ನೀವು ಕ್ಷಮೆಯಾಚಿಸುವ ಅಗತ್ಯವಿಲ್ಲ; ರವೀನಾ ಟಂಡನ್ ಪೋಸ್ಟ್​​ಗೆ ಅಭಿಮಾನಿ ಪ್ರತಿಕ್ರಿಯಿಸಿದ್ದು ಹೀಗೆ..

Untitled-design-2024-09-14T155717.602
Published on

ಮುಂಬೈ: 90ರ ದಶಕದ ಜನಪ್ರಿಯ ನಟಿ ರವೀನಾ ಟಂಡನ್ ಅವರ ಅಭಿಮಾನಿಗಳಿಗೆ ಕೊರತೆಯಿಲ್ಲ. ಇಂದಿಗೂ ಅವರು ತಮ್ಮದೇ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ನಟಿ ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ನನ್ನ ಜತೆ ಫೋಟೋ ತೆಗೆದುಕೊಳ್ಳಲು ಬಂದಾಗ ನನ್ನ ನಡೆದುಕೊಂಡ ರೀತಿ ತಪ್ಪಾಗಿದೆ ಎಂದು ಹೇಳಿ ಕ್ಷಮೆಯಾಚಿಸಿದ್ದರು. ಘಟನಯನ್ನು ಸಂಪೂರ್ಣವಾಗಿ ವಿವರಿಸಿದ್ದರು.

ಕೆಲವು ದಿನಗಳ ಹಿಂದೆ ನಾನು ಲಂಡನ್‌ಗೆ ಹೋಗಿದ್ದಾಗ ಕೆಲವರು ಫೋಟೋ ತೆಗೆದುಕೊಳ್ಳಲು ಭೇಟಿಯಾದರು. ನಾನು ಆ ಸಮಯದಲ್ಲಿ ಒಬ್ಬಂಟಿಯಾಗಿದ್ದೆ , ಭಯಗೊಂಡು ಅವರ ಪೋಟೋ ತೆಗೆದುಕೊಳ್ಳುವುದನ್ನು ನಿರಾಕರಿಸಿದೆ. ಬಹುಶಃ ನಾನು ಅವರಿಗೆ ಫೋಟೋ ತೆಗೆದುಕೊಳ್ಳಲು ಅವಕಾಶ ನೀಡಬಹುದಿತ್ತು. ಅವರು ಒಳ್ಳೆಯ ಅಭಿಮಾನಿಗಳಾಗಿರಬಹುದು. ನಾನು ಆತಂಕದಿಂದ ನಾನಿದ್ದ ಸ್ಥಳದಿಂದ ಬೇಗನೆ ಹೊರಟುಹೋದೆ ಹಾಗೂ ಭದ್ರತಾ ಸಿಬ್ಬಂದಿಗೆ ಸಹಾಯ ಮಾಡುವಂತೆ ಕೇಳಿದೆ.

ನನ್ನ ಈ ವರ್ತನೆಯು ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿರಬಹುದು. ಆದರೆ ಕೆಲವು ತಿಂಗಳ ಹಿಂದೆ ಬಾಂದ್ರಾದಲ್ಲಿ ನಡೆದ ಘಟನೆಯಿಂದ ಜನರು ನನ್ನನ್ನು ಭೇಟಿಯಾಗಲು ಬಂದರೆ ನಾನು ಉದ್ವೇಗಕ್ಕೆ ಒಳಗಾಗುತ್ತೇನೆ. ಆದ್ದರಿಂದ ಹಾಗೆ ನಡೆದುಕೊಂಡೆ, ಇದಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಎಂದು ಬರೆದುಕೊಂಡಿದ್ದರು. ನಟಿ ಯಾರನ್ನು ಉದ್ದೇಶಿಸಿ ಈ ಪೋಸ್ಟ್​ ಮಾಡಿದ್ದರೋ ಅವರಿಗೆ ತಲುಪಿದೆ ಎಂದೆನ್ನಿಸುತ್ತದೆ. ಆ ಅಭಿಮಾನಿಯೂ ಅವರ ಸಂದೇಶಕ್ಕೆ ಪ್ರತಿಕ್ರಿಯಿಸಿದ್ದಾರೆ.

ಹಾಯ್​​ ರವೀನಾ ನಾನು ಲಂಡನ್​ನಿಂದ ಭವಿನ್​ ಪಟೇಲ್​. ನೀವು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸ್ಟೋರಿಯಲ್ಲಿ ಫೋಟೋ ತಗೆದುಕೊಳ್ಳಲು ಬಂದಿದ್ದು ನಾನೇ. ನಾನು ನಡೆದುಕೊಂಡು ಹೋಗುತ್ತಿದೆ. ನಿಮ್ಮನ್ನು ನೋಡಿ ಉತ್ಸುಕನಾಗಿ ಫೋಟೋ ತೆಗೆದುಕೊಳ್ಳಬೇಕು ಎಂದುಕೊಂಡೆ. ಏಕೆಂದರೆ ನಾನು ನಿಮ್ಮ ಸಿನಿಮಾಗಳನ್ನು ನೋಡಿ ಬೆಳೆದಿದ್ದೇನೆ. ನೀವು ನನ್ನ ನೆಚ್ಚಿನ ನಟಿ ಆದ್ದರಿಂದಲೇ ನಾನು ನಿಮ್ಮ ಬಳಿಗೆ ಬಂದು ಫೋಟೋ ತೆಗೆದುಕೊಳ್ಳಲು ಆಶಿಸಿದ್ದೆ ಎಂದು ಹೇಳಿದರು.

ನೀವು ಕ್ಷಮೆಯಾಚಿಸುವ ಅವಶ್ಯಕತೆ ಇಲ್ಲ. ನಾನು ಮಹಿಳೆಯರ ದೃಷ್ಟಿಕೋನದಿಂದ ಎಲ್ಲವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ. ಅದರಲ್ಲೂ ನೀವು ಮನೆಯಿಂದ ದೂರದಲ್ಲಿರುವಾಗ ಹುಡುಗರು ಹತ್ತಿರ ಬಂದರೂ ಆತಂಕಕ್ಕೆ ಒಳಗಾಗುತ್ತೀರಿ. ಆ ಸಮಯದಲ್ಲಿ ನನಗೂ ಶಾಕ್​ ಆಯಿತು. ಏನಾಯಿತು ಎಂದುಕೊಂಡು ಬೇಸರವಾಯಿತು. ಏನೇ ಆಗಿದ್ದರೂ ನೀವು ನನ್ನ ಅಚ್ಚುಮೆಚ್ಚಿನ ನಟಿ. ನೀವು ಕ್ಷಮೆಯಾಚಿಸಿ, ಯಾವ ಕಾರಣಕ್ಕೆ ಹಾಗೆ ನಡೆದುಕೊಂಡಿರಿ ಎಂದು ವಿವರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದೀರಿ. ಇದನ್ನು ನೋಡಿದ ಬಳಿಕ ನಿಮ್ಮ ಮೇಲಿನ ಗೌರವ ಮತ್ತಷ್ಟು ಹೆಚ್ಚಾಯಿತು ಎಂದು ತಿಳಿಸಿದರು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net