

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ, ವಾಯು ಮಾಲಿನ್ಯದಿಂದ ತತ್ತರಿಸುತ್ತಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಇತ್ತೀಚೆಗೆ ದೀಪಾವಳಿ ಹಬ್ಬದ ಆಚರಣೆ ಸಮಯದಲ್ಲಿ ನಿಷೇಧದ ನಡುವೆಯೂ ಪಟಾಕಿಗಳನ್ನು ಸಿಡಿಸಿದ್ದರಿಂದ ವಾಯು ಗುಣಮಟ್ಟ ತೀರಾ ಕಳಪೆಯಾಗಿದೆ. ಅನೇಕ ವರ್ಷಗಳಿಂದಲೂ ರಾಜಧಾನಿಯಲ್ಲಿ ಈ ಸಮಸ್ಯೆ ಕಾಡುತ್ತಲೇ ಇದೆ. ಅದನ್ನು ಕಡಿಮೆ ಮಾಡುವ ಉದ್ದೇಶದಿಂದ ಮೋಡ ಬಿತ್ತನೆ ( Cloud seeding ) ಮೂಲಕ ಕೃತಕ ಮಳೆ ತರುವ ಪ್ರಯತ್ನಕ್ಕೆ ದೆಹಲಿ ಸರ್ಕಾರ ಕೈಹಾಕಿದೆ. ಆದರೆ, ಪ್ರಯತ್ನ ಇದೀಗ ವಿಫಲವಾಗಿದೆ.
ಐಐಟಿ ಕಾನ್ಪುರ ಸಹಯೋಗದೊಂದಿಗೆ ದೆಹಲಿಯಲ್ಲಿ ನಿನ್ನೆ ಎರಡು ಬಾರಿ ಮೋಡ ಬಿತ್ತನೆ ನಡೆಸಲಾಯಿತು. ಇದಕ್ಕಾಗಿ ಸುಮಾರು 1.2 ಕೋಟಿ ರೂ. ವೆಚ್ಚ ಮಾಡಲಾಯಿತು. ಇಷ್ಟೊಂದು ಹಣ ಖರ್ಚು ಮಾಡಿದರು ಕೂಡ ಮಳೆ ಮಾತ್ರ ಬರಲಿಲ್ಲ. ಇದರಿಂದಾಗಿ ದೆಹಲಿ ಸರ್ಕಾರ ತೀವ್ರ ಟೀಕೆಗೆ ಗುರಿಯಾಗಿದೆ.
ಒಟ್ಟು ಐದು ಪ್ರಯೋಗಗಳಿಗೆ ದೆಹಲಿ ಸರ್ಕಾರ 3.21 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಪ್ರತಿ ಪ್ರಯತ್ನಕ್ಕೂ 64 ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿದೆ. ಇಂದು ದೆಹಲಿಯಲ್ಲಿ ಮತ್ತೆ ಮೋಡ ಬಿತ್ತನೆ ನಡೆಯಲಿದೆ.
ಈ ಬಗ್ಗೆ ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ವಿವರಣೆ ನೀಡಿದ್ದು, ಕಡಿಮೆ ಆರ್ದ್ರತೆಯಿಂದಾಗಿ ಮಳೆ ಬೀಳಲಿಲ್ಲ ಎಂದಿದ್ದಾರೆ. ಮೋಡ ಬಿತ್ತನೆಯ ನಂತರ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದಲ್ಲಿ ಲಘು ಮಳೆಯಾಗಿದೆ ಎಂದು ಐಐಟಿ ಕಾನ್ಪುರ ವರದಿ ಹೇಳುತ್ತದೆ. ಎರಡು ವಿಮಾನಗಳನ್ನು ಬಳಸಿಕೊಂಡು ಕಾನ್ಪುರ ಮತ್ತು ಮೀರತ್ ನಡುವೆ ಮೋಡ ಬಿತ್ತನೆ ನಡೆಸಲಾಯಿತು. ಮೊದಲ ವಿಮಾನ ನಿನ್ನೆ ಮಧ್ಯಾಹ್ನ 12.13 ಕ್ಕೆ ಐಐಟಿ ಕಾನ್ಪುರದಿಂದ ಹೊರಟು ಮಧ್ಯಾಹ್ನ 2.30 ಕ್ಕೆ ಮೀರತ್ ತಲುಪಿತು. ಎರಡನೆಯ ವಿಮಾನವು ಮಧ್ಯಾಹ್ನ 3.45 ಕ್ಕೆ ಮೀರತ್ ಬಿಟ್ಟು ಸಂಜೆ 4.45 ಕ್ಕೆ ಹಿಂತಿರುಗಿತು ಎಂದು ಮಂಜಿಂದರ್ ಸಿಂಗ್ ಹೇಳಿದರು.
ದೀಪಾವಳಿಯ ನಂತರ ವಾಯು ಮಾಲಿನ್ಯ ಹೆಚ್ಚಾಗಿರುವುದನ್ನು ನಿಯಂತ್ರಿಸುವ ಉದ್ದೇಶದಿಂದ ದೆಹಲಿ ಸರ್ಕಾರ ಕೃತಕ ಮಳೆ ಸುರಿಯಲು ಯೋಜಿಸಿದೆ. ಅಂದಹಾಗೆ, ಮೋಡ ಬಿತ್ತನೆ ಎಂದರೆ ಮೋಡಗಳಲ್ಲಿ ಅಯೋಡೈಡ್ ಮತ್ತು ಸೋಡಿಯಂ ಕ್ಲೋರೈಡ್ ಸಂಯುಕ್ತಗಳನ್ನು ಸಿಂಪಡನೆ ಮಾಡುವ ಮೂಲಕ ಕೃತಕವಾಗಿ ಮಳೆ ಸುರಿಯುವ ಪ್ರಕ್ರಿಯೆ. ದೀಪಾವಳಿಯಂದು ನಿರ್ಬಂಧಗಳನ್ನು ಉಲ್ಲಂಘಿಸಿ ಪಟಾಕಿ ಸಿಡಿಸಿದ ನಂತರ ಹದಗೆಟ್ಟ ಗಾಳಿಯ ಗುಣಮಟ್ಟ ಹಾಗೆಯೇ ಮುಂದುವರೆದಿದೆ. ವಾತಾವರಣದಲ್ಲಿ ಮಂಜು ಕೂಡ ರೂಪುಗೊಳ್ಳಲು ಪ್ರಾರಂಭಿಸಿದೆ. ಹೀಗಾಗಿ, ಅದನ್ನು ತಹಬದಿಗೆ ತರುವ ಪ್ರಯತ್ನ ನಡೆಯುತ್ತಿದೆ. (ಏಜೆನ್ಸೀಸ್)