

ವೃದ್ಧಾಪ್ಯ ಎನ್ನುವುದು ಮರಳಿ-ಅರಳುವ ಸ್ಥಿತಿ. ಅಜ್ಜ ಮೊಮ್ಮಗುವಿನಂತೆ ಇರಬೇಕು. ಮುದುಕ ಮಗುವಾದರೆ ಆಗ ಪೂಜ್ಯತ್ವ ಪಡೆಯಬಲ್ಲ. ರಾಗದ್ವೇಷಾದಿಗಳ ಲವಲವೇಶವೂ ರ್ಸ³ಸಿದ ಮುಗ್ಧ ನಿಷ್ಕಲ್ಮಷ ಮಗುವಿನ ನಗು ಮುದಿಮೊಗದಲ್ಲಿಯೂ ಮೂಡಿದರೆ ಆ ಮುದಿತನ ಯೌಗಿಕ ಮುದಿತನವೇ ಹೌದು. ನಿನ್ನೆಗಾಗಿ ಕೊರಗದೆ ನಾಳೆಗೆ ಬೆದರದೆ ಇಂದಿನಲ್ಲಿ ಅರಳುವ ಮನ ಬೇಕು. ಮರಣವನ್ನು ನಮ್ಮ ಹಿರಿಯರು ಉತ್ಸವ ಎಂದು ಕರೆದಿದ್ದಾರೆ. ವೃದ್ಧಾಪ್ಯದ ಬಾಳು ಪರಿಪಕ್ವ ಯೌಗಿಕ ಅನುಸಂಧಾನವಾದರೆ ಮಾತ್ರ ‘ಮರಣೋತ್ಸವ’ವಾದೀತು. ಇದರರ್ಥವನ್ನರಿತ ಜೀವನ ಮಾರ್ಗವೇ ಯೌಗಿಕ ವಿಶ್ರಾಂತ ಜೀವನ ಮಾರ್ಗವಾದೀತು.
ವೃದ್ಧಾಪ್ಯದಲ್ಲಿ ಶಾರೀರಿಕ ಮಟ್ಟದ ಸಮಸ್ಯೆಗಳು ಸಾಮಾನ್ಯ. ದೇಹ ಬಲಶಾಲಿಯಾಗಿರುವುದಿಲ್ಲ. ಹೀಗಾಗಿ ದೇಹದ ನಿರ್ಬಲತೆ, ನಿಶ್ಶಕ್ತಿ, ಮೈಭಾರ, ಆಲಸ್ಯ, ಮೈಕೈ ಸಂಧು ನೋವು, ಮಲಬದ್ಧತೆ, ಅಜೀರ್ಣ, ಕುಜೀರ್ಣ, ಅತಿಜೀರ್ಣ ಮುಂತಾದವುಗಳಿಗೆ ಸರಳ ಪರಿಹಾರ ಇದೆ. ಅದೆಂದರೆ ನಮ್ಮ ಸಾಂಪ್ರದಾಯಿಕ ಆಚರಣೆ ‘ಕರ್ಣ ಚೈತನ್ಯ ಮಾಲಾಕ್ರಿಯೆ’. ಇದು ಆರೋಗ್ಯ ವರ್ಧನೆಗಾಗಿ ಇರುವ ಕ್ರಿಯೆ.
ಕರ್ಣ ಎಂದರೆ ಕಿವಿ. ಚೈತನ್ಯ ಎಂದರೆ ಸಚೇತನಗೊಳಿಸುವಿಕೆ. ಕಿವಿಯಲ್ಲಿ ದೇಹದ ಅಂಗಾಂಗ ಹಾಗೂ ಗ್ರಂಥಿಗಳ ಸಂಪರ್ಕ ಪಡೆದಿರುವ 39 ಸೂಕ್ಷ್ಮ ಪ್ರಾಣಬಿಂದುಗಳ ನರತಂತುಗಳು (ನಾಡಿ) ಸಂಪರ್ಕ ಪಡೆದಿವೆ. ವೃದ್ಧಾಪ್ಯದಲ್ಲಿ ಅತಿ ಕಠಿಣ ಶಾರೀರಿಕ ವ್ಯಾಯಾಮ ಮಾಡಲು ಕಷ್ಟವಾಗಬಹುದು. ಆದರೆ ಈ ಕರ್ಣ ಚೈತನ್ಯ ಮಾಲಾಕ್ರಿಯೆ ಎಲ್ಲರೂ ಅಭ್ಯಾಸ ಮಾಡಬಹುದುದಾದ ಪರಿಣಾಮಕಾರಿ ಕ್ರಿಯೆಯಾಗಿದೆ.
ಕರ್ಣ ಚೈತನ್ಯ ಮಾಲಾಕ್ರಿಯೆ ಮಾಡುವುದು ಹೇಗೆ? ಮೊದಲು ಕಿವಿಗಳೆರಡನ್ನು ಕೆಳಗೆ ಹೊರಗೆ ಮೇಲ್ಮುಖವಾಗಿಯೂ ಮೃದುವಾಗಿಯೂ ಎಳೆಯುತ್ತಾ, ಪ್ರಚೋದಿಸಬೇಕು. ಇದರಿಂದ ಕಿವಿ ಯಲ್ಲಿರುವ ಸೂಕ್ಷ್ಮ ನರತಂತುಗಳು ಪ್ರಾಣಶಕ್ತಿಯೊಂದಿಗೆ ಕ್ರಿಯಾಶೀಲ ಗೊಂಡು ಇಡೀ ದೇಹ, ಗ್ರಂಥಿಗಳನ್ನು ಜಾಗೃತಗೊಳಿಸುತ್ತದೆ.
ಕಾಲುಗಳೆರಡು ಒಂದಡಿ ದೂರದಲ್ಲಿರುವಂತೆ ಕುರ್ಚಿಯಲ್ಲಿ ಕುಳಿತಿರಿ. ಎಡಗೈ ಮೂಲಕ ಬಲಗಿವಿ ಹಾಗೂ ಬಲಗೈ ಮೂಲಕ ಎಡಗಿವಿಯ ಕೆಳಗಿನ ಮೃದುವಾದ ಸ್ಥಳವನ್ನು ಹಿಡಿದುಕೊಳ್ಳಿ. ಇದನ್ನು ಕರ್ಣಮಾಲಾ ಎನ್ನುವರು.
ಈ ಮೂಲಕ ದೇಹದಲ್ಲಿ ಸಂಚರಿಸುವ ಪ್ರಾಣಶಕ್ತಿಯ ಧನ ಹಾಗೂ ಋಣ ಸ್ಥಾನಗಳ ಸಂಪರ್ಕ ಮಾಡಿದಂತಾಗುವುದು. ಈ ಸ್ಥಿತಿಯಲ್ಲಿಯೇ ಶ್ರಮಪಡದೆ ಕುರ್ಚಿಯಲ್ಲಿ ಕುಳಿತಲ್ಲೇ ದೀರ್ಘ ಉಸಿರನ್ನು ಹೊರಬಿಡುತ್ತಾ ಉಸಿರನ್ನು ಒಳಗೆಳೆದುಕೊಳ್ಳುತ್ತಾ ‘ಓಂ ಗಂ ಗಣಪತಯೇ ನಮಃ’ ಮಂತ್ರವನ್ನು ಪಠಿಸಿ. ಹೀಗೆ ಐದರಿಂದ ಇಪ್ಪತ್ತೊಂದು ಬಾರಿ ಮಾಡಿರಿ.