ಚನ್ನಪಟ್ಟಣದಲ್ಲಿ ಯೋಗೇಶ್ವರ್ ಕೈಗೊಂಬೆಯಾಟ!

CP Yogeshwar
Published on

ಗಂಗಾಧರ್ ಬೈರಾಪಟ್ಟಣ ರಾಮನಗರ

ರಾಜಕಾರಣ ಸಾಧ್ಯತೆಗಳ ಕಲೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮಾತು ಅಕ್ಷರಶಃ ನಿಜವಾಗಿದೆ.ಎರಡೂವರೆ ದಶಕಗಳ ಹಿಂದೆ ಟಿಕೆಟ್ ನೀಡಿಕೆ ಹಿಂದೆ ಡಿ.ಕೆ.ಶಿವಕುಮಾರ್ ಅವರ ಸಾಧ್ಯಾಸಾಧ್ಯತೆಗಳ ಅಳತೆಗೋಲಲ್ಲಿ ದೂರವೇ ಇದ್ದ ಸಿ.ಪಿ. ಯೋಗೇಶ್ವರ್, ಈಗ ಸಾಕಷ್ಟು ಹತ್ತಿರವಾಗುವ ಮೂಲಕ ರಾಜಕೀಯವು ಸಾಧ್ಯತೆಯ ಚದುರಂಗದಾಟದ ಕಲೆ ಎನ್ನುವುದನ್ನು ಸಾಬೀತು ಮಾಡಿದ್ದಾರೆ.

ಅ.16ರಂದು ಚನ್ನಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ್ದ ಸಿ.ಪಿ.ಯೋಗೇಶ್ವರ್, 1999ರಲ್ಲಿ ತಮಗೆ ಕಾಂಗ್ರೆಸ್ ಟಿಕೆಟ್ ಹೇಗೆ ಕೈ ತಪ್ಪಿತ್ತು ಎನ್ನುವುದನ್ನು ಪ್ರಸ್ತಾಪ ಮಾಡಿದ್ದರು. ಅಂದು ಕೈಗೆ ಬರಬೇಕಿದ್ದ ಬಿ ಫಾಮ್ರ್ ಅನ್ನು ಸ್ವತಃ ಡಿ.ಕೆ.ಶಿವಕುಮಾರ್ ಹರಿದು ಹಾಕುವ ಮೂಲಕ, ನನಗೆ ಟಿಕೆಟ್ ತಪು್ಪವಂತೆ ಮಾಡಿದ್ದರು. ಇಲ್ಲಿ ನನ್ನ ರಾಜಕೀಯ ಬೆಳವಣಿಗೆ ಅವರಿಗೆ ಬೇಡವಾಗಿತ್ತು ಎಂದು ನಯವಾಗಿಯೇ ಟೀಕಿಸಿದ್ದರು. ಆದರೆ, ಕಾಲಚಕ್ರ ಉರುಳಿದಂತೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಇದೇ ಡಿ.ಕೆ.ಶಿವಕುಮಾರ್, ಸಿ.ಪಿ.ಯೋಗೇಶ್ವರ್ ಅವರನ್ನು ತಮ್ಮದೇ ಕಾರಿನಲ್ಲಿ ಕೂರಿಸಿಕೊಂಡು ಸಿಎಂ ಮನೆಗೆ ಕರೆದುಕೊಂಡು ಹೋಗುವ ಜತೆಗೆ ತಾವೇ ಪಕ್ಷ ಸೇರ್ಪಡೆ ಮಾಡಿಕೊಂಡಿದ್ದು ಅಚ್ಚರಿ.

ಈಗ ಪರಮಾಪ್ತರು: ಡಿ.ಕೆ.ಶಿವಕುಮಾರ್ ಮತ್ತು ಸಿ.ಪಿ. ಯೋಗೇಶ್ವರ್ ನಡುವಿನ ರಾಜಕೀಯ ವೈರತ್ವಕ್ಕೆ ದಶಕಗಳ ಇತಿಹಾಸವೇ ಇದೆ. ಯೋಗೇಶ್ವರ್ ಕಾಂಗ್ರೆಸ್​ನಲ್ಲಿ ನೆಲೆಯೂರದೇ ಇರುವ ಪ್ರಮುಖ ಕಾರಣಗಳಲ್ಲಿ ಡಿ.ಕೆ.ಶಿವಕುಮಾರ್ ಒಬ್ಬರು. ಇದು ಯಾವ ಮಟ್ಟಿಗೆ ಎಂದರೆ ಯೋಗೇಶ್ವರ್ ಬಿಜೆಪಿ ಸರ್ಕಾರದಲ್ಲಿ ಅರಣ್ಯ ಖಾತೆ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಖಾತೆಯನ್ನು ನಿಭಾಯಿಸಿದಾಗ ಒಬ್ಬರಿಗೊಬ್ಬರು ಕತ್ತಿಮಸೆಯುವ ಹಂತಕ್ಕೆ ತಲುಪಿತ್ತು. ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿಯೂ ಇದು ಮುಂದು ವರಿದಿತ್ತು. ಆದರೆ, ಕೇವಲ 6 ತಿಂಗಳಲ್ಲಿ ಇವರ ಸಂಬಂಧ ವೈರತ್ವದಿಂದ ಸ್ನೇಹಕ್ಕೆ ಬದಲಾಗಿದೆ. ಈ ಮೂಲಕ ರಾಜಕಾರಣದಲ್ಲಿ ಯಾರೂ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎನ್ನುವ ಮಾತು ಮತ್ತೆ ನಿಜವಾಗಿದೆ.

ವೇದಿಕೆ ಮೊದಲೇ ಸಿದ್ಧಗೊಂಡಿತ್ತೇ?: ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ನಿರ್ಧಾರ ದಿಢೀರ್ ಆದುದಲ್ಲ ಎನ್ನುತ್ತಿವೆ ಪಕ್ಷದ ಮೂಲಗಳು. ಇದಕ್ಕಾಗಿ ಕಳೆದ ಒಂದು ತಿಂಗಳಿಂದಲೂ ವೇದಿಕೆ ಸಿದ್ಧಗೊಳ್ಳುತ್ತಿತ್ತು, ಆದರೆ, ಅಂತಿಮ ರೂಪ ಪಡೆದುಕೊಂಡಿದ್ದು ಮಾತ್ರ ಮಂಗಳವಾರ ರಾತ್ರಿ ಎನ್ನಲಾಗಿದೆ. ಎನ್​ಡಿಎ ಟಿಕೆಟ್ ನೀಡಿಕೆ ಸಾಧ್ಯತೆ ಬಗ್ಗೆ ಅನುಮಾನಗೊಂಡಿದ್ದ ಸಿ.ಪಿ.ವೈ ಕಾಂಗ್ರೆಸಿಗರ ಸಖ್ಯ ಬೆಳೆಸಿದ್ದರು ಎನ್ನಲಾಗುತ್ತಿದೆ. ಕೊನೆಗೆ ಜೆಡಿಎಸ್ ಚಿಹ್ನೆಯಡಿ ಟಿಕೆಟ್ ಕೊಡುತ್ತೇವೆ ಎಂದಾಗ, ಓಕೆ ಎಂದಿದ್ದ ಸಿಪಿವೈ, ಭವಿಷ್ಯದ ರಾಜಕೀಯ ಲೆಕ್ಕಾಚಾರ ಮಾಡಿ, ಬಿಜೆಪಿ ಟಿಕೆಟ್​ಗೆ ಪಟ್ಟು ಹಿಡಿದರು. ಆದರೆ ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಪಟ್ಟನ್ನು ಸಡಿಲಿಸಲು ಲೆಕ್ಕಾಚಾರ ಮಾಡುತ್ತಿದ್ದ ವೇಳೆಯಲ್ಲಿ ಯೋಗೇಶ್ವರ್ ಅವರನ್ನು ಕಾಂಗ್ರೆಸ್​ನತ್ತ ವಾಲುವಂತೆ ಮಾಡುವಲ್ಲಿ ನೆರೆಯ ಮದ್ದೂರಿನ ಶಾಸಕ ಉದಯ್, ಮಾಜಿ ಸಂಸದ ಡಿ.ಕೆ.ಸುರೇಶ್ ಯಶಸ್ವಿ ಆದರು ಎನ್ನಲಾಗುತ್ತಿದೆ.

ಎಚ್​ಡಿಕೆಗೆ ಪೆಟ್ಟು ನೀಡಿದ ತ್ರಿಮೂರ್ತಿಗಳು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಚನ್ನಪಟ್ಟಣ ಉಪ ಚುನಾವಣೆ ಗೆಲುವು ಅನಿವಾರ್ಯ. ಇದು ಅವರಿಗೂ ಗೊತ್ತು. ಒಂದು ಹಂತದಲ್ಲಿ ಮಗನ ಮೂಲಕ ಗೆಲುವು ಸಾಧಿಸುವ ಹಂಬಲ ಹೊಂದಿದ್ದ ಅವರು, ಇದು ಸಾಧ್ಯವಿಲ್ಲ ಎನ್ನುವುದನ್ನು ಅರಿತೇ ಯೋಗೇಶ್ವರ್ ಅವರಿಗೆ ಕ್ಷೇತ್ರ ಬಿಟ್ಟುಕೊಡಲು ಸಿದ್ಧವಾಗಿದ್ದರು. ಆದರೆ, ಎಚ್.ಡಿ.ಕೆ ಅವರಿಗೆ ಪೆಟ್ಟುಕೊಡಲೇಬೇಕು ಎನ್ನುವ ತಂತ್ರಗಾರಿಕೆಯಲ್ಲಿಯೇ ಇದ್ದ ಡಿ.ಕೆ. ಸಹೋದರರು, ಇದಕ್ಕಾಗಿ ಕಾದು ಕುಳಿತಿದ್ದರು. ಈಗ ಯೋಗೇಶ್ವರ್ ಅಸ್ತ್ರ ಬಳಕೆ ಮಾಡುವ ಮೂಲಕ ಎಚ್​ಡಿಕೆಗೆ ರಾಜಕೀಯವಾಗಿ ಪೆಟ್ಟುಕೊಟ್ಟಿದ್ದು, ಇದನ್ನು ಕುಮಾರಸ್ವಾಮಿ ಅವರು ಹೇಗೆ ಎದುರಿಸುತ್ತಾರೆ ಎನ್ನುವುದೇ ಕುತೂಹಲ ಮೂಡಿಸಿದೆ.

ದೆಹಲಿಯಲ್ಲಿ ಭೇಟಿ: ಟಿಕೆಟ್​ಗಾಗಿ ವರಿಷ್ಠರ ಭೇಟಿಗೆ ತೆರಳಿದ್ದ ಸಿ.ಪಿ.ಯೋಗೇಶ್ವರ್ ಮತ್ತೊಂದೆಡೆ ಸದ್ದಿಲ್ಲದೆ ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ರಾಜಕೀಯದ ಹೊರತಾಗಿ ಉತ್ತಮ ಸ್ನೇಹಿತರಾಗಿರುವ ಇಬ್ಬರೂ ದೆಹಲಿಯಲ್ಲಿ ಭೇಟಿ ಆಗಿ, ರಾಜಕೀಯ ವಿದ್ಯಮಾನಗಳ ಬಗ್ಗೆ ರ್ಚಚಿಸಿದ್ದರು. ಆಗಲೇ ಸಿ.ಪಿ.ಯೋಗೇಶ್ವರ್ ಅವರಿಗೆ ಪಕ್ಷದ ಬಾಗಿಲು ತೆರೆದಿತ್ತು. ಈ ಗುಟ್ಟನ್ನು ಯಾರೂ ಬಿಟ್ಟುಕೊಟ್ಟಿರಲಿಲ್ಲ. ಆದರೆ, ಡಿ.ಕೆ. ಸುರೇಶ್ ಮಾತ್ರ ಆಪರೇಷನ್ ಎಕ್ಸ್​ಪರ್ಟ್ ಯೋಗೇಶ್ವರ್ ಅವರನ್ನೇ ಸೈಲೆಂಟ್ ಆಗಿ ಆಪರೇಷನ್ ಮಾಡಿ ಮುಗಿಸಿದ್ದರು.

CPY Congress
BYV
ಗೆಲುವಿಗೆ ಕಾರ್ಯತಂತ್ರ: ಸಿ.ಪಿ.ಯೋಗೇಶ್ವರ್​ಗೆ ಎಲ್ಲ ಪಕ್ಷದವರೊಂದಿಗೆ ಸಂಪರ್ಕವಿತ್ತು. ರಾಜಕೀಯವಾಗಿ ಒಂದು ತೀರ್ಮಾನ ತೆಗೆದುಕೊಂಡು ಕಾಂಗ್ರೆಸ್ ಸೇರಿದ್ದಾರೆ, ಅವರಿಗೆ ಒಳ್ಳೆಯದಾಗಲಿ. ಆದರೆ ಬಿಜೆಪಿ ತೊರೆದಿದ್ದರ ಬಗ್ಗೆ ಈಗ ಕೆದಕಿ ರ್ಚಚಿಸಬೇಕಾದ ಅಗತ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಚನ್ನಪಟ್ಟಣದಲ್ಲಿ ಅಭ್ಯರ್ಥಿ ಯಾರಾಗಬೇಕೆಂದು ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸುತ್ತಾರೆ. ನಂತರ ಉಭಯ ಪಕ್ಷಗಳ ನಾಯಕರು ಸಭೆ ಸೇರಿ ಚುನಾವಣಾ ಕಾರ್ಯತಂತ್ರ ರೂಪಿಸುತ್ತೇವೆ ಎಂದರು.
NK
ಆಶ್ಚರ್ಯವೇನೂ ಅಲ್ಲ: ಬಿಜೆಪಿಗೆ ಸಿ.ಪಿ. ಯೋಗೇಶ್ವರ್ ರಾಜೀನಾಮೆ ಕೊಟ್ಟಿರುವುದು ಆಶ್ಚರ್ಯಪಡುವಂತದ್ದು ಏನೂ ಅಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು. ಬಿಜೆಪಿಯ ರಾಜ್ಯಮಟ್ಟದ ಒಕ್ಕಲಿಗರನ್ನು ಕುಮಾರಸ್ವಾಮಿ ತುಳಿಯುತ್ತಾರೆ ಎನ್ನುವ ಮಾತಿಗೆ ಕುಮ್ಮಕ್ಕು ಕೊಟ್ಟವರು ಯಾರು ಎನ್ನುವುದು ರಾಜ್ಯದ ಜನಕ್ಕೆ ಗೊತ್ತಾಗುತ್ತಿದೆ. ಅಧಿಕಾರ ಎಲ್ಲಿ ಸಿಗುತ್ತದೆಯೋ ಯೋಗೇಶ್ವರ್ ಅಲ್ಲಿಗೆ ಹೋಗುತ್ತಾರೆ. ಯೋಗೇಶ್ವರ್ ಕಮಿಟ್ಮೆಂಟ್ ಇಟ್ಟುಕೊಂಡು ರಾಜಕೀಯ ಮಾಡಿಲ್ಲ ಎಂದರು. ಲೋಕಸಭೆ ಚುನಾವಣೆ ಸೋಲಿನ ಬಳಿಕ ಸಚಿವರೂ ಸೇರಿ ಡಿ.ಕೆ.ಶಿವಕುಮಾರ್ ಚನ್ನಪಟ್ಟಣ ಕ್ಷೇತ್ರಕ್ಕೆ ಏಕೆ ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಿಲ್ಲ? ಡಿ.ಕೆ.ಸುರೇಶ್ ನಿಲ್ಲುವ ಧೈರ್ಯ ಪ್ರದರ್ಶಿಸಲಿಲ್ಲ ಏಕೆ ಎಂದು ನಿಖಿಲ್ ಪ್ರಶ್ನಿಸಿದರು.

ಮೈತ್ರಿಗೆ ಬದ್ಧ, ತ್ಯಾಗಕ್ಕೆ ಸಿದ್ಧ ಸಂದೇಶ ರವಾನಿಸಿದ ಬಿಜೆಪಿ: ಉಪಚುನಾವಣೆಯ ಅಖಾಡ ಸಜ್ಜಾಗುವ ಮುನ್ನ ಚನ್ನಪಟ್ಟಣ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಯೋಗೇಶ್ವರ್ ಚದುರಂಗದಾಟವು ರಾಜಕೀಯವಾಗಿ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.

ನಂಬಿ ಬಂದವರನ್ನು ಪಕ್ಷ ಅಷ್ಟು ಸುಲಭವಾಗಿ ಕೈಬಿಡುವುದಿಲ್ಲ. ಮೈತ್ರಿಗೆ ಬದ್ಧ, ತ್ಯಾಗಕ್ಕೆ ಸಿದ್ಧ’ವೆಂಬ ಸಂದೇಶವನ್ನು ಬಿಜೆಪಿ ರಾಷ್ಟ್ರ, ರಾಜ್ಯ ನಾಯಕರು ರವಾನಿಸಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಸಂಡೂರು, ಶಿಗ್ಗಾಂವಿ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳ ಹೆಸರು ಪ್ರಕಟಿಸಿದ ಬಿಜೆಪಿ ವರಿಷ್ಠ ಮಂಡಳಿ, ಮಿತ್ರಪಕ್ಷ ಜೆಡಿಎಸ್​ಗೆ ಚನ್ನಪಟ್ಟಣ ಕ್ಷೇತ್ರ ಬಿಟ್ಟುಕೊಟ್ಟಿತು. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಅವರೇ ನಿರ್ಧರಿಸಲಿ ಎನ್ನುವ ನಿಲುವು ತಳೆಯಿತು. ಯೋಗೇಶ್ವರ್ ಪರವಾಗಿ ಬ್ಯಾಟಿಂಗ್ ಇಳಿದಿದ್ದ ರಾಜ್ಯ ನಾಯಕರು ಈ ವಿಷಯದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರ ನೆರವು ಪಡೆದರು. ವರಿಷ್ಠರ ಸೂಚನೆಯಂತೆ ಕುಮಾರಸ್ವಾಮಿ ಜತೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜೆಡಿಎಸ್ ಚಿಹ್ನೆ ಮೇಲೆ ಸ್ಪರ್ಧೆಗೆ ಅವಕಾಶ ಕೊಡಲು ಕೇಳಿದರು.

ಕುಮಾರಸ್ವಾಮಿ ಅದಕ್ಕೂ ಒಪ್ಪಿದ ಮೇಲೆ ಯೋಗೇಶ್ವರ್ ಬಿಜೆಪಿಯಿಂದ ಮಾತ್ರ ಸ್ಪರ್ಧಿಸುವ ದಾಳ ಉರುಳಿಸಿದರೆ, ಎಚ್​ಡಿಕೆಗೆ ಪ್ರಲ್ಹಾದ ಜೋಶಿ ಸಂರ್ಪಸಿದರು. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಾಳ್ಮೆಯಿಂದಿರಿ, ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂದು ಯೋಗೇಶ್ವರ್ ಮನವೊಲಿಸಲು ಪ್ರಯತ್ನಿಸಿದ್ದರು. ಅದರೆ ಯೋಗೇಶ್ವರ್ ಸಮಾಜವಾದಿ ಪಕ್ಷದ ಬಿ ಫಾಮ್ರ್ ಪಡೆದಿದ್ದೂ ವರಿಷ್ಠರಿಗೆ ತಿಳಿಯುತ್ತಿದ್ದಂತೆ ಮನವೊಲಿಕೆ, ಮಾತುಕತೆ ಸರ್ಕಸ್​ಗೆ ಪೂರ್ಣವಿರಾಮ ಹಾಕಿದರು. ಈ ಬೆಳವಣಿಗೆಯು ಬಿಜೆಪಿಗೆ ಪರೋಕ್ಷವಾಗಿ ಲಾಭ ತಂದುಕೊಟ್ಟಿದೆ. ಮೈತ್ರಿ ವಿಷಯದಲ್ಲಿ ಯಾವುದೇ ರಾಜಿಯಿಲ್ಲವೆಂದು ಎನ್​ಡಿಎ ಮಿತ್ರಪಕ್ಷಗಳಿಗೆ ಸೂಚ್ಯವಾಗಿ ತಿಳಿಸಿದಂತಾಗಿದೆ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು.

ಯೋಗೇಶ್ವರ್ ಕೈಹಿಡಿದ ಬಳಿಕ ತಾರಕಕ್ಕೇರಿದ್ದ ಟಿಕೆಟ್ ಜಿದ್ದಾಜಿದ್ದಿ ಕೊನೆಗೊಂಡಿದ್ದು, ಎನ್​ಡಿಎದಲ್ಲಿ ಸೃಷ್ಟಿಯಾಗಿದ್ದ ಗೊಂದಲ ಬಗೆಹರಿದಿದೆ. ಉಭಯ ಪಕ್ಷಗಳ ನಾಯಕರ ನಡುವಿನ ಅಪನಂಬಿಕೆಯು ಕೊನೆಗಾಣಬೇಕಿದೆ ಎಂದು ಮೂಲಗಳು ಹೇಳಿವೆ

ಬಂಡಾಯ ಶಮನ: ಸಂಡೂರು (ಎಸ್​ಟಿ ಮೀಸಲು) ಕ್ಷೇತ್ರದ ಬಿಜೆಪಿ ಟಿಕೆಟ್ ವಂಚಿತ ಕೆ.ಎಸ್.ದಿವಾಕರ್ ಬಂಡಾಯದ ಕಹಳೆಯೂದಿ, ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗಾಳ ಹಾಕಿದ್ದರು ಎನ್ನಲಾಗಿದೆ. ಟಿಕೆಟ್ ಸಿಗದ ಕಾರಣಕ್ಕೆ 2018ರಲ್ಲಿ ಬಂಡಾಯ ಅಭ್ಯರ್ಥಿಯಾಗಿದ್ದ ಬಂಗಾರು ಹನುಮಂತುಗೆ ಈ ಬಾರಿ ಪಕ್ಷದ ಟಿಕೆಟ್ ನೀಡಿರುವುದು ದಿವಾಕರ್ ಸಿಟ್ಟು-ಸೆಡವಿಗೆ ಕಾರಣ. ಮನವೊಲಿಸುವಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಶಾಸಕ ಜಿ.ಜನಾರ್ದನರೆಡ್ಡಿ ಸಫಲರಾಗಿದ್ದಾರೆ. ಬಂಡೇಳುವ ನಿರ್ಧಾರ ಕೈಬಿಟ್ಟ ದಿವಾಕರ್, ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡಲು ಒಪ್ಪಿದ್ದಾರೆ.

ಸರಿಪಡಿಸಲು ಕಸರತ್ತು: ಶಿಗ್ಗಾಂವಿ ಕ್ಷೇತ್ರದ ಟಿಕೆಟ್​ಗೆ ಗಂಭೀರವಾಗಿ ಪ್ರಯತ್ನಿಸುತ್ತಿದ್ದವರಲ್ಲಿ ಶ್ರೀಕಾಂತ ದುಂಡಿಗೌಡರ್ ಒಬ್ಬರಾಗಿದ್ದು, ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಬಗ್ಗೆ ಗುರುವಾರ (ಅ.24) ತೀರ್ಮಾನ ಕೈಗೊಳ್ಳುವೆ ಎಂದಿದ್ದಾರೆ. ಪುತ್ರ ಭರತ್ ಬೊಮ್ಮಾಯಿಗೆ ಸಮಸ್ಯೆಯಾಗಲಿದೆ ಎಂದು ಅರಿತ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತೆರೆಮರೆಯಲ್ಲಿ ಸರಿಪಡಿಸುವ ಕಸರತ್ತಿಗೆ ಕೈಹಾಕಿದ್ದು, ಪಂಚಮಸಾಲಿ ಸಮುದಾಯದ ಪ್ರಮುಖ ನಾಯಕ ದುಂಡಿಗೌಡರ್ ಅತೃಪ್ತಿ ದುಬಾರಿಯಾಗಲಿದೆ ಎಂದು ತಿಳಿದೇ ಸದ್ದಿಲ್ಲದೆ ಕಾರ್ಯಾಚರಣೆ ನಡೆಸಿದ್ದಾರೆ. ನಾಮಪತ್ರ ಸಲ್ಲಿಸುವ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನು ಕರೆಯಿಸಿಕೊಂಡು ಬಲ ಪ್ರದರ್ಶನ, ಪ್ರಭಾವಬೀರುವ ತಂತ್ರಗಾರಿಕೆ ಹೆಣೆದಿದ್ದಾರೆ ಎಂದು ತಿಳಿದಿದೆ.

HV
ನಾನು ಹುಣಸೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದಾಗ, ಯಡಿಯೂರಪ್ಪ ಅವರು ಕಳುಹಿಸಿಕೊಟ್ಟ ಚುನಾವಣಾ ಸಾಮಗ್ರಿ ಹಾಗೂ ಹಣವನ್ನೆಲ್ಲ ಹೊತ್ತುಕೊಂಡು ಓಡಿ ಹೋಗಿದ್ದ ವಂಚಕ ಸಿ.ಪಿ.ಯೋಗೇಶ್ವರ್. ಅಂತಹ ವ್ಯಕ್ತಿಯನ್ನು ಕಾಂಗ್ರೆಸ್ ನಾಯಕರು ಸೇರಿಸಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿಕೊಂಡು ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡುತ್ತಿದ್ದಾರೆ.

| ಎಚ್.ವಿಶ್ವನಾಥ್ ಎಂಎಲ್​ಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net