

ಗಂಗೆ, ಗೀತೆ, ಗಾಯತ್ರಿ, ಗೋವು ಹಾಗೂ ಗೋವಿಂದ. ಇವು ಸನಾತನ ಹಿಂದೂಗಳ ಪವಿತ್ರ ಶ್ರದ್ಧಾ ಕೇಂದ್ರಗಳಾಗಿವೆ. ಗಂಗಾ ಸ್ನಾನದಿಂದ ಪಾಪಮುಕ್ತಿಯಾದರೆ, ಗೀತೆಯಿಂದ ಜೀವನ್ಮುಕ್ತಿ ನಿಶ್ಚಯ. ಗಂಗೆಯು ಸಾಕ್ಷಾತ್ ಪರಮಾತ್ಮ ಪದ್ಮನಾಭನ ಮುಖೋದ್ಭವೆಯಾಗಿದೆ. ಈ ಭಗವದ್ವಾಣಿಯಾದ ಗೀತೆಯೇ ಪರಮ ಉತ್ಕೃಷ್ಟವಾದ ಶಾಸ್ತ್ರ. ಇದನ್ನು ಅಭ್ಯಾಸ ಮಾಡದಿದ್ದರೆ ಇತರ ಶಾಸ್ತ್ರಗ್ರಂಥಾಧ್ಯಯನದಿಂದ ಫಲವೇನು? ಭಗವದ್ಗೀತೆ ಎಂದರೆ ಭಗವಂತನ ಉಪದೇಶ, ಭಗವಂತನ ಸಂದೇಶ ಅಥವಾ ಭಗವಂತನ ಗೀತೆ ಎಂದು ಅರ್ಥ. ಇದು ವ್ಯಾಸಮಹರ್ಷಿ ವಿರಚಿತ ಗಣೇಶ ಲಿಖಿತ ಮಹಾಭಾರತ ಗ್ರಂಥದ ಭಾಗವಾಗಿದೆ. ಭೀಷ್ಮಪರ್ವದ 23 ರಿಂದ 40ನೇ ಅಧ್ಯಾಯಗಳ ನಡುವೆ ಯೋಗಾಚಾರ್ಯ ಶ್ರೀಕೃಷ್ಣ ಪರಮಾತ್ಮ ಹಾಗೂ ಅರ್ಜುನನ ನಡುವಿನ ಸಂಭಾಷಣೆ ಆಗಿದ್ದು, ಇದರಲ್ಲಿ 18 ಅಧ್ಯಾಯ 700 ಶ್ಲೋಕಗಳಿವೆ.
ಈ ಉಪದೇಶವು ಕೌರವರು ಮತ್ತು ಪಾಂಡವರು ಯುದ್ದಕ್ಕೆ ಸಿದ್ಧತೆ ನಡೆಸಿದಾಗ ಕುರುಕ್ಷೇತ್ರ ರಣಕ್ಷೇತ್ರದಲ್ಲಿ ನಡೆದದ್ದು, ಅರ್ಜುನನು ತನ್ನ ಬಂಧುಗಳನ್ನು ವಧಿಸುವ ವಿಷಾದದಿಂದ ಯುದ್ಧ ಮಾಡಲಾಗದೆ ಸಂಕಟಕ್ಕೆ ಒಳಗಾದಾಗ, ಶ್ರೀಕೃಷ್ಣನು ಧರ್ಮ, ಯೋಗ, ಭಕ್ತಿ, ಜ್ಞಾನ ಕರ್ಮ ಮತ್ತು ಮೋಕ್ಷದ ಸಾರವನ್ನು ನೀಡುತ್ತಾನೆ. ಭಗವದ್ಗೀತೆಯ ಪ್ರಾಮುಖ್ಯಮತ್ತು ಮಹತ್ವ: ಇದು ಕೇವಲ ಧಾರ್ವಿುಕ ಗ್ರಂಥವಲ್ಲ, ಮಾನವ ಜೀವನಕ್ಕೆ ಮಾರ್ಗದರ್ಶನ ನೀಡುವ ವಿವಿಧ ಆಯಾಮಗಳ ತತ್ತ್ವ ದರ್ಶನ ಗ್ರಂಥ. ಯೋಗ ಮತ್ತು ಆಧ್ಯಾತ್ಮಿಕತೆಯ ಹಲವು ಮಾರ್ಗಗಳ ಕೈಪಿಡಿ. ಗೀತೆಯ ನೈತಿಕ ತತ್ತ್ವ, ಧರ್ಮ, ಕರ್ತವ್ಯ, ನಿರ್ಭೀತಿಯ ತ್ಯಾಗ ಇತ್ಯಾದಿಗಳನ್ನು ಒತ್ತಿ ಹೇಳುತ್ತದೆ. ಇದು ಯಾವುದೇ ಮತ-ಪಂಥ, ಕಾಲ ಅಥವಾ ಪ್ರದೇಶಕ್ಕೆ ಸೀಮಿತವಲ್ಲ. ಇದು ನೀತಿ ಮತ್ತು ಆಧ್ಯಾತ್ಮಿಕ ತತ್ವಗಳ ಸಾರ ತಿಳಿಸುವ ಸಾರ್ವಕಾಲಿಕ ಗ್ರಂಥ.
ಯೋಗದ ಗ್ರಂಥ: ಭಗವದ್ಗೀತೆಯಲ್ಲಿ ಯೋಗ ಶಬ್ದವನ್ನು ಸುಮಾರು 7-8 ಬಾರಿ ವಿವಿಧ ಅರ್ಥಗಳಲ್ಲಿ ಬಳಸಲಾಗಿದೆ. ಯೋಗ ಎಂದರೆ ಆಯ್ಕೆಯ ವಿಧಾನ. ಜೀವನದ ಸಮತೋಲನ ಸ್ಥಿತಿ. ಶ್ರೀಕೃಷ್ಣ ಅರ್ಜುನನಿಗೆ ನೀಡಿದ ಉಪದೇಶಗಳಲ್ಲಿ ನಾಲ್ಕು ಪ್ರಮುಖ ಯೋಗ ಮಾರ್ಗವನ್ನು ಪ್ರಸ್ತಾಪಿಸುತ್ತಾರೆ.
1. ಕರ್ಮಯೋಗ : ಇದು ನಿರ್ಲಿಪ್ತ ಸೇವೆಯ ಮಾರ್ಗ. ನಿಮಗೆ ಕರ್ಮ ಮಾಡುವ ಹಕ್ಕಿದೆ. ಆದರೆ ಫಲದಲ್ಲಿ ಆಸೆ ಇಟ್ಟುಕೊಳ್ಳಬೇಡ. - ‘ ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’. ಕೌಶಲ್ಯ ಪೂರ್ಣ ಕೆಲಸವೇ ಯೋಗವಾಗಿದೆ.
2. ಜ್ಞಾನಯೋಗ : ‘ಜ್ಞಾನಂ ಲಭತೇ ಪರಂ’: ಜ್ಞಾನದಿಂದ ಮುಕ್ತಿಯ ಮಾರ್ಗ. ಶ್ರದ್ಧೆ ಮತ್ತು ಅನುಭವದ ಮೂಲಕ ಪರಮ ಜ್ಞಾನ ಪಡೆಯಬಹುದು. ಮಾನವನು ಅಜ್ಞಾನದಿಂದ ಜ್ಞಾನಕ್ಕೆ ಭಯದಿಂದ ಧೈರ್ಯಕ್ಕೆ , ಅಸ್ಥಿರತೆಯಿಂದ ಸಮತ್ವಕ್ಕೆ ಸಾಗಬೇಕು. ಜ್ಞಾನ ಎಂಬ ಅಗ್ನಿಯು ಎಲ್ಲ ಅಜ್ಞಾನವನ್ನು ದೂರ ಮಾಡುತ್ತದೆ.
3. ಭಕ್ತಿಯೋಗ : ಭಗವಂತನ ಭಕ್ತಿಮಾರ್ಗ. ಎಲ್ಲವನ್ನೂ ತ್ಯಜಿಸಿ ಶರಣಾಗು, ನಾನು ನಿನ್ನನ್ನು ಪಾಪಗಳಿಂದ ಮುಕ್ತಗೊಳಿಸುತ್ತೇನೆ ಎನ್ನುವ ಭಗವಂತನನ್ನು ಜತನದಿಂದ ನೆನೆಯುವುದು, ನವವಿಧದಲ್ಲಿ ಸೇವಿಸುವುದು.
4. ರಾಜಯೋಗ : ಸಮತ್ವಭಾವದಲ್ಲಿ ಮನಸ್ಸು ಸ್ಥಿರಗೊಂಡು ಧ್ಯಾನ ಮಾರ್ಗದಲ್ಲಿ ಕರ್ಮಮಾಡುವುದು. ‘ಯೋಗಸ್ಥ ಕುರು ಕರ್ವಣಿ’ ಎಂಬ ಆತ್ಮ ಸಾಕ್ಷಾತ್ಕಾರಾದ ಮಾರ್ಗವನ್ನು ತೋರಿಸುತ್ತದೆ.
ಭಗವದ್ಗೀತೆಯ ಪ್ರಸಿದ್ಧ ವಾಕ್ಯಗಳು : = ಧರ್ಮವಿರುವಲ್ಲಿ ಗೆಲುವು ನಿಶ್ಚಿತ. = ಸಮಭಾವವು ಯೋಗವೆಂದು ಕರೆಯಲ್ಪಡುತ್ತದೆ. = ಆತ್ಮನಿಗೆ ಜನನ ಮತ್ತು ಮರಣವಿಲ್ಲ. = ಶ್ರದ್ಧಾವಂತನಿಗೆ ಜ್ಞಾನ ದೊರಕುತ್ತದೆ. = ಆತ್ಮನು ಹಳೆಯ ವಸ್ತ್ರಗಳನ್ನು ಬಿಸಾಕಿ ಹೊಸದನ್ನು ಧರಿಸುವಂತೆ, ಶರೀರವನ್ನು ಬಿಟ್ಟು ಹೊಸ ದೇಹವನ್ನು ಪಡೆದುಕೊಳ್ಳುತ್ತದೆ. = ಪರಧರ್ಮವನ್ನು ಸುಂದರವಾಗಿ ಆಚರಿಸುವುದಕ್ಕಿಂತ ಸ್ವಧರ್ಮವನ್ನು ತಪ್ಪದೆ ಅನುಸರಿಸುವುದು ಶ್ರೇಯಸ್ಕರ.
ಭಗವದ್ಗೀತೆಯ ನಿರಂತರ ಪ್ರಸ್ತುತತೆ : ಇದೊಂದು ಜೀವನದ ದಿವ್ಯದರ್ಶನ. ಆಧ್ಯಾತ್ಮಿಕ ಪ್ರಗತಿಯ ಕೈದೀವಿಗೆ. ಎಲ್ಲ ವಯಸ್ಸಿನ, ಎಲ್ಲಾ ವೃತ್ತಿ-ಪ್ರವೃತ್ತಿಯವರಿಗೆ ನೈತಿಕ ಮೌಲ್ಯ, ಶಕ್ತಿ, ಪ್ರೇರಣೆ ನೀಡುತ್ತದೆ. ಗೀತೆಯು ಯೋಗದ ಪ್ರಭಾವವನ್ನು ಆತ್ಮಚಿಂತನೆ-ಲೋಕೋಪಕಾರವನ್ನು ಗಾಢವಾಗಿ ವಿವರಿಸುತ್ತದೆ.