

Patna: ಬಿಹಾರದ ಚುನಾವಣಾ (Bihar Election) ಕಣ ದಿನ ಕಳೆದಂತೆ ರಂಗು ಪಡೆದುಕೊಂಡಿದ್ದು, ಎರಡು ಮೈತ್ರಿಕೂಟಗಳ ನಾಯಕರುಗಳು ಅಬ್ಬರದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.
ಬಿಹಾರದ ಸಿವಾನ್, ಭೋಜ್ಪುರ ಮತ್ತು ಬಕ್ಸಾರ್ ಜಿಲ್ಲೆಗಳಲ್ಲಿ ನಡೆದ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮೂರು ದಶಕಗಳ ಹಿಂದೆ ರಾಮ ರಥಯಾತ್ರೆ ನಡೆಸಿದ್ದ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಬಂಧಿಸುವ ಮೂಲಕ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ದೊಡ್ಡ ಪಾಪ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 1990 ರ ಸಮಷ್ಟಿಪುರದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡ ಸಿಎಂ ಯೋಗಿ, 500 ವರ್ಷಗಳಿಂದ ದೇಶವನ್ನು ಕಲುಷಿತಗೊಳಿಸಿದ್ದ ಕಳಂಕವನ್ನು ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣವು ಅಳಿಸಿಹಾಕಿದೆ ಎಂದರು.
2007 ರಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸಿದ ಯುಪಿಎ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಸಲ್ಲಿಸಲಾದ ಅಫಿಡವಿಟ್ನಲ್ಲಿ ಭಗವಾನ್ ರಾಮ ಅಸ್ತಿತ್ವದಲ್ಲಿಲ್ಲ ಎಂದು ಉಲ್ಲೇಖಿಸಿದೆ, 1989 ರಲ್ಲಿ ಮುಲಾಯಂ ಸಿಂಗ್ ಯಾದವ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ರಾಮನ ಭಕ್ತರ ಮೇಲೆ ಗುಂಡು ಹಾರಿಸಲು ಆದೇಶಿಸಿತ್ತು ಎಂದರು. ಸಿವಾನ್ ಜಿಲ್ಲೆಯ ರಘುನಾಥಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಆದಿತ್ಯನಾಥ್, ಸ್ಥಳೀಯ ಆರ್ಜೆಡಿ ಅಭ್ಯರ್ಥಿ ಒಸಾಮಾ ಶಹಾಬ್ ಅವರನ್ನು ಉಲ್ಲೇಖಿಸಿ, ಅವರ ದಿವಂಗತ ತಂದೆ ಮೊಹಮ್ಮದ್ ಶಹಾಬುದ್ದೀನ್ ಒಬ್ಬ ಭಯಾನಕ ದರೋಡೆಕೋರನಾಗಿದ್ದ, ಸಂಸದನಾಗಿಯೂ ಕಾರ್ಯನಿರ್ವಹಸಿದ್ದ ಎಂದರು.
ಆರ್ಜೆಡಿ ಕುಖ್ಯಾತಿ ಗಳಿಸಿದ ಕುಟುಂಬ ಸದಸ್ಯರನ್ನು ಚುನಾವಣೆಯಲ್ಲಿ ತನ್ನ ಅಭ್ಯರ್ಥಿಯಾಗಿಸುವ ಮೂಲಕ ಜಂಗಲ್ರಾಜ್ಯವನ್ನು ಮರಳಿ ತರಲು ಬಯಸುತ್ತಿದೆ, ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕೀಯವನ್ನೆ ಮುಂದುವರೆಸುತ್ತಿದೆ, ಕಾಂಗ್ರೆಸ್ ಮತ್ತು ಆರ್ಜೆಡಿ ಔರಂಗಜೇಬನ ಸಮಾಧಿಯ ಮುಂದೆ 'ಸಜ್ದಾ' (ಸಾಷ್ಟಾಂಗ ನಮಸ್ಕಾರ) ಮಾಡಲು ಹೆಸರುವಾಸಿಯಾಗಿದೆ, ಇಂತಹ ಶಕ್ತಿಗಳು ಅಧಿಕಾರಕ್ಕೆ ಬರಲು ಬಿಡಬೇಡಿ ಎಂದು ಹೇಳಿದರು.
ರಾಜ್ಯದಲ್ಲಿ 2005 ಕ್ಕಿಂತ ಮೊದಲು, 'ಸಬ್ಕಾ ಸಾಥ್, ಪರಿವಾರ್ ಕಾ ವಿಕಾಸ್' ಇತ್ತು, ಈಗ ಡಬಲ್ ಎಂಜಿನ್ ಸರ್ಕಾರದ ನೆರವಿನಿಂದ ಬಿಹಾರದ ಮಹಿಳೆಯರು ಸಬಲರಾಗುತ್ತಿದ್ದಾರೆ, ಈ ಸರ್ಕಾರ ಅಭಿವೃದ್ಧಿ ಮತ್ತು ಮಹಿಳಾ ಸುರಕ್ಷತೆಯನ್ನು ಮಾತ್ರ ಖಾತರಿಪಡಿಸುತ್ತದೆ, ಸಬ್ಕಾ ಸಾಥ್, ಸಬ್ಕಾ ವಿಕಾಸ್ ತತ್ವದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಕರ್ಪೂರಿ ಠಾಕೂರ್, ಜಗಜೀವನ್ ರಾಮ್, ರಾಜೇಂದ್ರ ಪ್ರಸಾದ್ ಮತ್ತು ಜಯಪ್ರಕಾಶ್ ನಾರಾಯಣ್ರಂತಹ ಮಹಾನ್ ನಾಯಕರ ತತ್ವಗಳ ಮೇಲೆ ಎನ್ಡಿಎ ಸರ್ಕಾರ ಬಿಹಾರವನ್ನು ಆಳುತ್ತದೆ ಎಂದರು.
ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ಫಲಿತಾಂಶ ಹೊರಬೀಳಲಿದೆ. ಮಹಾಘಟಬಂದನ್ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ತೇಜಸ್ವಿ ಯಾದವ್ ಹೆಸರನ್ನು ಘೋಷಿಸಲಾಗಿದ್ದು, ಇತ್ತ ಎನ್ಡಿಎ ಮೈತ್ರಿಕೂಟ ಯಾರನ್ನು ತನ್ನ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ನಾಯಕರು, ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್)