

ಪ್ರಶ್ನೆ: ಉತ್ಥಿತ ಪದ್ಮಾಸನ ಬಗ್ಗೆ ಮಾಹಿತಿ ತಿಳಿಸಿ.
| ಜಯರಾಂ ವಯಸ್ಸು 35, ಬೆಂಗಳೂರು
ಉತ್ಥಿತ ಪದ್ಮಾಸನ: ಇದಕ್ಕೆ ತೋಲಾಸನ ಅಥವಾ ಉಯ್ಯಾಲೆ ಭಂಗಿ ಎಂದೂ ಹೇಳಬಹುದು. ತೋಲವೆಂದರೆ ತಕ್ಕಡಿ. ಈ ಆಸನವು ತಕ್ಕಡಿಗೆ ಹೋಲುವುದರಿಂದ ಈ ಹೆಸರನ್ನು ಹೊಂದಿದೆ.
ವಿಧಾನ: ಮೊದಲು ಪದ್ಮಾಸನದಲ್ಲಿ ಕುಳಿತುಕೊಳ್ಳಿ. ಅನಂತರ ಅಂಗೈಗಳೆರಡನ್ನು ಸೊಂಟದ ಪಕ್ಕದಲ್ಲಿ ನೆಲದ ಮೇಲೆ ಊರಿ.
ಆಮೇಲೆ ಉಸಿರನ್ನು ಹೊರಕ್ಕೆ ಬಿಟ್ಟು ದೇಹವನ್ನು ಎತ್ತಿ ಕೈಗಳ ಮೇಲೆ ಸಮತೋಲನದಲ್ಲಿರಿಸಿ. ಪದ್ಮಾಸನದಲ್ಲಿ ಕಾಲುಗಳನ್ನು ಮೇಲೆ ಕೆಳಗೆ ಬದಲಾಯಿಸಿ ಮೇಲಿನಂತೆ ಪುನಃ ಅಭ್ಯಾಸ ಮಾಡಿ. ಸಾಧ್ಯವಾದರೆ ಉಸಿರನ್ನು ತಡೆಹಿಡಿದು ಎರಡೂ ಕೈಗಳ ಸಹಾಯದಿಂದ ದೇಹವನ್ನು ಸ್ವಲ್ಪ ಹೊತ್ತು ಹಿಂದಕ್ಕೂ ತೂಗಾಡಿಸಿ. ಆಮೇಲೆ ವಿಶ್ರಮಿಸಿ.
ಪ್ರಯೋಜನ: ಈ ಆಸನದಿಂದ ತೋಳುಗಳು ಬಲಯುತವಾಗುವುವು. ಕಿಬ್ಬೊಟ್ಟೆಯ ಮಾಂಸ ಖಂಡಗಳು ಚೆನ್ನಾಗಿ ಬಲಿಷ್ಠವಾಗುತ್ತವೆ. ಕರುಳುಗಳು ಶಕ್ತಿಯನ್ನು ಪಡೆಯುತ್ತವೆ. ಸಮತೋಲನ ಸ್ಥಿತಿಯನ್ನು ಕಾಪಾಡಲು ಸಹಕಾರಿಯಾಗುತ್ತದೆ. ಭುಜಗಳು ಶಕ್ತಿಯುತವಾಗುತ್ತವೆ. ಅನಾಹತ ಚಕ್ರದ ಸುಸ್ಥಿತಿಗೆ ಸಹಕಾರಿ, ಎದೆಯ ಭಾಗ ಬಲಗೊಳ್ಳುತ್ತದೆ.
ಸೂಚನೆ: ತೀವ್ರ ಕೈ, ಭುಜ ಹಾಗೂ ಮಂಡಿನೋವು ಇರುವವರು ಈ ಆಸನ ಅಭ್ಯಾಸ ನಡೆಸುವುದು ಬೇಡ. ಪರಿಣತಿ ಹೊಂದಿದ ನಂತರ ಕೈ ಬೆರಳುಗಳಲ್ಲಿ ಈ ಆಸನ ಅಭ್ಯಾಸ ನಡೆಸಬಹುದು. ಯೋಗದ ಮಾಹಿತಿಯನ್ನು ಅರಿತು ಅಭ್ಯಾಸ ನಡೆಸಿ.
ನಮಸ್ಕಾರ ಮುದ್ರೆಯನ್ನು ಮಾಡುವ ವಿಧಾನ, ಪ್ರಯೋಜನದ ಮಾಹಿತಿ ತಿಳಿಸಿ.
| ಶೇಖರ ಸಿ. ವಯಸ್ಸು 48, ರಾಯಚೂರು
ನಮಸ್ಕಾರ ಮುದ್ರೆ ಪ್ರಾರ್ಥನೆಯ ಸಂಕೇತವನ್ನು ಸೂಚಿಸುತ್ತದೆ. ಇದು ಭಕ್ತಿಯನ್ನು ತೋರಿಸುವ ಒಂದು ವಿಧಾನವಾಗಿದೆ. ನಮಸ್ಕಾರ ಮುದ್ರೆಯಲ್ಲಿ ನಮಸ್ತೆ ಎಂಬುದರ ತಯಾರಿ ಆಗುತ್ತದೆ. ಒಳ್ಳೆಯತನವನ್ನು ಬಯಸುವುದು ಇದರ ಆಂತರ್ಯ. ನಮಸ್ಕಾರ ಮುದ್ರೆ ಭಾರತೀಯ ಸಂಸ್ಕೃತಿಯಾಗಿದೆ. ಹೃದಯ ಚಕ್ರದ ಶುದ್ಧಿಗೆ ಅನಾಹತ ಚಕ್ರ ಸಹಾಯವಾಗುತ್ತದೆ. ವಿದ್ಯಾರ್ಥಿಯು ಶಿಕ್ಷಕನಿಗೆ ನಮಸ್ತೆಯ ಮೂಲಕ ಗೌರವವನ್ನು ಸೂಚಿಸುತ್ತಾನೆ. ಇದು ಹೃದಯದ ಸಮೀಪ ಇರುವ ಚಕ್ರವಾಗಿದೆ. ಇದು ಪ್ರೀತಿ ಅನುಕಂಪ ತೋರುತ್ತದೆ. ಸಂತೋಷ ಸಂಬಂಧಗಳು ಇರುತ್ತದೆ. - ಕ್ಷಮೆ, ಕರುಣೆ ಸ್ವಯಂ ನಿಯಂತ್ರಣ ಸಾಮರ್ಥ್ಯ ಈ ಮುದ್ರೆಗಿದೆ. ಅನಾಹತ ಚಕ್ರವು ತೈಮಾಸ್ ಗ್ರಂಥಿಯೊಂದಿಗೆ ಸಂಬಂಧ ಹೊಂದಿದೆ. ಈ ಚಕ್ರ ಸಾಧನೆಯಿಂದ ಪ್ರೇಮ, ಶಾಂತಿ, ಕರುಣೆ, ಶುದ್ಧ ಸೌಂದರ್ಯ, ಶುದ್ಧ ಸತ್ಯ, ನಿರ್ಮಲತೆ, ಯೋಗಕ್ಷೇಮ ಹಾಗೂ ಮಿತ್ರ ಭಾವ ಮತ್ತು ಸ್ವಚ್ಚಂದತೆ ಬರುತ್ತದೆ. ಈ ಚಕ್ರ ತೆರೆಯಲು ನಮಸ್ಕಾರ ಮುದ್ರೆ ಮಾಡಬೇಕು.
ವಿಧಾನ: ಎದೆಯ ಹತ್ತಿರ ಕೈಮುಗಿಯುವ ಭಂಗಿ (ಚಿತ್ರದಲ್ಲಿರುವಂತೆ)ಯಾಗಿದೆ.
ಪ್ರಯೋಜನ: ನಮಸ್ಕಾರ ಮುದ್ರೆಯಲ್ಲಿ ಒಳ್ಳೆಯ ಭಾವನೆ ಬರುತ್ತದೆ. ಈ ಮುದ್ರೆಯಲ್ಲಿ ದೈವಿಕತೆ ಉಂಟಾಗುತ್ತದೆ. ದೇವರಿಗೆ ನಮಸ್ಕಾರ ಮಾಡಿ ತಲೆ ಬಾಗುತ್ತೇವೆ. ನಮಸ್ಕಾರ ಮುದ್ರೆಯಿಂದ ವ್ಯಕ್ತಿಯ ಅಹಂ ಭಾವನೆ ಕಡಿಮೆಯಾಗುತ್ತದೆ. ಈ ಮುದ್ರೆ ಆತ್ಮಕ್ಕೆ ನಮಸ್ಕಾರ ಮಾಡುವುದು ಎಂದಾಗಿದೆ. ಈ ಮುದ್ರೆಯಿಂದ ಒತ್ತಡ ಕಡಿಮೆಯಾಗುತ್ತದೆ. ಮನಸ್ಸು ಶಾಂತವಾಗುತ್ತದೆ. ಈ ಮುದ್ರೆಯಲ್ಲಿ ಹೃದಯ ವಿಶಾಲವಾಗುತ್ತದೆ. ಪರಸ್ಪರ ಭೇಟಿಯಾದಾಗ ನಮಸ್ತೆ ಮೂಲಕ ಶುಭ ಕೋರುವುದು ಸಹಜ. ಆ ಮೂಲಕ ಪಂಚತತ್ವಗಳು ಸಮತೋಲನ ಹೊಂದುವುವು.