

ಕ್ಯಾನ್ಬೆರಾ : ಭಾರತ ಮತ್ತು ಆಸ್ಟ್ರೇಲಿಯಾ ( IND vs AUS ) ನಡುವಿನ ಮೊದಲ ಟಿ20 ಪಂದ್ಯವನ್ನು ರದ್ದುಗೊಳಿಸಲಾಗಿದೆ. ಭಾರಿ ಮಳೆಯಿಂದಾಗಿ ಆಟ ಪುನರಾರಂಭವಾಗುವ ಯಾವುದೇ ಲಕ್ಷಣಗಳು ಗೋಚರಿಸದ ಕಾರಣ ಪಂದ್ಯವನ್ನು ರದ್ದುಗೊಳಿಸುವುದಾಗಿ ಅಂಪೈರ್ಗಳು ಘೋಷಿಸಿದ್ದಾರೆ.
ಕ್ಯಾನ್ಬೆರಾದ ಓವಲ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಟಾಸ್ ಗೆದ್ದಿತು. ಸ್ವಲ್ಪವೂ ಯೋಚನೆ ಮಾಡದೆ ತಂಡದ ನಾಯಕ ಮಿಚೆಲ್ ಮಾರ್ಷ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಇದರೊಂದಿಗೆ, ಭಾರತ ಮೊದಲು ಬ್ಯಾಟಿಂಗ್ ಆರಂಭಿಸಿತು. ಟೀಮ್ ಇಂಡಿಯಾ ಆರಂಭಿಕರಾದ ಅಭಿಷೇಕ್ ಶರ್ಮ ಮತ್ತು ಶುಭಮಾನ್ ಗಿಲ್ ಉತ್ತಮ ಆರಂಭ ನೀಡಿದರು.
14 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 19 ರನ್ ಗಳಿಸಿ ಸ್ಫೋಟಕ ಆಟವಾಡುತ್ತಿದ್ದ ಅಭಿಷೇಕ್ ಶರ್ಮ ಅವರನ್ನು ನಾಥನ್ ಎಲಿಸ್ ಔಟ್ ಮಾಡಿದರು. ಗಿಲ್-ಅಭಿಷೇಕ್ ಜೋಡಿ 3.5 ಓವರ್ಗಳಲ್ಲಿ ಮೊದಲ ವಿಕೆಟ್ಗೆ 35 ರನ್ ಸೇರಿಸಿತು. ನಂತರ ಒನ್ ಡೌನ್ನಲ್ಲಿ ಬಂದ ಸೂರ್ಯಕುಮಾರ್ ಯಾದವ್ ಕೊನೆಗೂ ತಮ್ಮ ಭರ್ಜರಿ ಫಾರ್ಮ್ಗೆ ಮರಳಿದರು.
5 ಓವರ್ಗಳ ನಂತರ ಮೊದಲ ಬಾರಿಗೆ ಮಳೆರಾಯ ಭಾರತದ ಇನ್ನಿಂಗ್ಸ್ಗೆ ಅಡ್ಡಿಪಡಿಸಿತು. ಇದರೊಂದಿಗೆ ಪಂದ್ಯವನ್ನು 18 ಓವರ್ಗಳಿಗೆ ಇಳಿಸಲಾಯಿತು. ಮತ್ತೆ ಪಂದ್ಯ ಪ್ರಾರಂಭವಾದ ತಕ್ಷಣ, ಸೂರ್ಯ ಮತ್ತು ಗಿಲ್ ತಮ್ಮದೇಯಾದ ಶೈಲಿಯಲ್ಲಿ ಬೌಂಡರಿಗಳನ್ನು ಬಾರಿಸುವ ಮೂಲಕ ರನ್ ಗಳಿಸಿದರು. 9.4 ಓವರ್ಗಳ ನಂತರ ಮತ್ತೆ ಮಳೆರಾಯ ಭಾರತೀಯ ಇನ್ನಿಂಗ್ಸ್ಗೆ ಅಡ್ಡಿಪಡಿಸಿತು. ಆ ಹೊತ್ತಿಗೆ ಭಾರತವು ಒಂದು ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿ, ಒಳ್ಳೆಯ ಲಯದಲ್ಲಿತ್ತು.
ಶುಭಮಾನ್ ಗಿಲ್ 20 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ನೊಂದಿಗೆ 37 ರನ್ ಗಳಿಸಿದ್ದರು. ಅದೇ ರೀತಿ ನಾಯಕ ಸೂರ್ಯಕುಮಾರ್ ಯಾದವ್ ಕೇವಲ 24 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ನೊಂದಿಗೆ 39 ರನ್ ಕಲೆಹಾಕಿದ್ದರು. ಆದರೆ, ಮಳೆರಾಯ ಅಡ್ಡಿಪಡಿಸಿದ್ದರಿಂದ ಇಬ್ಬರಿಗೂ ಭಾರಿ ನಿರಾಸೆಯಾಯಿತು.
ಮಳೆ ತುಂಬಾ ಹೊತ್ತು ಮುಂದುವರೆಯಿತು. ಮಳೆ ನಿಂತ ನಂತರವೂ, ಮೈದನಾದ ಪರಿಸ್ಥಿತಿ ಆಡಲು ಅನುಕೂಲಕರವಾಗಿಲ್ಲದ ಕಾರಣ ಅಂಪೈರ್ಗಳು ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ಘೋಷಿಸಿದರು. ಎರಡೂ ತಂಡಗಳ ನಡುವಿನ ಎರಡನೇ ಟಿ20 ಪಂದ್ಯ ಅಕ್ಟೋಬರ್ 31 ರಂದು ಮೆಲ್ಬೋರ್ನ್ನಲ್ಲಿ ನಡೆಯಲಿದೆ. (ಏಜೆನ್ಸೀಸ್)