದು ಸಾಧುವಲ್ಲ. ಕಾರಣ, ಕಾನೂನಾತ್ಮಕವಾಗಿ ಆತ್ಮಹತ್ಯೆ ಎಂಬುದು ಅಪರಾಧ. ಆತ್ಮಹತ್ಯೆ ಮಾಡಿಕೊಳ್ಳಲು ಬೇಕಾದ ಧೈರ್ಯವನ್ನು ಬದುಕಲು ಬಳಸಿಕೊಂಡರೆ, ಸಾಯುವ ಯೋಚನೆಯೇ ಹತ್ತಿರ ಸುಳಿಯದು. ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಆತ್ಮಹತ್ಯೆಯೇ ಪರಿಹಾರವಾಗುತ್ತಿದ್ದಲ್ಲಿ ಈ ಭೂಮಿಯ ಮೇಲೆ ಯಾರೂ ಬದುಕಿ ಉಳಿಯುತ್ತಿರಲಿಲ್ಲ. ಆದುದರಿಂದ ಸಾಯುವವರೆಗೆ ಬದುಕಲೇ ಬೇಕು. ಬದುಕಿ ಬಾಳಲೇಬೇಕು. ಅದು ಹೇಗೆ ಸಾಧ್ಯವೆಂಬುದರ ಕುರಿತು ಕೆಲವು ಕಿವಿಮಾತುಗಳು.
ವೃದ್ಧಾಪ್ಯವೆಂಬುದು ಒಂದು ಶಾಪವಲ್ಲ. ದೀರ್ಘಾಯುಷ್ಯ ಭಗವಂತ ನೀಡಿದ ಅನುಗ್ರಹವೆಂದು ತಿಳಿದುಕೊಳ್ಳಬೇಕು. ವೃದ್ಧಾಪ್ಯವೆಂಬುದು ವಯೋವೃದ್ಧರೆಲ್ಲಾ ಹಾದುಹೋಗಲೇ ಬೇಕಾದ ಅನಿವಾರ್ಯ ಜೈವಿಕ ಬದಲಾವಣೆಯಾಗಿರುವ ಕಾರಣ, ಇಂಜಿನ್ ಹಳೆಯದಾದಂತೆ, ಅದರ ಬಿಡಿಭಾಗಗಳೆಲ್ಲಾ ಸವೆದು ಹೋಗುವಂತೆ, ದೇಹದ ಅಂಗಾಂಗಗಳ ಶಿಥಿಲಗೊಳ್ಳುವಿಕೆಯೂ ಸಹಜ ಸ್ವಾಭಾವಿಕವೆಂಬ ತಿಳುವಳಿಕೆ ಇರಲಿ. ಈ ಬದಲಾವಣೆಯನ್ನು ಎದುರಿಸಲು ಸನ್ನದ್ಧರಾಗಿರಬೇಕು. ಲವಲವಿಕೆಯ ಕೊನೆಯೇ ಮುಪ್ಪಿನ ಆರಂಭ. ಆದುದರಿಂದ ಸಕಾರಾತ್ಮಕ ಮನೋಭಾವನೆಯನ್ನು ಎಂದೂ ಕಳೆದುಕೊಳ್ಳಬಾರದು. ಜೀವನದಲ್ಲಿ ಬದುಕಿ ಬಾಳುವ ಉತ್ಸಾಹ-ಉಲ್ಲಾಸವಿಲ್ಲವಾದರೆ, ಇತರರಿಂದ ಇದನ್ನು ತುಂಬಲಾಗದು, ಅಂತೆಯೇ ಈ ಲವಲವಿಕೆ ನಮ್ಮಲ್ಲೇ ಇದ್ದರೆ, ಇದನ್ನು ಇತರರಿಂದಲೂ ಕಸಿದುಕೊಳ್ಳಲಾಗದು.
ಬರೇ ದಿನ ದೂಡುವುದು ಬದುಕುವ ಪರಿಯಲ್ಲವೆಂದು ತಿಳಿದು. ಏನಾದರೊಂದು ಚಟುವಟಿಕೆಯಲ್ಲಿ ನಮ್ಮನ್ನು ನಾವೇ ತೊಡಗಿಸಿಕೊಳ್ಳಬೇಕು. ಅದು ಓದುವ ಹವ್ಯಾಸವಿರಬಹುದು. ಸುಶ್ರಾವ್ಯ ಸಂಗೀತವನ್ನು ಕೇಳುವ ಆಸಕ್ತಿ ಇರಬಹುದು, ಇಲ್ಲವೇ ಅಡಿಗೆ ಮಾಡುವ, ಗೆಳೆಯರ ಜೊತೆ ಹರಟೆ ಹೊಡೆಯುವ ಮಕ್ಕಳು, ಪ್ರಕೃತಿ ಪ್ರಾಣಿಗಳ ಜೊತೆ ಕಾಲ ಕಳೆಯುವ ಕ್ರಮ ಇರಬಹುದು. ಎಲ್ಲವೂ ಬದುಕಿನ ಮೇಲಿನ ಪ್ರೀತಿಯನ್ನು ಹೆಚ್ಚಿಸುತ್ತದೆ. ಅಂತೆಯೇ ಮನೆ ಕೆಲಸ, ತೋಟಗಾರಿಕೆ, ಆಧ್ಯಾತ್ಮಿಕ ಚಿಂತನೆ, ಪಾಠ, ಪ್ರವಚನ, ಸಮಾಜಸೇವೆಗಳಲ್ಲಿ ತೊಡಗಿಸಿಕೊಂಡರೆ, ಬದುಕು ಭಾರವೆನಿಸುವುದೇ ಇಲ್ಲ. ಅಲ್ಪ ಸಂತೋಷಿಗಳಾಗಿರುವುದರಿಂದ, ಅಂದರೆ ಅಲ್ಪವನ್ನೇ ಅನಂತವೆಂದು ಸ್ವೀಕರಿಸುವುದರಿಂದ, ವೃದ್ಧಾಪ್ಯ ಹೊರೆ ಅಥವಾ ಭಾರವೆನಿಸದು, ನಮ್ಮ ಅಗತ್ಯ, ಅವಶ್ಯಕತೆಗಳನ್ನು ಕಡಿಮೆ ಮಾಡಿಕೊಂಡಷ್ಟ್ಟೂ ನಮಗೇ ಅನುಕೂಲ. ನಮ್ಮ ಅಪೇಕ್ಷೆ- ನಿರೀಕ್ಷೆಗಳನ್ನು ಕನಿಷ್ಠ ಪ್ರಮಾಣದಲ್ಲಿ ಇಟ್ಟುಕೊಂಡಷ್ಟು ನೆಮ್ಮದಿ ನಮಗೇ.
ತೃಪ್ತಿಯೇ ಸಿರಿತನ, ಅತೃಪ್ತಿಯೇ ಬಡತನ ಎಂಬ ಮಾತನ್ನು ಮರೆಯದೆ, ತಮ್ಮಲ್ಲಿ ಇಲ್ಲದನ್ನು ಬಯಸದೆ, ಪಾಲಿಗೆ ಬಂದದ್ದು ಪಂಚಾಮೃತವೆಂದು ತಿಳಿದು ಇದ್ದುದರಲ್ಲೇ ಸಂತಸಪಟ್ಟುಕೊಳ್ಳುವ ಮನೋಭಾವ ಕ್ಷೇಮಕರ. ತಮ್ಮನ್ನು ತಾವೇ ಇತರರ ಜೊತೆ ತುಲನೆ ಮಾಡಿಕೊಳ್ಳುವ ಪರಿಪಾಠವಂತೂ ಬೇಡವೇ ಬೇಡ. ಕಾರಣ, ಆನೆಯ ಭಾರ ಆನೆಗೆ. ಇರುವೆಯ ಭಾರ ಇರುವೆಗೆ. ಅಂತೆಯೇ ಎಲ್ಲರ ಜೊತೆ ಏರ್ಪಡಿಸಿಕೊಳ್ಳಲೇ ಬೇಕಾದ ಹೊಂದಾಣಿಕೆಯೇ ವೃದ್ಧಾಪ್ಯದಲ್ಲಿ ಪಾಲಿಸಬೇಕಾದ ಮೂಲಮಂತ್ರ. ಒಟ್ಟಿನಲ್ಲಿ ಸದಾಕ್ರಿಯಾಶೀಲರಾಗಿ ಇರುವುದರಿಂದಲೂ, ಜೀವವನ್ನು ಪ್ರೀತಿಸುವುದರಿಂದಲೂ, ಸಾಯುವವರೆಗೆ ಬದುಕಲೇ ಬೇಕಲ್ಲ ಎಂಬ ನಿರಾಶಾಭಾವ ಬಳಿಗೆ ಬಾರದು.