

ತಿರುವನಂತಪುರಂ: ಸಂಸತ್ತಿನ ಒಳಗೆ ಮತ್ತು ಹೊರಗೆ ಹೋರಾಟ ಮಾಡಿದಂತೆ, ಕೇರಳದಲ್ಲಿಯೂ ಮತದಾರರ ಪಟ್ಟಿಗಳ ಪರಿಷ್ಕರಣೆಯ (SIR) ಅನುಷ್ಠಾನವನ್ನು ಕಾಂಗ್ರೆಸ್ ಪಕ್ಷ ವಿರೋಧಿಸುತ್ತದೆ ಎಂದು ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ( ಅ 29) ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಸಂಸದೆ ಪ್ರಿಯಾಂಕ, ಚುನಾವಣಾ ಆಯೋಗವು ಕೇರಳ ಸೇರಿದಂತೆ ಇತರ ಅನೇಕ ರಾಜ್ಯಗಳಲ್ಲಿ ಎಸ್‌ಐಆರ್ ನಡೆಸಲು ಯೋಚನೆ ನಡೆಸಿದ್ದು, ನಾವೆಲ್ಲಾ ಅದನ್ನು ಬಲವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ಬಿಹಾರದಲ್ಲಿ ಚುನಾವಣಾ ಆಯೋಗ ನಡೆಸಿರುವ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಹೇಗೆ ಮಾಡಿದ್ದಾರೆ ಎಂಬುವುದನ್ನೊಮ್ಮೆ ಗಮನಿಸಿದರೆ, ಅದರ ನಿಜರೂಪ ಬಯಲಾಗಲಿದೆ. ಪ್ರತಿ ರಾಜ್ಯದಲ್ಲೂ ಹಾಗೆ ಮಾಡಲಿದ್ದರೆ, ಇದು ಚುನಾವಣೆಗಳಲ್ಲಿ ವಂಚನೆ ಮಾಡುವ ಏಕೈಕ ಮಾರ್ಗವಾಗಿದ್ದು, ಪ್ರಜಾಪ್ರಭುತ್ವವನ್ನು ಸಹ ದುರ್ಬಲಗೊಳಿಸುತ್ತದೆ ಎಂದು ಆರೋಪಿಸಿದರು. ಕೇಂದ್ರ ಚುನಾವಣಾ ಆಯೋಗ ಈಗಾಗಲೇ ರಾಷ್ಟ್ರವ್ಯಾಪಿ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಚಿಂತನೆ ನಡೆಸಿದ್ದು, ಮೊದಲ ಹಂತವಾದ ಬಿಹಾರದ ಬಳಿಕ, ಮುಂಬರುವ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಒಟ್ಟು 12 ರಾಜ್ಯಗಳಲ್ಲಿ ಎರಡನೇ ಹಂತದ ಎಸ್‌ಐಆರ್ ನಡೆಸುವುದಾಗಿ ಘೋಷಿಸಿದೆ. ಇದರಲ್ಲಿ ಕೇರಳವು ಸೇರಿದೆ, ಇತ್ತೀಚೆಗೆ ಈ ವಿಷಯವಾಗಿ ಮಾತನಾಡಿದ ಸಿಎಂ ಪಿಣರಾಯಿ ವಿಜಯನ್, ಅಪ್ರಾಯೋಗಿಕ ಎಂದು ಕರೆದಿದ್ದರು.
ಸಿಎಂ ವಿಜಯನ್ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಕೇರಳ ಮುಖ್ಯ ಚುನಾವಣಾ ಅಧಿಕಾರಿ ರಥನ್ ಯು ಕೇಳ್ಕರ್, ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಈ ಆಯಾಮದ ಉದ್ದೇಶವಾಗಿದ್ದು, ಎಲ್ಲಾ ರಾಜಕೀಯ ಪಕ್ಷಗಳು ತಮ್ಮ ದೂರುಗಳನ್ನು ಸಲ್ಲಿಸಲು ವೈಯಕ್ತಿಕವಾಗಿ ಭೇಟಿಯಾಗಬಹುದು ಎಂದಿದ್ದರು. ಇಡೀ ಪಟ್ಟಿಯನ್ನು ಪರಿಶೀಲಿಸಲಾಗುವುದು ಮತ್ತು ಎಲ್ಲಾ ಅರ್ಹ ಮತದಾರರ ಹೆಸರನ್ನು ಉಳಿಸಲಾಗುವುದು, ಈ ವಿಷಯವಾಗಿ ರಾಜ್ಯದ ಜನರು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ನಾವು ಇದನ್ನು ಅದ್ಭುತ ರೀತಿಯಲ್ಲಿ ನಡೆಸಲಿದ್ದೇವೆ, ಚುನಾವಣಾ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಬೇಕು ಎನ್ನುವುದು ನಮ್ಮ ಬಯಕೆ ಎಂದು ಹೇಳಿದರು.
ವಿಪಕ್ಷಗಳಾದ ಬಿಹಾರದ ಜನ್ ಸುರಾಜ್, ಬಂಗಾಳದ ಆಡಳಿತರೂಢ ಟಿಎಂಸಿ, ತಮಿಳುನಾಡಿನ ಡಿಎಂಕೆ ಸೇರಿದಂತೆ ಹಲವಾರು ಪಕ್ಱಗಳು ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ವಿರೋಧಿಸುತ್ತಲೇ ಬಂದಿವೆ.(ಏಜೆನ್ಸೀಸ್)