

ಗೀತೆಯಲ್ಲಿ ಸಮಾಧಿ ಯೋಗಾವಸ್ಥೆಯನ್ನು ಸ್ಪಷ್ಟವಾಗಿ ವಿವರಿಸಿದ್ದಾನೆ. ಯಾವ ಸುಖವು ಸ್ವರೂಪಜ್ಞಾನವಾದ ಮೇಲೆಯೇ ಆಗುತ್ತದೋ, ಯಾವುದು ಬಾಹ್ಯೇಂದ್ರಿಯಗಳಿಗೆ ತಿಳಿಯದಿರುವ ನಿರತಿಶಯ ಸುಖವೋ, ಯಾವ ಅವಸ್ಥೆಯಲ್ಲೂ ಯಾವುದು ಪರಮಾತ್ಮ ಸ್ವರೂಪದಿಂದ ಕದಲುವುದಿಲ್ಲವೋ ಅಂಥ ವ್ಯವಸ್ಥೆಗೆ ಸಮಾಧಿಯೋಗಾವಸ್ಥೆ ಎಂದು ಹೆಸರು. ಈ ಸ್ಥಿತಿಯನ್ನು ಕೇವಲ ಅನುಭವದಿಂದ ತಿಳಿಯಬೇಕಾದದ್ದು ಎಂದು ಪುರಂದರದಾಸರು
‘ಏನು ನೋಡಿದರೇನು, ನೀನೇನು ಮಾಡಿದರೇನು
ಧ್ಯಾನವನ್ನು ಮಾಡಲಿಲ್ಲ. ಪುರಂದರ ವಿಠ್ಠಲನ ಸ್ಮರಿಸಲಿಲ್ಲ’
ಎಂದಿದ್ದಾರೆ. ಅಂದರೆ ಹಾಗೇ ಧ್ಯಾನ. ಸ್ಮರಣೆ ಮಾಡಿ ಉಂಟಾಗಬೇಕಾದ ಅವಸ್ಥೆಯದು. ಇಂಥ ದಿವ್ಯಜ್ಞಾನ ಒಮ್ಮೆ ಹತ್ತಿತಾದರೆ ಜನ್ಮಾಂತರದ ದುಃಖ ನಾಶವಾಗುತ್ತದೆ ಎಂದು ಸಮರ್ಥ ರಾಮದಾಸರು ಹೇಳುತ್ತಾರೆ.
ಯಾವ ಅವಸ್ಥೆಯಲ್ಲಿ ಪರಮಾತ್ಮನ ಲಾಭಕ್ಕಿಂತ ದೊಡ್ಡಲಾಭವೇ ಬೇರೆಯಿಲ್ಲ ಎಂದು ಕಾಣುತ್ತದೋ, ಪರಮಾತ್ಮನಲ್ಲಿ ಸ್ಥಿರಚಿತ್ತ ಉಳ್ಳವನಾಗಿ ಎಂಥ ದುಃಖ ಬಂದೊದಗಿದರೂ ಯೋಗದಿಂದ ಚ್ಯುತನಾಗುವುದಿಲ್ಲವೋ ಅಂತಹ ಸ್ಥಿತಿಯನ್ನು ‘ಸಮಾಧಿ ಯೋಗಾವಸ್ಥೆ’ ಎಂದು ಹೇಳುತ್ತಾರೆ. ನಿಜವಾಗಿ ಭಗವದಾನಂದ ದೊರಕಿದವನಿಗೆ ಇತರ ಯಾವುದರಲ್ಲೂ ಆಸಕ್ತಿ ಇರದು. ಪರಮಾತ್ಮನಲ್ಲಿಂದ ಅವನ ಚಿತ್ತ ಕದಲುವುದಿಲ್ಲ. ಅಂತಹ ಸಾಧಕನ ಸ್ಥಿತಿ ದುಃಖಗಳಿಗೆ ಜ್ಞಾನಿಯಾದ ಸಾಧಕರು ಹೆದರುವುದಿಲ್ಲ. ಅವರಿಗೆ ಬೇಕಾದುದು ಭಗವಂತನ ಒಲುಮೆ. ಇನ್ನೇನು ಆದರು ಅವರು ಹೆದರುವುದಿಲ್ಲ.
ಹರಿ ನೀ ನೊಲಿವಂತೆ ಮಾಡು|
ಒಲಿದರೆ ತಿರಿವಂತೆ ಮಾಡು|
ತಿರಿದರೆ ಆರೂ ನೀಡದಂತೆ ಮಾಡು|
ನೀಡಿದರೆ ಹೊಟ್ಟೆ ತುಂಬದಂತೆ ಮಾಡು|
ಹೊಟ್ಟೆ ತುಂಬಿದರೆ ಬಟ್ಟೆ ದೊರೆಯದಂತೆ ಮಾಡು|
ಬಟ್ಟೆ ದೊರೆತರೆ ಇಂಬು ದೊರೆಯದಂತೆ ಮಾಡು|
ಇಂಬು ದೊರೆತರೆ ನಿನ್ನ ಪಾದಾರವಿಂದದಲಿ
ಇಂಬುದೋರೋ ಪುರಂದರ ವಿಠ್ಠಲ||
ಹೀಗೆ ದೃಢ ಸಾಧಕನ ಲಕ್ಷಣ ಹೇಳಿದೆ. ಸಮಾಧಿ ಎಂದರೇನೆಂದು ಯೋಗ ಪಿತಾಮಹ ಮಹರ್ಷಿ ಪತಂಜಲಿ ಹೇಳುತ್ತಾರೆ.
‘ತದೇವಾರ್ಥ ಮಾತ್ರ ನಿರ್ಭಾಸಂ ಸ್ವರೂಪ ಶೂನ್ಯಮಿವ ಸಮಾಧಿ’- ಎಂದರೆ ಆ ಧ್ಯಾನವೇ ಧ್ಯೇಯವನ್ನು ಮಾತ್ರ ಬೆಳಗುತ್ತಾ, ತನ್ನ ರೂಪವನ್ನೇ ಕಳೆದು ಕೊಂಡಂತಾದಾಗ ಸಮಾಧಿಯೆನಿಸುತ್ತದೆ ಎಂಬುದು ಈ ಸೂತ್ರದ ಅರ್ಥ. ಸಮಾಧಿಯ ಪರಿಪಾಠದಿಂದ ಮಾತ್ರವೇ ಭಗವಂತನ ದರ್ಶನವು ದೊರಕಬಲ್ಲದು. ಅವಿಚ್ಛಿನ್ನವಾದ ಶಾಸ್ತ್ರಾಲೋಚನೆಯಿಂದಲೂ ಪರಮಾತ್ಮನ ದರ್ಶನವಾಗುವುದು ಸಾಧ್ಯವಿದೆ.