

Shilpa Shetty : 50 ರ ವಯಸ್ಸಿನಲ್ಲೂ, ನಟಿ ಶಿಲ್ಪಾಶೆಟ್ಟಿ ತಮ್ಮ ಫಿಟ್ನೆಸ್ ಮೂಲಕ ಲಕ್ಷಾಂತರ ಜನರನ್ನು ಗಮನಸೆಳೆದಿದ್ದು, ಫಿಟ್ನೆಸ್ ಐಕಾನ್ ಆಗಿ ಮುಂದುವರೆದಿದ್ದಾರೆ. ದೇಹ ಸದೃಢಗೊಳ್ಳಲು ಕೇವಲ ಆರೋಗ್ಯವಲ್ಲದೇ, ಜೀವನ ಶೈಲಿಯಲ್ಲೂ ಬದಲಾವಣೆ ಮುಖ್ಯ. ಇವೆರಡೂ ಸಂಬಂಧ ಹೊಂದಿದಾಗ ಮಾತ್ರ ಸದೃಢ ಮೈಕಟ್ಟನ್ನು ಹೊಂದಲು ಸಾಧ್ಯ ಎಂದು ನಟಿ ತೋರಿಸಿದ್ದಾರೆ. ತಮ್ಮ ಯೋಗ, ಫಿಟ್ನೆಸ್ ನಂತಹ ಹಲವಾರು ಮಾಹಿತಿಗಳನ್ನು ಅಭಿಮಾನಿಗಳಿಗೆ ತಿಳಿಸಿದ್ದು, ಈ ಬಾರಿ ಪ್ರಾಣಾಯಾಮ ಎಂಬ ಪ್ರಬಲ ಉಸಿರಾಟದ ವ್ಯಾಯಾಮದ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಸಾಂಪ್ರದಾಯಿಕ ಯೋಗದಲ್ಲಿ ಬೇರೂರಿರುವ ಭ್ರಮರಿ ಪ್ರಾಣಾಯಾಮವನ್ನು "ಮಧುಮಕ್ಷಿಯ ಉಸಿರಾಟ" ಎಂದು ಕರೆಯುತ್ತಾರೆ. ಈ ತಂತ್ರದಲ್ಲಿ, ವ್ಯಕ್ತಿಯು ಆಳವಾದ ಉಸಿರನ್ನು ಎಳೆದು, ನಿಧಾನವಾಗಿ ಉಸಿರನ್ನು ಬಿಡುವಾಗ ಜೇನುನೊಣದ ಸೌಮ್ಯವಾದ ಗುನುಗುವ ಶಬ್ದ ಕೇಳಿಸುತ್ತದೆ. ಕಿವಿಗಳನ್ನು ಮುಚ್ಚಿಕೊಂಡು, ಕಣ್ಣುಗಳನ್ನು ಮುಚ್ಚಿ ಈ ವ್ಯಾಯಾಮವನ್ನು ಮಾಡಲಾಗುತ್ತದೆ. ಇದರಿಂದ ಮನಸ್ಸು ಶಾಂತವಾಗುತ್ತದೆ. ಮನಸ್ಸಿನ ಒತ್ತಡ, ಆತಂಕ ಮತ್ತು ಕೋಪವನ್ನು ಕಡಿಮೆ ಮಾಡಲು ಸಹಾಯಕವಾಗುವಂತಹ ವಿಧಾನವಾಗಿದೆ.
ನಟಿ ಹಂಚಿಕೊಂಡ ವಿಡಿಯೋದಲ್ಲಿ, ಅಭಿಮಾನಿಗಳಿಗೆ ಈ ಪ್ರಾಣಯಾಮದ ವಿವರವಾದ ಪ್ರದರ್ಶನವನ್ನು ನೀಡಿದ್ದಾರೆ. ಮೊದಲು ನಿಮ್ಮ ಕಿವಿ ಮತ್ತು ಕಣ್ಣನ್ನು ಮುಚ್ಚಿಕೊಳ್ಳಿ, ನಂತರ ಹೊರಗಿನ ಪ್ರಪಂಚದ ಬಗ್ಗೆ ಯಾವುದೇ ಕಡೆ ಗಮನ ಹರಿಸಬೇಡಿ. ನಿಮ್ಮ ನಾಲಿಗೆಯನ್ನು ನಿಮ್ಮ ಮೇಲಿನ ಅಂಗುಳಕ್ಕೆ ಸ್ಪರ್ಶಿಸಿ, ಆಳವಾದ ಉಸಿರನ್ನು ತೆಗೆದುಕೊಳ್ಳಿ ಮತ್ತು ಗುನುಗುವ ಶಬ್ದವನ್ನು ಮಾಡಿ. ಈ ಭ್ರಮರಿ ಉಸಿರಾಟವು ಅತ್ಯಂತ ಶಕ್ತಿಶಾಲಿ ಪ್ರಾಣಾಯಾಮಗಳಲ್ಲಿ ಒಂದಾಗಿದೆ ಎಂದು ತಿಳಿಸಿದರು.
ನಟಿ ಇದನ್ನು 5 ರಿಂದ 11 ಸುತ್ತುಗಳವರೆಗೆ ಮಾಡಿ ಅಥವಾ ಆರೋಗ್ಯವಾಗಿದ್ದರೆ, ಅದಕ್ಕಿಂತ ಹೆಚ್ಚು ಕಾಲ ಪುನರ್ವರ್ತಿಸಬಹುದು ಎಂದು ಸೂಚಿಸಿದರು. ಬಾಹ್ಯ ಶಬ್ದವನ್ನು ಮುಚ್ಚುವ ಕ್ರಿಯೆಯು ನಿಮ್ಮ ಆಂತರಿಕ ಆತ್ಮಕ್ಕೆ ಶಕ್ತಿಯನ್ನು ಪ್ರೇರೇಪಿಸುತ್ತದೆ. ಹಾಗೆಯೇ ಈ ಗುನುಗುವ ಕಂಪನವು ನಿಮ್ಮಲ್ಲಿ ಆಳವಾದ ವಿಶ್ರಾಂತಿಯನ್ನು ಉತ್ತೇಜಿಲು ಸಹಾಯ ಮಾಡುತ್ತದೆ ಎಂದು ತಿಳಿಸಿದರು.
* ನಾವು ಮಾಡುವ ಪ್ರಾಣಯಾಮದಿಂದ ಹೊರಬರುವ ಝೇಂಕಾರ ಶಬ್ದವು ನಮ್ಮ ಮನಸ್ಸನ್ನು ಶಾಂತಗೊಳಿಸಿ, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ.
* ನಿದ್ರಾಹೀನತೆಯನ್ನು ನಿವಾರಿಸಿ, ಆಳವಾದ ನಿದ್ರೆಗೆ ಸಹಾಯ ಮಾಡುತ್ತದೆ.
* ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
* ರಕ್ತದೊತ್ತಡವನ್ನು ಸಮತೋಲನಗೊಳಿಸಲು ಸಹಕಾರಿಯಾಗಿದೆ.
* ಮನಸ್ಸಿನ ಗೊಂದಲವನ್ನು ತೆಗೆದು, ಹಾಕಿ ಏಕಾಗ್ರತೆ ಹೆಚ್ಚಿಸಲು ಸಹಾಯ ಮಾಡುತ್ತದೆ.
* ಭಾವನಾತ್ಮಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
* ಶ್ವಾಸಕೋಶದ ಕಾರ್ಯವನ್ನು ಸುಧಾರಿಸಿ, ಉಸಿರಾಟವನ್ನು ಸುಗಮಗೊಳಿಸುತ್ತದೆ.
* ತಲೆನೋವು ಮತ್ತು ಮೈಗ್ರೇನ್‌ನ ತೀವ್ರತೆಯನ್ನು ಕಡಿಮೆ ಮಾಡುತ್ತದೆ. (ಏಜೆನ್ಸೀಸ್)