ಯೋಗವಾಸಿಷ್ಠ | ಕುಳಿತಲ್ಲಿಂದಲೇ ಬ್ರಹ್ಮಾಂಡ- ಪೂರ್ವಜನ್ಮ ದರ್ಶನ

Yoga
Published on

ಶ್ರೀರಾಮನಿಗೆ ವೇದಾಂತ ತತ್ತ್ವಗಳನ್ನು ಮನದಟ್ಟು ಮಾಡಲು ಮಂಡಪೋಪಾಖ್ಯಾನವನ್ನು ಶ್ರೀ ವಸಿಷ್ಠರು ಹೇಳುತ್ತಿದ್ದಾರೆ. ಶ್ರೀದೇವಿಯ ಕೃಪೆಯಿಂದ ಸಮಾಧಿಸ್ಥಿತಿಯನ್ನು ಪಡೆದ ಲೀಲಾಮಹಾರಾಣಿಯು ಲೋಕ-ಲೋಕಾಂತರವನ್ನು ದರ್ಶನ ಮಾಡಿದಳು. ಈಗ ಶ್ರೀದೇವಿಯ ಕೃಪೆಯಿಂದಲೇ ಅವಳಿಗೆ ತನ್ನ ಹಿಂದಿನ ಜನ್ಮಗಳ ನೆನಪಾಗುತ್ತಿದೆ. ಒಂದು ಸೊಳ್ಳೆಯ ಜನ್ಮ ಉಂಟಾದ ಸಂಗತಿ ಹಿಂದಿನ ಲೇಖನದ ಕೊನೆಯಲ್ಲಿ ಬಂದಿತ್ತು.

ಲೀಲಾಮಹಾರಾಣಿಯು ಮುಂದುವರಿದು ಹೇಳುತ್ತಿದ್ದಾಳೆ - ‘ಹೇ ಶ್ರೀದೇವಿ! ಮುಂದೆ ನನಗೆ ಬೆತ್ತದ ಜನ್ಮ ಬಂದಿತು. ಪರ್ವತಗಳ ನದಿಗಳ ಪಕ್ಕದಲ್ಲಿ ಆಗ ನಾನು ಹುಟ್ಟಿದ್ದೆ. ಆ ನದಿಗಳು ಎತ್ತರದ ಮತ್ತು ಚಂಚಲವಾದ ತರಂಗಗಳಿಂದ ಕೂಡಿದ್ದವು. ಅವುಗಳ ತರಂಗಗಳ ಅಗ್ರಭಾಗವು ನನ್ನ ತಲೆಯ ಭಾಗಕ್ಕೆ ಆಗಾಗ ಬಂದು ಅಪ್ಪಳಿಸುತ್ತಿದ್ದವು. ಇಂತಹ ಜಲವೇತಸ ಜನ್ಮದಲ್ಲಿ ಕೆಲವು ಕಾಲ ನಾನು ಅಲೆದೆ (ಕಾಲ ಕಳೆದೆ).’

‘ಹೀಗೆ ಅತ್ಯಂತ ಅಧಮ ಜನ್ಮವಾದ ಸೊಳ್ಳೆಯ ಜನ್ಮ ಮತ್ತು ಬೆತ್ತವೆಂಬ ಗಿಡದ ಜನ್ಮ ಪಡೆದ ನಾನು ಕೆಲವು ಉತ್ತಮ ಜನ್ಮಗಳನ್ನೂ ಪಡೆದೆ. ಗಂಧಮಾದನ ಪರ್ವತದಲ್ಲಿ ಮಂದಾರ (ಕಲ್ಪ) ವೃಕ್ಷಗಳಿಂದ ಕೂಡಿದ ಮಂದಿರದಲ್ಲಿ ವಿದ್ಯಾಧರ (ದೇವತೆಗಳಲ್ಲಿ ಒಂದು ಪ್ರಕಾರ) ಕನ್ಯೆಯಾಗಿ ಜನ್ಮ ಪಡೆದೆ. ಆಗ ಮದನಾತುರರಾದ ಅನೇಕ ವಿದ್ಯಾಧರ ಕುಮಾರರು ನನ್ನನ್ನು ಆಶ್ರಯಿಸುತ್ತಿದ್ದರು. ಆದರೆ ಅಲ್ಲಿಯೂ ದುಃಖಬಾಹುಲ್ಯವಿದೆ. ಆ ವಿದ್ಯಾಧರಕುಮಾರರ ವಿಯೋಗದಿಂದ ಉಂಟಾದ ವ್ಯಸನದಿಂದ ಆತುರಳಾಗಿ ಕರ್ಪರದ ರೇಣುಗಳಿಂದ ಹರಡಲ್ಪಟ್ಟ ತಲ್ಪಗಳಲ್ಲಿ ಬಿದ್ದುಕೊಂಡು ದೀರ್ಘಕಾಲ ಒದ್ದಾಡಿದ್ದೇನೆ. ನೀರಿನ ಬೇರೆ ಬೇರೆ ಪಾತ್ರೆಗಳಲ್ಲಿ ಬಿದ್ದಿರುವ ಚಂದ್ರನ ಪ್ರತಿಬಿಂಬಗಳಲ್ಲಿ ಚಂದ್ರಪ್ರಭೆಯು ಹೊರಳಾಡುವಂತೆ ಒದ್ದಾಡಿದ್ದೇನೆ.’

‘ಹೇಗೆ ಹೇಳಲಿ? ನನಗೆ ಎಂಟುನೂರು ಜನ್ಮಗಳಾಗಿಹೋಗಿವೆ. ಅನೇಕ ವಿಧದ ದುಃಖಗಳು ನೂರಾರು ಸಂಖ್ಯೆಯಲ್ಲಿ ಆ ಜನ್ಮಗಳಲ್ಲಿ ಇವೆ. ತಕ್ಕಡಿಯ ತಟ್ಟೆಯು ಒಮ್ಮೆ ಮೇಲಕ್ಕೆ ಹೋಗುತ್ತದೆ, ಇನ್ನೊಮ್ಮೆ ಕೆಳಕ್ಕೆ ಬರುತ್ತದೆ. ಹಾಗೆ ಕೆಲವು ಉತ್ತಮ ಜನ್ಮಗಳು ಕೆಲವು ಅಧಮಗಳು, ಹೀಗೆ ಮೇಲೆ-ಕೆಳಗೆ ಸುತ್ತಿದ್ದರಿಂದ ಶ್ರಮಗೊಂಡಿದ್ದೇನೆ (ವ್ಯಾಕುಲಗೊಂಡಿದ್ದೇನೆ). ಗಾಳಿಯು ಯಾವ ದಿಕ್ಕಿನೆಡೆ ಬೀಸುತ್ತಿದೆಯೋ, ಆ ಕಡೆಗೆ ಸಾಗುವ ‘ವಾತಮೃಗ’ (ಒಂದು ಜಾತಿಯ ಮೃಗ) ದಂತೆ, ಸಂಸಾರವೆಂಬ ದೀರ್ಘನದಿಯ ಚಂಚಲ ತರಂಗಗಳು ಯಾವ ಕಡೆ ಸೆಳೆದುಹೋಗಿವೆಯೋ, ಆ ಕಡೆ ಸಾಗುತ್ತ ಅನೇಕ ಜನ್ಮಗಳಲ್ಲಿ ಸುತ್ತಿ ವ್ಯಾಕುಲಗೊಂಡಿದ್ದೇನೆ.’ ಇಲ್ಲಿಗೆ 27-ನೆಯ ಸರ್ಗ ಮುಗಿದು 28-ನೆಯ ಸರ್ಗ ಪ್ರಾರಂಭವಾಗುತ್ತಿದೆ.

ಶ್ರೀರಾಮನು ಒಂದು ಪ್ರಶ್ನೆ ಕೇಳಿದ - ‘ಪೂಜ್ಯರೇ! ವಜ್ರದ ದೃಢತೆಯುಳ್ಳ ಬ್ರಹ್ಮಾಂಡ ಗೋಡೆಯ ಒಳಗೆ ಯಾರೂ ಪ್ರವೇಶಿಸಲಾರರು. ಅಲ್ಲದೇ ಅದು ಕೋಟಿ ಯೋಜನಗಳಷ್ಟು ವಿಸ್ತಾರವಾದದ್ದು. ಆ ಇಬ್ಬರು ದೇವಿಯರು ಬ್ರಹ್ಮಾಂಡ ಗೋಡೆಯಿಂದ ಹೇಗೆ ಹೊರಬಂದರು?’ ಕಥೆಯನ್ನು ಕೇಳುತ್ತಿರುವವನಿಗೆ ಬರುವ ಸಹಜವಾದ ಪ್ರಶ್ನೆ ಇದು. ಇಡೀ ಬ್ರಹ್ಮಾಂಡವೂ ಒಂದು ಮಹಾಸ್ವಪ್ನವೆಂದು ಹೇಳುವುದರಿಂದ ಬ್ರಹ್ಮಾಂಡದ ಗೋಡೆಯೂ ಸ್ವಪ್ನದ ಒಂದು ಭಾಗ. ಅಂತಹ ಬ್ರಹ್ಮಾಂಡಗೋಡೆಯನ್ನು ದಾಟುವುದೇನು ದೊಡ್ಡ ವಿಷಯ? ಎಂದು ಕೇಳಬಹುದು. ಸ್ವಪ್ನದ ಒಳಗಿರುವವನಿಗೆ ಅಲ್ಲಿ ಗೋಚರಿಸುವ ಗೋಡೆ ಗತಿನಿರೋಧಕವಾಗುವುದು ಅನು ಭವದಲ್ಲಿದೆ. ಹಾಗಾಗಿ ಶ್ರೀರಾಮನ ಪ್ರಶ್ನೆ ಅನುಪಪನ್ನವಾದದ್ದೇನೂ ಅಲ್ಲ.

ಇದಕ್ಕೆ ಶ್ರೀ ವಸಿಷ್ಠರು ಉತ್ತರಿಸುವಾಗ ಇಟ್ಟುಕೊಂಡ ಅಭಿಪ್ರಾಯವೇನೆಂದರೆ - ಸ್ವಪ್ನ ದಲ್ಲಿ ಕಂಡ ಗೋಡೆ ಸ್ವಪ್ನಾ ವಸ್ಥೆಯಲ್ಲಿಯೇ ಇರುವವನಿಗೆ ಗತಿನಿರೋಧಕವಾಗುತ್ತದೆ. ಏಕೆಂದರೆ ಸ್ವಪ್ನಾವಸ್ಥೆ ಇರುವವರೆಗೆ ಆ ಗೋಡೆ ಬಾಧಿತವಾಗುವುದಿಲ್ಲ. ಆದರೆ ಎಚ್ಚರಿಂದ ಅದು ಬಾಧಿತವಾಗುತ್ತದೆ. ಹೀಗೆ ಬಾಧಿತವಾದ ಗೋಡೆ (ಅಂದರೆ ಎಚ್ಚರವಾದ ನಂತರ ನೆನಪಿಗೆ ಬರುತ್ತಿರುವ ಗೋಡೆ) ಗತಿನಿರೋಧಕವಾಗುವುದಿಲ್ಲ. ಅಥವಾ ವಿಚಿತ್ರವಾದ ಸ್ವಪ್ನಗಳು ಇರುತ್ತವೆ. ಸ್ವಪ್ನದಲ್ಲಿಯೇ ಕೆಲವೊಮ್ಮೆ ಅಲ್ಲಿ ಕಂಡದ್ದು ಬಾಧಿತವಾಗುತ್ತದೆ. ಹಾಗೆ ಬಾಧಿತವಾದ ನಂತರ ಆ ಗೋಡೆ ಗತಿನಿರೋಧಕವಾಗುವುದಿಲ್ಲ. ಈಗ ಆ ಇಬ್ಬರು ದೇವಿಯರಿಗೆ ಇಡೀ ಬ್ರಹ್ಮಾಂಡವೂ ಜ್ಞಾನವೆಂಬ ಎಚ್ಚರ ದಿಂದ ಬಾಧಿತವಾಗಿದೆ. ಹಾಗಾಗಿ ಅವರಿಗೆ ದೃಢವಾದ ಬ್ರಹ್ಮಾಂಡ ಗೋಡೆಯನ್ನು ದಾಟಿಬರುವುದು ಕಷ್ಟವಲ್ಲ. ಈ ಅಭಿಪ್ರಾಯ ದಿಂದ ವಸಿಷ್ಠರು ಹೇಳುತ್ತಿದ್ದಾರೆ - ‘ಶ್ರೀರಾಮ! ಎಲ್ಲಿಯ ಬ್ರಹ್ಮಾಂಡ, ಎಲ್ಲಿಯ ಬ್ರಹ್ಮಾಂಡದ ಗೋಡೆ, ಎಲ್ಲಿಯ ಆ ಗೋಡೆಯ ವಜ್ರಸಾರದಂತಹ ದೃಢತೆ! ಈಗಲೂ ವಸ್ತುತಃ ಆ ಇಬ್ಬರು ದೇವಿಯರು ಅಂತಃಪುರದ ಆವರಣದಲ್ಲಿಯೇ ಇದ್ದಾರೆ.’ (ಶ್ರೀದೇವಿ ಮತ್ತು ಲೀಲಾಮಹಾರಾಣಿಯರ ದೇಹ ಅಂತಃಪುರದ ಆವರಣದಲ್ಲಿಯೇ ಕುಳಿತಿದೆ. ಅಲ್ಲಿಯೇ ಅವರು ಸಮಾಧಿಸ್ಥಿತಿಯನ್ನು ಹೊಂದಿದಾಗ ಇವೆಲ್ಲ ಬ್ರಹ್ಮಾಂಡದ ದರ್ಶನವಾದದ್ದು, ಲೀಲಾಮಹಾರಾಣಿಗೆ ತನ್ನ ಹಿಂದಿನ ಜನ್ಮಗಳ ದರ್ಶನವಾದದ್ದು.)

‘ಮತ್ತೆ ಆ ವಸಿಷ್ಠನೆಂಬ ಬ್ರಾಹ್ಮಣನ ವಿಷಯವನ್ನು ಹೇಳುತ್ತೇನೆ. ಮರಣ ಹೊಂದಿದ ಅವನು ಆ ಗಿರಿಗ್ರಾಮದಲ್ಲಿಯೇ ಅದೇ ಮನೆಯ ಒಳಗಿನ ಆಕಾಶದಲ್ಲಿಯೇ ‘ವಿದೂರಥ’ ಎಂಬ ರಾಜನಾಗಿದ್ದುಕೊಂಡು ಈಗ ರಾಜತ್ವವನ್ನು ಅನುಭವಿಸುತ್ತಿದ್ದಾನೆ. ಈ ಹಿಂದೆ ಅದೇ ಮಂಡಪಾಕಾಶದ ಕೋಣೆಯ ರೂಪದಲ್ಲಿರುವ ಶೂನ್ಯವನ್ನು (ಚಿದಾಕಾಶವನ್ನು) ಚತುಃಸಮುದ್ರಪರ್ಯಂತವಾದ ಭೂಮಿ (ರಾಜ್ಯ) ಯನ್ನಾಗಿ ಪದ್ಮಮಹಾರಾಜನಾಗಿದ್ದುಕೊಂಡು ಅನುಭವಿಸಿದನು. ಅದೇ ಚಿದಾಕಾಶದಲ್ಲಿಯೇ ಭೂಮಿ (ರಾಜ್ಯ), ಅದರಲ್ಲಿ ರಾಜಧಾನಿ ಮತ್ತು ಅರಮನೆಗಳನ್ನು ಪದ್ಮಮಹಾರಾಜ ಮತ್ತು ಲೀಲಾಮಹಾರಾಣಿ (ಅರುಂಧತಿ) ಯರು ಕೆಲವೇ ಸಮಯದ ಹಿಂದಿನವರೆಗೂ ಅನುಭವಿಸಿದರು. ಅಲ್ಲದೇ ಮುಂದೆ ಕೆಲವೇ ಸಮಯದಲ್ಲಿಯೇ ಲೀಲಾಮಹಾರಾಣಿಯು ‘ವಿದೂರಥ’ ರಾಜನ ರಾಣಿಯಾಗಿ ರಾಜ್ಯ, ರಾಜಧಾನಿ, ಅರಮನೆಗಳನ್ನು ಅನುಭವಿಸಲಿದ್ದಾಳೆ.’

ಇಲ್ಲಿ ‘ವಿದೂರಥ’ ಎಂಬ ಇನ್ನೊಂದು ಜನ್ಮ ಪದ್ಮಮಹಾರಾಜನಿಗೆ ಈಗ ನಡೆಯುತ್ತಿರುವುದು ಮತ್ತು ಈಗಿರುವ ಲೀಲಾಮಹಾರಾಣಿಯು ಅವನ ಪತ್ನಿಯಾಗಿ ಮತ್ತೊಂದು ಜನ್ಮ ಪಡೆಯುವುದು ಬಂದಿದೆ. ಇದರ ಬಗ್ಗೆ ಮುಂದೆ ಸ್ಪಷ್ಟೀಕರಣ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net