ಯೋಗಕ್ಷೇಮ: ತೂಕ ಇಳಿಕೆಗೆ ಯೋಗದ ಪರಿಹಾರ

Sudina-2
Published on

ನಾನು ಎರಡು ವರ್ಷಗಳಿಂದ ಪಿ.ಸಿ.ಓ.ಎಸ್. ಸಮಸ್ಯೆಯಿಂದ ಬಳಲುತ್ತಿದ್ದೇನೆ. ಅದಕ್ಕೆ ಹಾಗೂ ನನ್ನ ತೂಕ ಇಳಿಕೆಗೆ ಯೋಗದ ಪರಿಹಾರ ತಿಳಿಸಿ.

| ಭಾರತಿ 48 ವರ್ಷ, ಬೆಂಗಳೂರು

ಪಿ ಸಿ ಓ ಎಸ್ ಪಾಲಿಸಿಸ್ಟಿಕ್ ಅಂಡಾಶಯದ ಸಿಂಡ್ರೋಮ್ ಸಂಕ್ಷಿಪ್ತ ರೂಪವಾಗಿದೆ. ಇದರಿಂದ ಇತರ ಆರೋಗ್ಯ ತೊಡಕುಗಳು, ಬೊಜ್ಜು, ಮಧುಮೇಹ, ಮಾನಸಿಕ ಅಸ್ವಸ್ಥತೆ ಇತ್ಯಾದಿಗಳು ಉಂಟಾಗುತ್ತವೆ. ಒತ್ತಡ ಮತ್ತು ಆತಂಕಗಳು ಪಿ.ಸಿ.ಓ.ಎಸ್.ನ ಪ್ರಮುಖ ಪರಿಣಾಮಗಳು ಎಂದು ಹೇಳಲಾಗುತ್ತದೆ. ಕೆಲವು ಅಧ್ಯಯನಗಳು ಇದನ್ನು ಮಾನಸಿಕ ಅಸ್ವಸ್ಥತೆ ಎಂದೂ ಕರೆಯುತ್ತವೆ.

ಅನಾರೋಗ್ಯಕರ ಜೀವನಶೈಲಿ ಅದನ್ನು ಇನ್ನಷ್ಟು ಹದಗೆಡಿಸುತ್ತದೆ. ಪಿ.ಸಿ.ಓ.ಎಸ್. ಹೊಂದಿರುವ ಮಹಿಳೆಯರಿಗೆ ಲೈಂಗಿಕ ಹಾರ್ಮೋನು ಗಳನ್ನು ಸುಧಾರಿಸಲು ಮತ್ತು ಮುಟ್ಟಿನ ಚಕ್ರಗಳನ್ನು ನಿಯಂತ್ರಿಸಲು ಯೋಗ ಸಹಕಾರಿಯಾಗುತ್ತದೆ. ಆರಂಭದಲ್ಲಿ ನಿರಂತರವಾಗಿ ಹನ್ನೆರಡು ವಾರಗಳವರೆಗೆ ಸೂಚಿತ ಆಸನ, ಪ್ರಾಣಾಯಾಮ, ಧ್ಯಾನವನ್ನು ಅಭ್ಯಾಸ ಮಾಡಿದಾಗ ಮುಟ್ಟಿನ ಆವರ್ತನದಲ್ಲಿ ಸುಧಾರಣೆಗಳನ್ನು ಕಾಣಬಹುದು.

ಪಿ.ಸಿ.ಓ.ಎಸ್. ಹೊಂದಿರುವ ಮಹಿಳೆಯರಲ್ಲಿ ಇನ್ಸುಲಿನ್ ಮತ್ತು ಕೊಲೆಸ್ಟರಾಲ್ ಮಟ್ಟಗಳ ಮೇಲೆ ಯೋಗವು ಸಕಾರಾತ್ಮಕ ಪರಿಣಾಮ ಬೀರುತ್ತದೆ ಹಾಗೂ ಬೊಜ್ಜು ಕರಗಲು ಸಹಾಯ ಮಾಡುತ್ತದೆ. ಯೋಗ ಮತ್ತು ಧ್ಯಾನಗಳು ಮನಸ್ಸು ಮತ್ತು ದೇಹ ಎರಡರ ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಹೆಚ್ಚಿಸುವ ಅದ್ಭುತ ಸಾಧನಗಳಾಗಿವೆ. ಪಿ.ಸಿ.ಓ.ಎಸ್. ತಡೆಗಟ್ಟುವಲ್ಲಿ ಮತ್ತು ನಿಯಂತ್ರಿಸುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತದೆ.

ಆರಂಭದ ಸರಳ ಆಸನಗಳು: ಹಲಾಸನ, ಚಕ್ರಾಸನ, ಶಲಭಾಸನ, ಶಶಾಂಕಾಸನ, ಭುಜಂಗಾಸನ, ಧನುರಾಸನ, ಪಾದಹಸ್ತಾಸನ, ಮಾರ್ಜಾಲಾಸನ, ಅರ್ಧಚಕ್ರಾಸನ, ಮಂಡೂಕಾಸನ, ಜಾನುಶೀರ್ಷಾಸನ, ಪಾರ್ಶ್ವಕೋಣಾಸನ, ಬದ್ಧಕೋಣಾಸನ, ಜಠರ ಪರಿವರ್ತನಾಸನ, ಸೇತುಬಂಧ, ವಿಪರೀತಕರಣೀ, ಊರ್ಧ್ವಪ್ರಸಾರಿತ ಪಾದೋತ್ಥಾನಾಸನ, ಶವಾಸನ ಅಭ್ಯಾಸ ಮಾಡಿ.

ಒಮ್ಮೆ ವೈದ್ಯರೊಂದಿಗೆ ಸಮಾಲೋಚಿಸಿ. ಪೋಷಕಾಂಶಗಳಿಂದ ಕೂಡಿದ ಮಿತ ಆಹಾರ, ದೇಹದ ಶುದ್ಧೀಕರಣ ಕ್ರಿಯೆಗೆ ಒತ್ತು ನೀಡಿ. ಉತ್ತಮ ಆಲೋಚನೆಗಳೊಂದಿಗೆ ಸಂತೋಷವಾಗಿರಲು ಪ್ರಯತ್ನಿಸಿ.

ಆರಂಭದಲ್ಲಿ ನನಗೆ ಸಣ್ಣ ಮಟ್ಟದಲ್ಲಿ ಧ್ಯಾನ ಮಾಡಲು ಆಸಕ್ತಿ ಇದೆ. ಹೇಗೆ ಅಭ್ಯಾಸ ಮಾಡಬಹುದು?

| ಭರತ್ 20 ವರ್ಷ, ಕುಂದಾಪುರ

ಧ್ಯಾನದ ಅಭ್ಯಾಸವು ಅಂಟಿಕೊಳ್ಳಬೇಕೆಂದು ಬಯಸಿದರೆ ನೀವು ಸರಳವಾಗಿ ಪ್ರಾರಂಭಿಸಿ. ಆರಂಭದಲ್ಲಿ ದಿನಕ್ಕೆ ಕೇವಲ ಎರಡು ನಿಮಿಷ ಬದ್ಧರಾಗಿರಿ. ಮುಂಜಾನೆ ಅಭ್ಯಾಸ ಮಾಡಿ. ಶಾಂತ ಸ್ಥಳವನ್ನು ಹುಡುಕಿ. ಆರಾಮವಾಗಿ ಕುಳಿತುಕೊಳ್ಳಿ. ಬೆನ್ನು, ಕುತ್ತಿಗೆ ನೇರ ಮಾಡಿ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಚಿನ್ಮುದ್ರೆ ಧಾರಣೆ ಮಾಡಿ ಕಣ್ಣು ಮುಚ್ಚಿ ಕೇವಲ ಎರಡು ನಿಮಿಷಗಳ ಸಾಮಾನ್ಯ ಉಸಿರಾಟವನ್ನು ಗಮನಿಸುತ್ತ ಇರಿ. ಕೆಲವು ವಾರದ ನಂತರ ಅವಧಿ ಹೆಚ್ಚಿಸಿ. ಗುರುಮಾರ್ಗದಲ್ಲಿ ಧ್ಯಾನವನ್ನು ಆರಂಭಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net