

ಅಂತಾರಾಷ್ಟ್ರೀಯ ಯೋಗ ದಿನ ತೀರ ಹತ್ತಿರದಲ್ಲಿದೆ. ಹತ್ತು ವರ್ಷಗಳ ಹಿಂದೆ ಯೋಗ ದಿನ ಆಚರಣೆ ಆರಂಭವಾಯಿತು. ಭಾರತದಲ್ಲಿ 2014ರ ಜೂನ್ 21ರಂದು ಜರುಗಿದ ಸಂಯುಕ್ತ ರಾಷ್ಟ್ರಗಳ ಸಭೆಯಲ್ಲಿ ಯೋಗದ ಪ್ರಯೋಜನಗಳು ಗಮನಸೆಳೆದವಲ್ಲದೇ ಅಂತಾರಾಷ್ಟೀಯ ಯೋಗ ದಿನವನ್ನು ಜೂನ್ 21ರಂದು ನಡೆಸಬಹುದೆಂಬ ತೀರ್ಮಾನವೂ ಆಯಿತು. ಪರಿಣಾಮವಾಗಿ ವಿಶ್ವದ ಎಲ್ಲಾ ಜನಾಂಗದವರನ್ನು ಯೋಗವು ಇಂದು ಬಲವಾಗಿ ಆಕರ್ಷಿಸುತ್ತಿದೆ. ಈಗಾಗಲೇ ಯೋಗವು ದೈಹಿಕ, ಮಾನಸಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕವಾಗಿ ವಿಕಸನಗೊಳ್ಳಲು ಸಹಕಾರಿಯಾಗಿದೆ ಎನ್ನುವುದು ಹಲವರ ಅನುಭವಕ್ಕೆ ಬಂದಿದೆ.
ಈ ಹಿನ್ನೆಲೆಯಲ್ಲಿ ವಿಶ್ವ ಯೋಗ ದಿನಾಚರಣೆ ಆಚರಿಸುವ ಮುನ್ನ ಯೋಗ ಎಂದರೇನು? ಯೋಗದ ವ್ಯಾಖ್ಯಾನಗಳೇನು? ಯೋಗದ ಪ್ರಯೋಜನಗಳು, ಯೋಗದ ನಿಯಮಗಳು ಹಾಗೂ ವೈಜ್ಞಾನಿಕವಾಗಿ ಹೇಗೆ ಯೋಗ ಸಹಕಾರಿಯಾಗುತ್ತದೆ ಎಂಬ ಮಾಹಿತಿ ನೆನಪಿಸಿಕೊಳ್ಳೋಣ.
ಯೋಗ ಎಂದರೆ ಏನು?: ಯೋಗವು ಮೂಲತಃ ಅಧ್ಯಾತ್ಮದ ಆಧಾರ ಅಥವಾ ತಳಹದಿ ಹೊಂದಿರುವ ವಿಜ್ಞಾನದ ಒಂದು ಸೂಕ್ಷ್ಮವಾದ ಶಾಖೆ. ಇದು ದೇಹ ಮತ್ತು ಮನಸ್ಸುಗಳ ಜೊತೆ ಹೊಂದಾಣಿಕೆಯನ್ನು ತರಲು ಪೂರಕ ಪ್ರಕ್ರಿಯೆಯಾಗಿದೆ. ಆರೋಗ್ಯವಾಗಿ ಬಾಳಲು ಅಗತ್ಯವಾದ ಒಂದು ವಿಜ್ಞಾನ ಮತ್ತು ಕಲೆ ಎಂದರೆ ತಪ್ಪಲ್ಲ.
ವಿಶ್ವ ಯೋಗ ದಿನದ ಉದ್ದೇಶ:= ಜನರಿಗೆ ಯೋಗದ ಬಗೆಗಿನ ಮಾಹಿತಿ ಮತ್ತು ನೈಸರ್ಗಿಕ ಪ್ರಯೋಜನಗಳನ್ನು ತಿಳಿಸುವುದು ಮೂಲ ಉದ್ದೇಶ. ಯೋಗದ ಅಭ್ಯಾಸದ ಮಾಹಿತಿ ನೀಡುವುದು, ಯೋಗಧ್ಯಾನದ ತಿಳಿವಳಿಕೆ, ವಿಶ್ವದಾದ್ಯಂತ ಆರೋಗ್ಯ ರಕ್ಷಣೆಗೆ ಯೋಗ ಒಂದು ಸಾಧನವೆಂದು ತಿಳಿಸುವುದು. ಯೋಗದ ಮೂಲಕ ಕಾಯಿಲೆಗಳ ನಿಯಂತ್ರಣದ ಬಗ್ಗೆ ತಿಳಿವಳಿಕೆ ಮೂಡಿಸುವುದು.= ಯೋಗದ ಸಮಗ್ರ ಪ್ರಯೋಜನಗಳನ್ನು ಜನರಿಗೆ ತಲುಪಿಸುವುದು. ಶಾಂತಿ ನೆಮ್ಮದಿ ಅಭಿವೃದ್ಧಿಯನ್ನು ಯೋಗದ ಮೂಲಕ ಪಡೆಯುವ ಬಗ್ಗೆ ತಿಳಿವಳಿಕೆ ನೀಡುವುದು.
ದೈಹಿಕ ಮಾನಸಿಕ ಕಾಯಿಲೆಗಳು ಯೋಗದ ಮೂಲಕ ಪರಿಹಾರವಾಗಬಲ್ಲವು. ಆರೋಗ್ಯಕರ ಜೀವನ ಶೈಲಿಗೆ ಯೋಗ ಸಹಕಾರಿ. ದೈಹಿಕ ಆರೋಗ್ಯ, ಚಿತ್ತಶಾಂತಿಗೆ ಯೋಗ ಸಹಕಾರಿ.
2025ರ ಘೋಷವಾಕ್ಯ: ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ ಎನ್ನುವುದು 2025ರ ಅಂತಾರಾಷ್ಟ್ರೀಯ ಯೋಗ ದಿನದ ಘೋಷವಾಕ್ಯವಾಗಿದೆ. ದಿನಾಚರಣೆಗೆ ಮಾರ್ಗದರ್ಶನ ನೀಡಲು ವಿಶಿಷ್ಟ ಕಾರ್ಯಕ್ರಮಗಳನ್ನು ಪ್ರತಿವರ್ಷ ರೂಪಿಸಲಾಗುತ್ತದೆ. ಅವುಗಳಲ್ಲಿ 75 ದಿನಗಳ ಕ್ಷಣಗಣನೆ ಪ್ರಮುಖವಾಗಿದೆ. ಯೋಗದ ಮೂಲಕ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ ಸಾಮೂಹಿಕ ಆಂದೋಲನವನ್ನು ಹುಟ್ಟುಹಾಕಲು ಭಾರತ ಸರ್ಕಾರ ಆಶಿಸುತ್ತಿದೆ.
ಅಂತಾರಾಷ್ಟ್ರೀಯ ಯೋಗ ದಿನವು ತನ್ನ ಪ್ರಯಾಣದ ಒಂದು ದಶಕವನ್ನು ಪೂರೈಸಿದೆ. ಈ ವರ್ಷ ಅದರ 11ನೇ ಆವೃತ್ತಿಯನ್ನು ಆಚರಿಸಲಾಗುತ್ತಿದೆ. ಈ ಮೈಲಿಗಲ್ಲನ್ನು ಗುರುತಿಸಲು ಈ ಭವ್ಯ ಯೋಗ ಉತ್ಸವದ ಭಾಗವಾಗಿ ಹತ್ತು ಸಿಗ್ನೇಚರ್ ಕಾರ್ಯಕ್ರಮಗಳನ್ನು ಕ್ಣಗಣನೆಯ ಭಾಗವಾಗಿ ಆಯೋಜಿಸಲಾಗುತ್ತಿದೆ. ಅವುಗಳೆಂದರೆ, ಯೋಗ ಸಂಗಮ, ಯೋಗ ಬಂಧನ, ಯೋಗ ಪಾರ್ಕ್ಗಳು, ಯೋಗ ಸಮಾವೇಶ, ಯೋಗ ಪ್ರಭಾವ, ಯೋಗ ಕನೆಕ್ಟ್, ಹರಿತ್ ಯೋಗ, ಯೋಗ ಅನ್ಪ್ಲಗ್ಡ್, ಯೋಗ ಮಹಾ ಕುಂಭ ಮತ್ತು ಸಮಯೋಗ. ಯೋಗ ದಿನದ ಪೂರ್ವಭಾವಿಯಾಗಿ ಈ ಎಲ್ಲ ಕಾರ್ಯಕ್ರಮಗಳು ನಡೆಯುತ್ತಿವೆ.
ಯೋಗದ ಹತ್ತಾರು ಪ್ರಯೋಜನಗಳ ಬಗ್ಗೆ ವಿಶ್ವಾದ್ಯಂತ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿರುವ ಈ ಭಾರತದ ಸಂಸ್ಕೃತಿಯ ಕಲೆಯಾದ ಯೋಗವನ್ನು ಉಳಿಸೋಣ, ಬೆಳೆಸೋಣ. ಯೋಗ ಆರೋಗ್ಯವರ್ಧಕ, ರೋಗ ನಿವಾರಕ, ರೋಗ ನಿರೋಧಕ ಎಂದು ನಮ್ಮ ಹಿರಿಯರು ತಿಳಿಸಿದ್ದಾರೆ. ಆದ್ದರಿಂದ ಉತ್ತಮ ಜೀವನ ಶೈಲಿಗೆ ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳೋಣ.