

ತೀರ್ಥಹಳ್ಳಿ: ದೇಶದ ಶೇ.25ರಷ್ಟು ಜನರಿಗೆ ಮಾನಸಿಕ ರೋಗದ ಚಿಕಿತ್ಸೆಗೆ ಸರಿಯಾದ ಔಷಧಗಳು ದೊರೆಯುತ್ತಿಲ್ಲ್ಲ. ಆದರೆ ತೀರ್ಥಹಳ್ಳಿಯಲ್ಲಿ ಶೇ.100ರಷ್ಟು ಚಿಕಿತ್ಸೆ, ಪುನರ್ವಸತಿ, ಔಷಧ ಉತ್ತಮವಾಗಿ ಪೂರೈಕೆಯಾಗುತ್ತಿದೆ ಎಂದು ರಾಷ್ಟ್ರೀಯ ವೈದ್ಯಕೀಯ ಆಯೋಗದ ಅಧ್ಯಕ್ಷ ಡಾ. ಬಿ.ಎನ್.ಗಂಗಾಧರ್ ಹೇಳಿದರು.
ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್), ಮನೋವೈದ್ಯಕೀಯ ವಿಭಾಗ ಶಿವಮೊಗ್ಗ, ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಿಂದ ಮಂಗಳವಾರ ಸರ್ಕಾರಿ ಜೆ.ಸಿ. ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಯೋಗ ಆಧಾರಿತ ವಿಸ್ತರಣಾ ಸೇವೆಗಳಿಗೆ ಚಾಲನೆ (ಯೆಸ್) ಮತ್ತು ಸಮುದಾಯದ ಮಾನಸಿಕ ಆರೋಗ್ಯ ಸೇವೆಗಳ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚಿಕಿತ್ಸೆ, ಮಾತ್ರೆ, ಔಷಧಗಳನ್ನು ಮೀರಿ ಆರೋಗ್ಯ ಸುಧಾರಿಸಿಕೊಳ್ಳುವ ಅಗತ್ಯ ಇದೆ. ಅತ್ಯಂತ ಆರೋಗ್ಯವಂತರಾಗಿ ಬಾಳಲು ಯೋಗ ಮುಖ್ಯ. 20 ವರ್ಷಗಳ ಹಿಂದೆ ಆರಗ ಜ್ಞಾನೇಂದ್ರ ಘಟಕ ಆರಂಭಿಸಲು ಸಹಕಾರ ನೀಡಿದ್ದಾರೆ. ಅದನ್ನು ಮರೆಯುವಂತಿಲ್ಲ ಎಂದರು.
ಐಸಿಎಂಆರ್ ಮಹಾನಿರ್ದೇಶಕ ಡಾ. ರಾಜೀವ್ ಬಹೆಲ್ ಮಾತನಾಡಿ, ಗ್ರಾಮೀಣ ಭಾಗಗಳಿಗೂ ಮಾನಸಿಕ ಆರೋಗ್ಯ ಸಿಗಬೇಕು. ಹಳ್ಳಿಗಳಲ್ಲಿ ಬಹಳಷ್ಟು ಜನ ಚಿಕಿತ್ಸೆಯಿಂದ ವಂಚಿತರಾಗಿದ್ದಾರೆ. ಇಂತಹ ಕಾರ್ಯಕ್ರಮಗಳಿಂದ ಸಮುದಾಯದ ಬೆಳವಣಿಗೆ ಸಾಧ್ಯ. ಆರ್ಥಿಕ, ಸಾಮಾಜಿಕ ಭದ್ರತೆಗೆ ಸಹಕಾರಿಯಾಗಿದೆ ಎಂದು ಹೇಳಿದರು.
ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಯೋಗಾಭ್ಯಾಸದಿಂದ ರೋಗಗಳಿಂದ ದೂರಿವಿರಲು ಸಾಧ್ಯ. ರೋಗಿಗಳ ಮಾನಸಿಕ ಸದೃಢತೆಗೆ, ಪರಿವರ್ತನೆಗೆ ಯೋಗ ಪ್ರಮುಖ ವಾಹಕ. ನರೇಂದ್ರ ಮೋದಿ ದೇಶವನ್ನು ಮಾನಸಿಕ, ದೈಹಿಕವಾಗಿ ಕಟ್ಟುತ್ತಿದ್ದಾರೆ. ಹಿಂದೆ ಶಾಸಕನಾಗಿ ಪ್ರಾಯೋಗಿಕ ಯೋಜನೆ ಆರಂಭಿಸುವಂತೆ ವಿನಂತಿಸಿದ್ದೆ. ಅದರ ಲವಾಗಿ ಇಂದು ಸುಮಾರು 485ಕ್ಕೂ ಹೆಚ್ಚು ತೀವ್ರ ತರಹದ, ಐದು ಸಾವಿರಕ್ಕಿಂತ ಹೆಚ್ಚು ಅಲ್ಪ ಪ್ರಮಾಣದ ಮಾನಸಿಕ ರೋಗಿಗಳಿಗೆ ನೆರವಾಗಿದೆ ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್, ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ ಡಾ. ಟಿ.ಡಿ.ತಿಮ್ಮಪ್ಪ, ನಿಮ್ಹಾನ್ಸ್ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ಜಗದೀಶ, ಜಿಲ್ಲಾ ಮಾನಸಿಕ ಆರೋಗ್ಯಾಧಿಕಾರಿ ಡಾ. ಕಿರಣ್, ಮೆಗ್ಗಾನ್ ಮನೋವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ರಾಮ್‌ಪ್ರಸಾದ್, ತಾಲೂಕು ವೈದ್ಯಾಧಿಕಾರಿ ಡಾ. ಕೆ.ಟಿ.ಅನಿಕೇತ್, ವೈದ್ಯಾಧಿಕಾರಿ ಡಾ. ಗಣೇಶ್ ಭಟ್, ಡಾ. ಅರುಣಾಚಲ ಇತರರಿದ್ದರು.