ಆಡಿದ್ದು 2 ಪಂದ್ಯ, ಆತಿಥೇಯರೇ ಅತಿಥಿ! ಚಾಂಪಿಯನ್ಸ್​ ಟ್ರೋಫಿಯಿಂದ ಪಿಸಿಬಿಗೆ 85% ನಷ್ಟ | PCB

ವಿಜಯವಾಣಿ (14)
Published on

PCB: ಮಾರ್ಚ್​ 09ರಂದು ದುಬೈನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳಿಂದ ಜಯಗಳಿಸಿದ ಭಾರತ 2025ರ ಚಾಂಪಿಯನ್ಸ್ ಟ್ರೋಫಿಯನ್ನು ತನ್ನ ಮುಡಿಗೇರಿಸಿಕೊಂಡಿತು. ಈ ಟೂರ್ನಿಯಲ್ಲಿ ಆತಿಥೇಯರಾಗಿ ಕಣಕ್ಕಿಳಿದ ಪಾಕಿಸ್ತಾನ ತಂಡ, ಕೇವಲ ಎರಡೇ ಎರಡು ಪಂದ್ಯಗಳನ್ನಾಡಿ ಅತಿಥಿಯಾಗಿ ಹೊರನಡೆಯಿತು. ಇದು ಹಲವರ ಟೀಕೆ, ವ್ಯಂಗ್ಯಗಳಿಗೆ ಗುರಿಯಾಯಿತು. ಈ ಸೋಲಿನಿಂದ ಕಂಗೆಟ್ಟಿರುವ ಪಿಸಿಬಿಗೆ ಇದೀಗ ಮತ್ತೊಂದು ಹೊಡೆತ ಬಿದ್ದಿದೆ.

29 ವರ್ಷಗಳ ಬಳಿಕ ಐಸಿಸಿ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ವಹಿಸಿಕೊಂಡ ಪಾಕಿಸ್ತಾನ, ಈ ಬಾರಿ ತವರಿನಲ್ಲೇ ಟ್ರೋಫಿಯನ್ನು ಎತ್ತಿಹಿಡಿಯುವ ದೊಡ್ಡ ಕನಸನ್ನು ಕಂಡಿತ್ತು. ಆದರೆ, ಬಿರುಸಿನ ಪೈಪೋಟಿ ನೀಡುವುದಿರಲಿ, ಆಡಿದ ಎರಡೇ ಎರಡು ಪಂದ್ಯಗಳಲ್ಲಿ ಟೂರ್ನಿಯಿಂದ ಹೊರಬಿದ್ದಿತು. ಇದರಿಂದ ಪಾಕ್​ ಭಾರೀ ಮುಖಭಂಗವನ್ನು ಅನುಭವಿಸಿತು. ಲಾಹೋರ್​ನಲ್ಲಿ ತನ್ನ ಮೊದಲ ಪಂದ್ಯವನ್ನು ನ್ಯೂಜಿಲೆಂಡ್ ಎದುರು ಆಡಿದ ಪಾಕ್​, ನಂತರ ದುಬೈನಲ್ಲಿ ಭಾರತ ವಿರುದ್ಧ ಎರಡನೇ ಪಂದ್ಯವನ್ನಾಡಿತು.

ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪಾಲಿಗೆ ಚಾಂಪಿಯನ್ಸ್ ಟ್ರೋಫಿ ಆರ್ಥಿಕ ಮತ್ತು ವ್ಯವಸ್ಥಾಪನಾ ವಿಪತ್ತಾಗಿ ಪರಿಣಮಿಸಿದೆ. ಟೂರ್ನಿಯ ಸಮಯದಲ್ಲಿ ಪೂರ್ಣಗೊಂಡ ಒಂದು ಸ್ವದೇಶಿ ಪಂದ್ಯಕ್ಕೆ 869 ಕೋಟಿ ರೂ. ಹೂಡಿಕೆ ಮಾಡಿದ್ದ ಪಿಸಿಬಿ, ಹಾಕಿದ ಬಂಡವಾಳದಲ್ಲಿ ಶೇ.85ರಷ್ಟು ನಷ್ಟವನ್ನು ಅನುಭವಿಸಿದೆ ಎಂದು ವರದಿ ಉಲ್ಲೇಖಿಸಿದೆ.

ವರದಿಗಳ ಪ್ರಕಾರ, ಪಿಸಿಬಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನಾಡಿಸಲು ರಾವಲ್ಪಿಂಡಿ, ಲಾಹೋರ್ ಮತ್ತು ಕರಾಚಿ ಸ್ಟೇಡಿಯಂ ನವೀಕರಿಸಲು ಸುಮಾರು PKR 18 ಬಿಲಿಯನ್ ( ಸುಮಾರು 58 ಮಿಲಿಯನ್ ಡಾಲರ್) ವ್ಯಯಿಸಿದೆ. ನವೀಕರಣದ ವೆಚ್ಚವು ನಿರೀಕ್ಷಿತ ಬಜೆಟ್‌ಗಿಂತ ಶೇ.50ರಷ್ಟು ಹೆಚ್ಚಾಗಿದೆ. ಇದರ ನಂತರದಲ್ಲಿ ಕಾರ್ಯಕ್ರಮದ ಸಿದ್ಧತೆಗಳಿಗಾಗಿ 40 ಮಿಲಿಯನ್ ಡಾಲರ್ ಹಣವನ್ನೂ ಖರ್ಚು ಮಾಡಿದೆ ಎಂದು ವರದಿಯಾಗಿದೆ.

ಭಾರೀ ನಷ್ಟ ಉಂಟಾದ ಹಿನ್ನಲೆ ಪಿಸಿಬಿ ರಾಷ್ಟ್ರೀಯ ಟಿ20 ಚಾಂಪಿಯನ್‌ಶಿಪ್‌ನ ಪಂದ್ಯ ಶುಲ್ಕವನ್ನು ಪಿಸಿಬಿ ಶೇ.90ರಷ್ಟು ಕಡಿತಗೊಳಿಸಿದ್ದು, ಮೀಸಲು ಆಟಗಾರರ ಪಾವತಿಗಳನ್ನು ಶೇ.87.5ರಷ್ಟು ಕಡಿಮೆ ಮಾಡಲು ನಿರ್ಧರಿಸಿದೆ. ಯಾವುದೇ ಅಧಿಕೃತ ಘೋಷಣೆಯಿಲ್ಲದೆ ಇತ್ತೀಚೆಗೆ ಪಂದ್ಯ ಶುಲ್ಕವನ್ನು 40 ಸಾವಿರ ರೂ.ನಿಂದ 10,000 ರೂ.ಗೆ ಇಳಿಸಿರುವುದಾಗಿ ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net