

ಚೆನ್ನೈ: ಭಾರತೀಯ ಸಿನಿಮಾ ರಂಗದ ಸೂಪರ್ ಸ್ಟಾರ್ ರಜನಿಕಾಂತ್ ( Rajinikanth ) ಅವರು ಆಘಾತಕಾರಿ ನಿರ್ಧಾರ ಒಂದನ್ನು ತೆಗೆದುಕೊಂಡಿರುವುದಾಗಿ ತಮಿಳು ಮಾಧ್ಯಮಗಳು ವರದಿ ಮಾಡಿವೆ. ಆ ನಿರ್ಧಾರ ಏನೆಂದರೆ, ರಜಿನಿ ಅವರು ಪ್ರಸ್ತುತ 'ಜೈಲರ್ 2' ಸಿನಿಮಾ ಮಾಡುತ್ತಿದ್ದಾರೆ. ಇದರ ಹೊರತಾಗಿ, ಇನ್ನೂ ಎರಡು ಯೋಜನೆಗಳನ್ನು ಪೂರ್ಣಗೊಳಿಸಲಿದ್ದಾರೆ. ಇದಾದ ನಂತರ ಚಿತ್ರರಂಗಕ್ಕೆ ರಜಿನಿ ವಿದಾಯ ಹೇಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಹಾಗಾದರೆ ಈ ಮಾತಿನಲ್ಲಿ ಎಷ್ಟು ಸತ್ಯವಿದೆ ಎಂಬುದನ್ನು ನಾವೀಗ ತಿಳಿಯೋಣ.
ರಜನಿಕಾಂತ್ ಅವರು ಸಿನಿಮಾದಿಂದ ನಿವೃತ್ತಿ ಹೊಂದುವ ಕ್ಷಣ ಬಂದಿದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. 2010 ರಲ್ಲಿ 'ರೋಬೋ' ಸಿನಿಮಾ ನಂತರ, ರಜಿನಿ ಅವರು ಅನೇಕ ಸಿನಿಮಾಗಳನ್ನು ಮಾಡಿದರು. ಆದರೆ, ಒಂದೇ ಒಂದು ಸಿನಿಮಾ ಹಿಟ್ ಆಗಲಿಲ್ಲ. ಇದರ ನಡುವೆ, 'ರೋಬೋ 2.0' ಸ್ವಲ್ಪ ನಿರಾಶೆ ಉಂಟುಮಾಡಿತು.
ಆದಾಗ್ಯೂ, 'ಜೈಲರ್' ಚಿತ್ರದ ಬ್ಲಾಕ್ ಬಸ್ಟರ್ ಯಶಸ್ಸು ರಜಿನಿ ಅವರಿಗೆ ಹೊಸ ಚೈತನ್ಯವನ್ನು ನೀಡಿತು. ಇದರೊಂದಿಗೆ, ಅವರು ಲಾಲ್ ಸಲಾಂ ಮತ್ತು ವೆಟ್ಟೈಯನ್ ನಂತಹ ಚಲನಚಿತ್ರಗಳನ್ನು ಮಾಡಿದರು. ಆದರೆ, ಅವು ವಿಫಲವಾದವು. ಇತ್ತೀಚೆಗೆ ಬಿಡುಗಡೆಯಾದ 'ಕೂಲಿ' ಚಿತ್ರ ಭರ್ಜರಿ ಯಶಸ್ಸು ಗಳಿಸಿತು. ಆದರೆ, ಬಿಡುಗಡೆಗೂ ಮುನ್ನವೇ 1000 ಕೋಟಿ ರೂ. ಗಳಿಸುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಈ ಸಿನಿಮಾ 500 ಕೋಟಿ ರೂ. ಮಾತ್ರ ಗಳಿಸಿತು.
ಪ್ರಸ್ತುತ, ರಜಿನಿ ಅವರು ನೆಲ್ಸನ್ ನಿರ್ದೇಶನದಲ್ಲಿ 'ಜೈಲರ್ 2' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಪೂರ್ಣಗೊಂಡ ನಂತರ, ಅವರು ಕಮಲ್ ಹಾಸನ್ ಅವರೊಂದಿಗೆ ಬಹುತಾರಾಗಣ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ನೆಲ್ಸನ್ ಅವರೇ ಈ ಚಿತ್ರವನ್ನೂ ನಿರ್ದೇಶಿಸಲಿದ್ದಾರೆ ಎಂಬ ಮಾತುಗಳಿವೆ. ಇದರೊಂದಿಗೆ, ರಜಿನಿ ಅವರು ಸುಂದರ್ ಸಿ ನಿರ್ದೇಶನದಲ್ಲಿ ಸಿನಿಮಾ ಮಾಡಲಿದ್ದಾರೆ ಎಂದು ವರದಿಯಾಗಿದೆ. ಈ ಎರಡು ಯೋಜನೆಗಳು ಪೂರ್ಣಗೊಂಡ ನಂತರ, ರಜಿನಿ ನಿವೃತ್ತರಾಗಲಿದ್ದಾರೆ.
ಇನ್ನು ಈ ವದಂತಿಗಳ ಬಗ್ಗೆ ಸದ್ಯಕ್ಕೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ, ಇದು ಬಹುತೇಕ ದೃಢಪಟ್ಟಿದೆ ಅಂತ ರಜಿನಿ ಅವರ ಆಪ್ತರು ಹೇಳುತ್ತಿರುವುದಾಗಿ ತಮಿಳು ಮಾಧ್ಯಮಗಳು ವರದಿ ಮಾಡಿವೆ. ಈ ವಿಚಾರವನ್ನು ಕೇಳಿ ತಲೈವಾ ಅಭಿಮಾನಿಗಳಿಗೆ ಭಾರಿ ಬೇಸರ ಉಂಟು ಮಾಡಿದೆ. ಈ ಸುದ್ದಿ ಸುಳ್ಳಾಗಿರಲಿ ಎಂದು ಅಭಿಮಾನಿಗಳು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.
ಅಂದಹಾಗೆ, ರಜಿನಿಕಾಂತ್ ಜೈಲರ್ 2 ಹೊರತುಪಡಿಸಿ, ಇನ್ನೆರೆಡು ಸಿನಿಮಾಗಳನ್ನು ಮಾಡುತ್ತಿದ್ದು, ಅವು 2027 ರಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ. ಆ ಸಮಯದಲ್ಲಿ ರಜಿನಿ ಅವರಿಗೆ ಸ್ವಲ್ಪ ವಯಸ್ಸಾಗಿರುತ್ತದೆ. ಹೀಗಾಗಿ ಸದ್ಯ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ರಜಿನಿ ಅವರು ನಿವೃತ್ತರಾಗುತ್ತಾರೋ? ಇಲ್ಲವೋ? ಎಂಬುದನ್ನು ನಾವು ಕಾದು ನೋಡಬೇಕಾಗಿದೆ. (ಏಜೆನ್ಸೀಸ್)