

ತುಮಕೂರು: ಮನುಷ್ಯನ ಸಾಧನೆ, ಆತನ ಸಮಾಜ ಸೇವೆಗಳು ಸಾವಿನ ನಂತರವು ಜನ ಕೊಂಡಾಡುವಂತಿರಬೇಕು. ಇದಕ್ಕೆ ನಮ್ಮೆದುರಿಗ ನಿದರ್ಶನ ನಟ ಡಾ.ಪುನೀತ್ ರಾಜಕುಮಾರ್ ಎಂದು ನಗರ ಶಾಸಕ ಜಿ.ಬಿ.ಜೋತಿಗಣೇಶ್ ಹೇಳಿದರು.
ನಗರದ ಎಸ್.ಎಸ್.ಪುರಂ ಮಯೂರು ಯುವ ವೇದಿಕೆ ವತಿಯಿಂದ ಆಯೋಜಿಸಿದ್ದ ಡಾ.ಪುನೀತ್ರಾಜಕುಮಾರ್ ಅವರ 50ನೇ ಹುಟ್ಟು ಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಅವರು, ಬಲಗೈನಲ್ಲಿ ಕೊಟ್ಟ ದಾನ ಎಡಗೈಗೆ ಗೊತ್ತಾಗದಂತೆ ಪುನೀತ್ ರಾಜಕುಮಾರ್ ಬದುಕಿದ್ದರು. ಅವರು ಸಾಯುವವರೆಗೂ ಮಾಡಿದ ದಾನ, ಧರ್ಮಗಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಪುನೀತ್ ಅವರ ಸಮಾಜ ಸೇವೆ ಇಡೀ ಯುವ ಸಮೂಹಕ್ಕೆ ಮಾದರಿ ಎನಿಸಿದೆ ಎಂದರು.
ಓರ್ವ ಕಲಾವಿದರಾಗಿ, ಸಮಾಜ ಸೇವಕರಾಗಿ ಪುನೀತ್ರಾಜಕುಮಾರ್ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ತೋರಿಸಿಕೊಟ್ಟು ಹೋಗಿದ್ದಾರೆ. ಬಾಲನಟನಾಗಿ ಚಿತ್ರರಂಗ ಪ್ರವೇಶ ಮಾಡಿ ಒಳ್ಳೆಯ ಸಾಮಾಜಿಕ ಸಂದೇಶಗಳಿರುವ ಸಿನಿಮಾ ಮಾಡಿ, ತಂದೆ ಡಾ.ರಾಜಕುಮಾರ್ರನ್ನೇ ಮೀರಿ ಬೆಳೆದರು. ಕಲಾಸೇವೆ ಜತೆಗೆ ಪುನೀತ್ ಸಾಮಾಜಿಕ ಸೇವೆಯನ್ನು ಅವರ ಕುಟುಂಬ ಮುಂದುವರೆಸಿಕೊಂಡು ಹೋಗುವ ಮೂಲಕ ಅವರನ್ನು ಮತ್ತಷ್ಟು ಜೀವಂತವಾಗಿಡಲು ಪ್ರಯತ್ನಿಸುತ್ತಿದೆ. ಕರ್ನಾಟಕದಲ್ಲಿಯೇ ಅಲ್ಲದೆ ವಿಶ್ವದಲ್ಲಿಯೇ ಪುನೀತ್ ರಾಜುಕುಮಾರ್ ಅಭಿಮಾನಿಗಳಿದ್ದಾರೆ ಎಂದು ತಿಳಿಸಿದರು.
ಮಯೂರ ಯುವ ವೇದಿಕೆಯ ಅಧ್ಯಕ್ಷ ಪಿ.ಸದಾಶಿವಯ್ಯ ಮಾತನಾಡಿ, ಕನ್ನಡಿಗರ ಹೃದಯದಲ್ಲಿ ಸದಾ ನೆಲೆಸಿರುವ ಪುನೀತ್ ರಾಜಕುಮಾರ್ ಅವರ 50ನೇ ಹುಟ್ಟು ಹಬ್ಬವನ್ನು ನಮ್ಮ ಮಯೂರು ಯುವ ವೇದಿಕೆಯಿಂದ ಆಚರಿಸ ಲಾಗುತ್ತಿದೆ. ಕಲಾವಿದರಾಗಿಯೇ ಅಲ್ಲ, ಸಮಾಜ ಸೇವಕರಾಗಿಯೂ ಪುನೀತ್ ಸಹಸ್ರಾರು ಜನರ ಬಾಳಿಗೆ ಬೆಳಕಾಗಿದ್ದಾರೆ. ಅವರ ಕಲಾ ಸೇವೆ ಮತ್ತು ಸಮಾಜ ಸೇವೆ ಇತರರಿಗೆ ಮಾದರಿಯಾಗಲಿ, ಕುಟುಂಬದವರು ಅವರ ಸಮಾಜಮುಖಿ ಕೆಲಸಗಳನ್ನು ಮುಂದುವರೆಸಲು ಭಗವಂತ ಶಕ್ತಿ ನೀಡಲಿ ಎಂದರು.
ಮಯೂರ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎನ್.ಆರ್.ಸ್ವಾಮಿ ಮಾತನಾಡಿ,ನಮ್ಮ ವೇದಿಕೆ ಆರಂಭದಿಂದಲೂ ಡಾ.ರಾಜ್, ಪುನೀತ್ ರಾಜಕುಮಾರ್ ಅವರ ಹುಟ್ಟು ಹಬ್ಬ, ಪುಣ್ಯಸ್ಮರಣೆ ಕಾರ್ಯಕ್ರಮಗಳ ಜತೆಗೆ, ಅವರ ಚಲನಚಿತ್ರಗಳು ವಿಜಯೋತ್ಸವಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಪುನೀತ್ ರಾಜಕುಮಾರ್ ಅವರ 50ನೇ ಹುಟ್ಟು ಹಬ್ಬದ ಅಂಗವಾಗಿ ಹಿರಿಯ ನಾಗರಿಕರಿಗೆ ಆರೋಗ್ಯ ತಪಾಸಣೆ, ಇನ್ನಿತರ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ, ಪುನೀತ್ ಅಭಿಮಾನಿಗಳು, ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಕಸ್ತೂರ ಬಾ ಆಸ್ಪತ್ರೆಯ ಸಹಯೋಗದಲ್ಲಿ ಹಿರಿಯ ನಾಗರಿಕರಿಗೆ ಉಚಿತವಾಗಿ ರಕ್ತದೊತ್ತಡ, ಸಕ್ಕರೆ ಕಾಯಿಲೆ ತಪಾಸಣೆ ನಡೆಸಲಾಯಿತು.ಈ ವೇಳೆ ಸಿ.ಬಿ.ಜಗದೀಶ್, ರಾಜಕುಮಾರ್ ಗುಪ್ತ, ರವಿ ಜಂಗಾವಿ,ವಿನಯ್ ಜೈನ್, ಉಗಮಶ್ರೀನಿವಾಸ್,ಚಂದ್ರು, ದಾಸಣ್ಣ,ಮನೋಹರಬಾಬು, ದಿನೇಶಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.